AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಪರ ವಕೀಲರ ಎಲ್ಲ ಪ್ರಶ್ನೆಗಳಿಗೂ ಎಸ್​ಪಿಪಿ ಪ್ರಸನ್ನ ಕುಮಾರ್ ಉತ್ತರ

Darshan Thoogudeepa bail: ದರ್ಶನ್ ಪರ ವಕೀಲ ಸಿವಿ ನಾಗೇಶ್ ಎತ್ತಿದ್ದ ಪ್ರಶ್ನೆಗಳಿಗೆ, ಅನುಮಾನಗಳಿಗೆ ತಕ್ಕ ಉತ್ತರವನ್ನು ಎಸ್​ಪಿಪಿ ಪ್ರಸನ್ನ ಕುಮಾರ್ ಇಂದು ನ್ಯಾಯಾಲಯದಲ್ಲಿ ಕೊಟ್ಟರು. ಎಸ್​ಪಿಪಿ ಪ್ರಸನ್ನ ಕುಮಾರ್ ಅವರ ವಾದದ ಮುಖ್ಯಾಂಶಗಳು ಇಲ್ಲಿವೆ.

ದರ್ಶನ್ ಪರ ವಕೀಲರ ಎಲ್ಲ ಪ್ರಶ್ನೆಗಳಿಗೂ ಎಸ್​ಪಿಪಿ ಪ್ರಸನ್ನ ಕುಮಾರ್ ಉತ್ತರ
Ramesha M
| Updated By: ಮಂಜುನಾಥ ಸಿ.

Updated on:Oct 09, 2024 | 6:15 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್, ಪವಿತ್ರಾ ಹಾಗೂ ಇತರೆ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ 57ನೇ ಸಿಸಿಎಚ್​ ನ್ಯಾಯಾಲಯದಲ್ಲಿ ಕಳೆದೊಂದು ವಾರದಿಂದಲೂ ನಡೆಯುತ್ತಿದೆ. ದರ್ಶನ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿವಿ ನಾಗೇಶ್, ಪ್ರಕರಣದ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಪೊಲೀಸರ ತನಿಖೆಯಲ್ಲಿ ಲೋಪವಿದೆಯೆಂದು, ಪೊಲೀಸರು ಉದ್ದೇಶಪೂರ್ವಕವಾಗಿ ಸಾಕ್ಷ್ಯಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ವಾದಿಸಿದ್ದರು. ಪೊಲೀಸರ ತನಿಖೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಇದಕ್ಕೆ ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ಉತ್ತರ ನೀಡಿದ್ದಾರೆ. ಪ್ರಸನ್ನ ಅವರು ಇಂದು ನ್ಯಾಯಾಲಯದಲ್ಲಿ ಮಂಡಿಸಿದ ವಾದ ಸರಣಿಯ ಮುಖ್ಯಾಂಶಗಳು ಇಲ್ಲಿವೆ.

ಸೆಕ್ಷನ್ 164ರ ಅಡಿಯಲ್ಲಿ ದಾಖಲಿಸಿರುವ ಸಾಕ್ಷ್ಯಗಳ ಹೇಳಿಕೆ ಬಗ್ಗೆ ದರ್ಶನ್ ಪರ ವಕೀಲರು ಅನುಮಾನ ವ್ಯಕ್ತಪಡಿಸಿದ್ದರು. ಅದಕ್ಕೆ ಉತ್ತರಿಸಿರುವ ಪ್ರಸನ್ನ ಕುಮಾರ್, ‘ಸಾಕ್ಷಿಗಳಾದ 76, 77, 78, 79 ಶೆಡ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ, ಇವರೆಲ್ಲರ ಮೊಬೈಲ್ ಟವರ್ ಲೊಕೇಷನ್ ಪಟ್ಟಣಗೆರೆ ಶೆಡ್‌ ಬಳಿ ಸಿಕ್ಕಿದೆ, ಕೃತ್ಯ ನಡೆದ ದಿನ, ಸಮಯದಲ್ಲಿ ಅವರು ಅಲ್ಲಿಯೇ ಇದ್ದರು ಎಂಬುದಕ್ಕೆ ಇದೇ ಸಾಕ್ಷಿ. ಕಾಲ್ ಡಿಟೇಲ್ಸ್‌ ರೆಕಾರ್ಡ್ಸ್ ಕೂಡಾ ಇವರೆಲ್ಲಾ ಅಲ್ಲೇ ಇದ್ದಿದ್ದಕ್ಕೆ ಪುರಾವೆಗಳಾಗಿವೆ. ಬ್ಲಾಕ್ ಕಲರ್ ಸ್ಕಾರ್ಪಿಯೋದಲ್ಲಿ ದರ್ಶನ್, ಪವಿತ್ರಾಗೌಡ ಬಂದಿದ್ದು, ದರ್ಶನ್ ರೇಣುಕಾಸ್ವಾಮಿ ಎದೆಗೆ ಒದ್ದಿರುವ ಬಗ್ಗೆ, ಮರ್ಮಾಂಗಕ್ಕೂ ಒದ್ದಿರುವುದಾಗಿ ಹೇಳಿಕೆ ನೀಡಿದ್ದಾರೆ. 69ನೇ ಸಾಕ್ಷಿಧಾರನಿಗೆ ಕನ್ನಡ ಬರುವುದಿಲ್ಲ ಹಾಗಾಗಿ ಆತನ ಹೇಳಿಕೆಯನ್ನು ಕನ್ನಡದಲ್ಲಿ ಅನುವಾದಿಸಿ ದಾಖಲಿಸಲಾಗಿದೆ’ ಎಂದಿದ್ದಾರೆ.

ಪಿಎಸ್​ಐ ವಿನಯ್​ಗೆ ಪ್ರಕರಣದ ಬಗ್ಗೆ ಮೊದಲೇ ಮಾಹಿತಿ ಇತ್ತು ಹಾಗಿದ್ದರೂ ಸಹ ಅವರು ಕ್ರಮ ಕೈಗೊಳ್ಳದೆ ಸಾಕ್ಷ್ಯಗಳನ್ನು ತಿರುಚಲು ಕಾಲಹರಣ ಮಾಡಿದರು ಎಂದು ಸಿವಿ ನಾಗೇಶ್ ಆರೋಪಿಸಿದ್ದರು. ಪಿಎಸ್​ಐ ವಿನಯ್​ ಹೇಳಿಕೆಯನ್ನು ಓದಿ ಹೇಳಿದ ಪ್ರಸನ್ನ ಕುಮಾರ್, ಆರೋಪಿ ಪ್ರದೋಶ್ ಜೂನ್ 9 ರಂದು ಕರೆ ಮಾಡಿ ಒಂದು ಗಲಾಟೆ ಆಗಿದೆ, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ, ಸಲಹೆ ಕೊಡಿ ಎಂದಿದ್ದಾರೆ. ಅದಕ್ಕೆ ಪಿಎಸ್​ಐ ವಿನಯ್, ಸಮೀಪದ ಠಾಣೆಯಲ್ಲಿ ಸರೆಂಡರ್ ಮಾಡಿಸುವಂತೆ ಹೇಳಿದ್ದಾರೆ. ಆದರೆ ಕೃತ್ಯ ನಡೆದ ಸ್ಥಳ ಆಗ ಹೇಳಿರಲಿಲ್ಲ. ಬಳಿಕ ಜೂನ್ 10 ರಂದು ಕರೆ ಮಾಡಿ ಸುಮ್ಮನಹಳ್ಳಿ ಮೋರಿ ಬಳಿ ಕೃತ್ಯ ಆಗಿದೆಯೆಂದಿದ್ದಾರೆ. ಆಗ ವಿನಯ್, ಕೃತ್ಯ ನಡೆದ ಸ್ಥಳದ ಫೋಟೊವನ್ನು ಪ್ರದೋಷ್​ಗೆ ಕಳಿಸಿದ್ದಾರೆ. ಬಳಿಕ ಸ್ಕಾರ್ಪಿಯೋ ಬಂದ ಸಿಸಿಟಿವಿ ವಿಡಿಯೋವನ್ನು ಕಳಿಸಿದ್ದಾರೆ. ಆದರೆ ಆಗಲೂ ಸಹ ಕೃತ್ಯ ಎಲ್ಲಿ ನಡೆದಿದೆ ಎಂದು ಗೊತ್ತಿರಲಿಲ್ಲ, ಹಾಗೂ ಯಾರು ಮಾಡಿದ್ದಾರೆ ಎಂಬುದು ಗೊತ್ತಿರಲಿಲ್ಲ’ ಎಂದು ಪ್ರಸನ್ನ ವಾದ ಮಾಡಿದ್ದಾರೆ.

ಇದನ್ನೂ ಓದಿ:ನ್ಯಾಯಾಲಯದಲ್ಲಿ ದರ್ಶನ್ ರಕ್ತ ಚರಿತ್ರೆ ಬಿಚ್ಚಿಟ್ಟ ಎಸ್​ಪಿಪಿ ಪ್ರಸನ್ನ ಕುಮಾರ್

ಆರೋಪಿಗಳನ್ನು ಬಂಧಿಸಲು ಮತ್ತು ಅವರನ್ನು ಕರೆದೊಯ್ದು ಶೆಡ್​ನಲ್ಲಿ ಮಹಜರು ಮಾಡಲು ತಡ ಮಾಡಿದ್ದಾರೆ ಎಂದು ದರ್ಶನ್ ಪರ ವಕೀಲರು ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರಸನ್ನ ಕುಮಾರ್, ‘ಜೂನ್ 10 ರಂದು ಶವ ಸಿಕ್ಕಿತು. ಅದಾದ ಬಳಿಕ ಎಫ್​ಐಆರ್ ದಾಖಲಾಗಿದೆ. ಮಧ್ಯಾಹ್ನದ ವೇಳೆಗೆ ಆರೋಪಿಗಳಾದ ಎ 15, 16, 17 ಸರೆಂಡರ್ ಆದರು. ಅದೇ ದಿನ ಇನ್ಸ್ ಪೆಕ್ಟರ್ ಅವರನ್ನು ವಿಚಾರಣೆಗೆ ಒಳಪಡಿಸಿದರು. ರಾತ್ರಿ 10 ಗಂಟೆಗೆ ಕೊಂದವರು ಇವರಲ್ಲ ಎಂಬುದು ತಿಳಿಯಿತು. ಮಾರನೇಯ ದಿನ ಜೂನ್ 11 ರಂದು ಬೆಳಿಗ್ಗೆ 8 ಗಂಟೆಗೆ ದರ್ಶನ್ ಅನ್ನು ಬಂಧಿಸಲಾಯ್ತು. ಅಂದು ದರ್ಶನ್ ಅನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆತಂದು ವಿಚಾರಣೆ ಮಾಡಲಾಯ್ತು. ಇತರೆ ಕೆಲ ಆರೋಪಿಗಳನ್ನು ಅಂದೇ ಬಂಧಿಸಲಾಯ್ತು. ಅದಾದ ಬಳಿಕ ಜೂನ್ 12 ರಂದು ಶೆಡ್​ಗೆ ಕರೆದೊಯ್ದು ಮಹಜರು ಮಾಡಲಾಯ್ತು, ಜೂನ್ 13 ರಂದು ಶೆಡ್​ನ ಕಾವಲಿದ್ದವರ ವಿಚಾರಣೆ ಮಾಡಲಾಯ್ತು’ ಎಂದಿದ್ದಾರೆ.

ಷೆಡ್​ನಲ್ಲಿ ವಶಪಡಿಸಿಕೊಳ್ಳಲಾಗಿರುವ ಮರದ ಕೊಂಬೆಗಳಲ್ಲಿ ರಕ್ತದ ಕಲೆಗಳಿಲ್ಲ ಎಂದು ಸಿವಿ ನಾಗೇಶ್ ವಾದಿಸಿದ್ದರು. ಇದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್, ಕೊಲೆ ನಡೆದ ಸ್ಥಳದಲ್ಲಿ 96 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೊ ಒಂದೆರಡು ಮರದ ಕೊಂಬೆಗಳಲ್ಲಿ ರಕ್ತದ ಕಲೆ ಇಲ್ಲ ಎಂದ ಮಾತ್ರಕ್ಕೆ ಮಹಜರು ಅನರ್ಹ ಎನ್ನಲಾಗುವುದಿಲ್ಲ ಎಂದು ಪ್ರತಿವಾದಿಸಿದರು. ಆರೋಪಿಗಳು ದರ್ಶನ್​ಗೆ ಪರಿಚಿತರು ಹಾಗಾಗಿ ಅವರ ಕಾಲ್ ರೆಕಾರ್ಡ್ಸ್​ಗೆ ಮಹತ್ವ ನೀಡಬಾರದು ಎಂದು ನಾಗೇಶ್ ವಾದಿಸಿದ್ದರು. ಆದರೆ ಸುಪ್ರೀಂಕೋರ್ಟ್​ನ ಕೆಲ ತೀರ್ಪುಗಳನ್ನು ಉಲ್ಲೇಖಿಸಿದ ಪ್ರಸನ್ನ ಕುಮಾರ್ ಕಾಲ್ ರೆಕಾರ್ಡ್ಸ್​ ಅತ್ಯಂತ ಮಹತ್ವದ್ದು ಎಂದು ನ್ಯಾಯಾಲಯಕ್ಕೆ ಮನದಟ್ಟು ಮಾಡಿದರು.

ಸಾಕ್ಷಿಗಳ ಹೇಳಿಕೆ ದಾಖಲಿಸಲು ವಿಳಂಬವೇಕೆಂದು ಪ್ರಶ್ನಿಸಲಾಗಿತ್ತು, ಸಾಕ್ಷಿಗಳಾದ ಕಿರಣ್ ಪುನೀತ್ ಮಲ್ಲಿಕಾರ್ಜುನ್ ನರೇಂದ್ರ ಸಿಂಗ್ ಟವರ್ ಲೊಕೇಷನ್ ಕೃತ್ಯದ ಸ್ಥಳದಲ್ಲಿದೆ. ಆದರೆ ಘಟನೆಯ ನಂತರ ಒಬ್ಬ ಸಾಕ್ಷಿ ಭಯದಿಂದ ಪರಾರಿಯಾಗಿದ್ದ, ಮೊದಲು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ ಅಲ್ಲಿಂದ ಜೂನ್ 10 ರಂದು ಸಾಕ್ಷಿ ಬೆಂಗಳೂರಿಗೆ ಹಿಂತಿರುಗಿದ್ದ, ಬಳಿಕ ಜೂನ್ 11 ರಂದು ಕಬ್ಬಾಳಿಗೆ ಹೋಗಿದ್ದ, ಜೂನ್ 12 ರಂದು ಹಾಸನ, ನಂತರ 16 ರವರೆಗೆ ಗೋವಾ ದಲ್ಲಿದ್ದ, ಜೂನ್ 16 ಕ್ಕೆ ತಿರುಪತಿಗೆ ಹೋಗಿದ್ದ. ಜೂನ್ 19 ರಂದು ಹುಬ್ಬಳ್ಳಿಗೆ ತೆರಳಿ ಬೆಂಗಳೂರಿಗೆ ಜೂನ್ 20 ರಂದು ಮರಳಿದ್ದ, ಕೂಡಲೇ ಅವನ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದರು ಪ್ರಸನ್ನ ಕುಮಾರ್.

ಇದನ್ನೂ ಓದಿ:ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.10ಕ್ಕೆ, ಪವಿತ್ರಾ ಅರ್ಜಿ ಅ.14ಕ್ಕೆ ಮುಂದೂಡಿಕೆ

ರೇಣುಕಾ ಸ್ವಾಮಿ ಶವದ ಮಹಜರು, ಮರಣೋತ್ತರ ಪರೀಕ್ಷೆಯಲ್ಲಿ ವಿಳಂಬ ಮಾಡಲಾಗಿದೆ ಎಂದು ವಾದಿಸಲಾಗಿದೆ. ಮಹಜರು, ಮರಣೋತ್ತರ ಪರೀಕ್ಷೆ ಮಾಡುವಾಗ ಸಂಬಂಧಿಗಳು ಇರಬೇಕೆಂಬ ನಿಯಮ ಇದೆ. ಆ ಕಾರಣದಿಂದ ತಡವಾಗಿದೆ. ಆದರೆ ತಡವಾಗಿ ಮರಣೋತ್ತರ ಪರೀಕ್ಷೆ ಮಾಡಿರುವುದರಿಂದ ತನಿಖೆಗೆ ಸಮಸ್ಯೆ ಆಗಿಲ್ಲ. ಮುಖದ ಮೇಲಿದ್ದಿದ್ದು ಮಾತ್ರವೇ ನಾಯಿ ಕಚ್ಚಿದ ಗುರುತು ಇನ್ನುಳಿದ 13 ಗಾಯಗಳು ಮರಣಕ್ಕೆ ಪೂರ್ವದ್ದು ಎಂದು ವರದಿ ಹೇಳಿದೆ.

ದರ್ಶನ್ ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ದರ್ಶನ್ ಮನೆಯಲ್ಲಿ ಸೀಜ್ ಮಾಡಲಾದ 40 ಲಕ್ಷ ರೂಪಾಯಿ ಹಣವನ್ನು ಸಾಕ್ಷ್ಯಗಳನ್ನು ತಿರುಚಲು ಇಟ್ಟುಕೊಂಡಿದ್ದಾಗಿ ಸ್ವತಃ ದರ್ಶನ್ ಹೇಳಿಕೆ ನೀಡಿದ್ದಾರೆ. ಇನ್ನು ದರ್ಶನ್​ಗೆ ರೇಣುಕಾ ಸ್ವಾಮಿ ಬಗ್ಗೆ ಗೊತ್ತೇ ಇರಲಿಲ್ಲ ಎಂದಿದ್ದಾರೆ. ಆದರೆ ಇತರೆ ಆರೋಪಿಗಳ ನೀಡಿರುವ ಹೇಳಿಕೆ ಗಮನಿಸಿದರೆ ಗೊತ್ತಾಗುತ್ತದೆ ರೇಣುಕಾ ಸ್ವಾಮಿ ಬಗ್ಗೆ ದರ್ಶನ್​ಗೆ ಗೊತ್ತಿತ್ತು ಎಂದು, ‘ನನ್ನ ಹೆಂಡತಿಯನ್ನು ಗೋವಾಕ್ಕೆ ಕರೆದುಕೊಂಡು ಹೋಗ್ತೀಯ’ ಎಂದು ಹೇಳಿ ದರ್ಶನ್ ಹೊಡೆದಿದ್ದಾರೆ. ಇನ್ನು ಆರೋಪಿಗಳು ಸ್ಟೋನಿ ಬ್ರೂಕ್​ನಲ್ಲಿ ಊಟಕ್ಕೆ ಸೇರಿದ್ದರು ಎನ್ನಲಾಗಿದೆ. ಹೌದು, ಅಲ್ಲಿ ಷಡ್ಯಂತ್ರ ನಡೆದಿಲ್ಲ ಆದರೆ ಅದಾದ ಬಳಿಕ, ಕೆಲವರ ನಡುವೆ ಷಡ್ಯಂತ್ರ ನಡೆದಿದೆ. ಎಲ್ಲ ಸಮಯದಲ್ಲಿ ಎಲ್ಲರಿಗೂ ಷಡ್ಯಂತ್ರದ ಮಾಹಿತಿ ಇರಬೇಕೆಂದಿಲ್ಲ ಎಂದಿದ್ದಾರೆ ಪ್ರಸನ್ನ ಕುಮಾರ್.

ಅಂತಿಮವಾಗಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8 ರವಿಶಂಕರ್, ಎ11 ನಾಗರಾಜು, ಎ12 ಲಕ್ಷ್ಮಣ್‌ಗೆ ಜಾಮೀನು ನೀಡಬಾರದು. ಎ13 ದೀಪಕ್ ವಿರುದ್ಧ ಕೊಲೆ ಆರೋಪವಿಲ್ಲ, ಅಪಹರಣದ ಆರೋಪವೂ ಇಲ್ಲ, ಹೀಗಾಗಿ ಜಾಮೀನು ನೀಡಬಹುದು, ಸಾಕ್ಷ್ಯ ನಾಶದ ಆರೋಪ ಮಾತ್ರ ಎ13 ದೀಪಕ್ ಮೇಲಿದೆ ಅದು ಜಾಮೀನು ನೀಡಬಹುದಾದ ಅಪರಾಧ ಎಂದು ಹೇಳಿ ತಮ್ಮ ವಾದ ಮುಗಿಸಿದರು. ದರ್ಶನ್ ಪರ ವಕೀಲ ಸಿವಿ ನಾಗೇಶ್ ನಾಳೆ (ಅಕ್ಟೋಬರ್ 14) ಪ್ರತಿವಾದ ಮಂಡಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:57 pm, Wed, 9 October 24

ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಇಬ್ಬರು ದಿಗ್ಗಜರ ಬೌಲಿಂಗ್ ಶೈಲಿಯನ್ನು ನಕಲು ಮಾಡಿದ ಕಿಶನ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
ಸಿಎಂ ವಿರುದ್ಧ ಬರ್ಮಣಿ ದೂರು ಸಲ್ಲಿಸಿದ್ದರೆ ಚೆನ್ನಾಗಿರುತಿತ್ತು: ಯತ್ನಾಳ್
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
‘ರಾಮಾಯಣ’ ಗ್ಲಿಂಪ್ಸ್ ನೋಡಿದ ಅಭಿಮಾನಿಗಳು ಹೇಳಿದ್ದೇನು? ವಿಡಿಯೋ ನೋಡಿ
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಎಕ್ಸ್​ಟ್ರಾ ಕಾಫಿ ಕಪ್​ಗಾಗಿ ಗಲಾಟೆ: ಹೋಟೆಲ್‌ ಸಿಬ್ಬಂದಿ ಮೇಲೆ ಹಲ್ಲೆ!
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸುಖಾಸುಮ್ಮನೆ ಹೇಳಿಕೆ ನೀಡುವ ರಾಜಕಾರಣಿಗೆ ಯದುವೀರ್ ಮಾದರಿ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಸ್ವಯಂ ನಿವೃತ್ತಿ ಬಗ್ಗೆ ಎಎಸ್​ಪಿ ನಾರಾಯಣ ಭರಮನಿ ಮೊದಲ ಪ್ರತಿಕ್ರಿಯೆ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯಾಘಾತ ಅಪಾಯ ಕಡಿಮೆ: ಡಾ. ಮೋಹಿತ್ ಗುಪ್ತಾ
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?
ಸಂಪುಟ ಸಭೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವುದು ದುಂದು ವೆಚ್ಚವಲ್ಲವೇ?