ದರ್ಶನ್ ಶೂ, ಬಟ್ಟೆಗಳ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ವಕೀಲ
Darshan Thoogudeepa case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ರೋಚಕವಾಗಿ ನಡೆಯುತ್ತಿದೆ. ಕೃತ್ಯ ನಡೆದ ದಿನ ದರ್ಶನ್ ಧರಿಸಿದ್ದ ಶೂ ಮತ್ತು ಬಟ್ಟೆಗಳ ಬಗ್ಗೆ ನ್ಯಾಯಾಲಯದಲ್ಲಿ ಆಸಕ್ತಿಕರ ವಾದ ವಿವಾದ ನಡೆದಿದೆ. ಅದರ ಮಾಹಿತಿ ಇಲ್ಲಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆರೋಪಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ರೋಚಕವಾಗಿ ನಡೆಯುತ್ತಿದೆ. ದರ್ಶನ್ ಪರವಾಗಿ ಹಿರಿಯ ವಕೀಲ ಸಿವಿ ನಾಗೇಶ್ ಕಳೆದ ವಾರ ವಾದ ಮಂಡಿಸಿ ಪ್ರಕರಣದ ತನಿಖೆ ಬಗ್ಗೆ ಕೆಲವು ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದರು. ಅದರಲ್ಲಿ ದರ್ಶನ್ರ ಬಟ್ಟೆ, ಶೂಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ರೀತಿಯ ಬಗ್ಗೆ, ಆರೋಪ ಪಟ್ಟಿಯಲ್ಲಿ ದರ್ಶನ್ ಶೂ ಹಾಗೂ ಬಟ್ಟೆಯ ಮೇಲೆ ಇದೆ ಎಂದು ಪೊಲೀಸರು ಹೇಳಿದ್ದ ರಕ್ತದ ಕಲೆಗಳ ಬಗ್ಗೆ ಕೆಲ ಅನುಮಾನಗಳನ್ನು ವ್ಯಕ್ತಪಡಿಸಿದ್ದರು. ಅದರ ಬಗ್ಗೆ ಎಸ್ಪಿಪಿ ಪ್ರಸನ್ನ ಕುಮಾರ್ ಆಸಕ್ತಿಕರ ವಿಷಯಗಳನ್ನು ನ್ಯಾಯಾಲಯದಲ್ಲಿ ಬಿಚ್ಚಿಟ್ಟಿದ್ದಾರೆ.
ದರ್ಶನ್, ಘಟನೆ ನಡೆದಾಗ ಚಪ್ಪಲಿ ಧರಿಸಿದ್ದ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ನಮೂದಿಸಿದ್ದಾರೆ ಆದರೆ ದರ್ಶನ್ ಮನೆಯಿಂದ ಶೂ ಅನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯ ನಡೆದ ದಿನ ದರ್ಶನ್ ಧರಿಸಿದ್ದ ಬಟ್ಟೆಯ ಮೇಲೆ ರಕ್ತದ ಕಲೆಗಳಿವೆ ಎಂದು ಆರೋಪ ಪಟ್ಟಿಯಲ್ಲಿದೆ. ಆದರೆ ಒಗೆದ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಕ್ಕಿ-ಕುಕ್ಕಿ ಒಗೆದ ಬಟ್ಟೆಗಳಲ್ಲಿ ರಕ್ತದ ಕಲೆ ಹೇಗೆ ಇರಲು ಸಾಧ್ಯ? ಎಂದು ನಾಗೇಶ್ ಪ್ರಶ್ನೆ ಮಾಡಿದ್ದರು.
ಅದಕ್ಕೆ ಇಂದಿನ ವಾದದಲ್ಲಿ ಉತ್ತರ ನೀಡಿದ ಎಸ್ಪಿಪಿ ಪ್ರಸನ್ನ ಕುಮಾರ್, ‘ದರ್ಶನ್ ತಾವು ಚಪ್ಪಲಿ ಧರಿಸಿದ್ದಾಗಿ ಹೇಳಿದ್ದರು, ಆರೋಪಿ ಹೇಳಿದ್ದನ್ನಷ್ಟೆ ನಮೂದಿಸಲಾಗಿದೆ. ಅದಾದ ಬಳಿಕ ಸ್ವತಃ ದರ್ಶನ್ ಅವರೇ ತಾವು ಶೂ ಧರಿಸಿದ್ದಾಗಿ ಹೇಳಿ ತಾವೇ ಆ ಶೂಗಳನ್ನು ಪತ್ನಿಗೆ ಹೇಳಿ ಕೊಡುವಂತೆ ಸೂಚಿಸಿದರು. ಆರೋಪಿ ಹೇಳಿದ್ದನ್ನಷ್ಟೆ ದಾಖಲಿಸುವುದು ನಿಯಮ ಹಾಗಾಗಿ ದರ್ಶನ್ ಚಪ್ಪಲಿ ಧರಿಸಿದ್ದೆ ಎಂದಾಗ ಪೊಲೀಸರು ಅದನ್ನೇ ದಾಖಲಿಸಿದ್ದಾರೆ’ ಎಂದರು ಎಸ್ಪಿಪಿ.
ಇದನ್ನೂ ಓದಿ:ದರ್ಶನ್ ಪರ ವಕೀಲರ ಎಲ್ಲ ಪ್ರಶ್ನೆಗಳಿಗೂ ಎಸ್ಪಿಪಿ ಪ್ರಸನ್ನ ಕುಮಾರ್ ಉತ್ತರ
ಇನ್ನು ರಕ್ತದ ಕಲೆಯ ಬಗ್ಗೆ, ‘ನೀರಿನಲ್ಲಿ ಒಗೆದ ಮಾತ್ರಕ್ಕೆ ರಕ್ತದ ಕಲೆ ಹೋಗುವುದಿಲ್ಲ. 90 ಡಿಗ್ರಿ ಬಿಸಿ ನೀರಿನಲ್ಲಿ ಬಟ್ಟೆ ಒಗೆದರೂ ಸಹ ರಕ್ತದ ಕಲೆ ಉಳಿದಿರುತ್ತದೆ. ಈ ಪ್ರಕರಣದಲ್ಲಿ ದರ್ಶನ್ ಬಟ್ಟೆಗಳನ್ನು ತಣ್ಣೀರಿನಲ್ಲಿ ಒಗೆಯಲಾಗಿತ್ತು, ಹಾಗಾಗಿ ಎಫ್ಎಸ್ಎಲ್ ವರದಿಗೆ ಕಳಿಸಿದಾಗ ಅದರ ಮೇಲೆ ರಕ್ತದ ಕಲೆ ಇದ್ದಿದ್ದು ಪತ್ತೆ ಆಗಿತ್ತು, ಹಾಗೂ ಆ ರಕ್ತ ರೇಣುಕಾ ಸ್ವಾಮಿಯದ್ದೇ ಎಂಬುದು ಸಹ ಖಾತ್ರಿ ಆಗಿದೆ. ಶೂ ಮೇಲೆ ರಕ್ತದ ಕಲೆ ಮಾತ್ರವಲ್ಲದೆ ಶೂನಲ್ಲಿದ್ದ ಮಣ್ಣನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೃತ್ಯ ನಡೆದ ಸ್ಥಳದಲ್ಲಿನ ಮಣ್ಣೇ ಅದಾಗಿದೆಯೆಂದು ಖಾತ್ರಿ ಆಗಿದೆ’ ಎಂದರು.
ವಶಪಡಿಸಿಕೊಂಡಿದ್ದ ಕೆಲವು ಮರದ ತುಂಡುಗಳಲ್ಲಿ ರಕ್ತದ ಕಲೆ ಇಲ್ಲದಿರುವ ಬಗ್ಗೆ ಸಿವಿ ನಾಗೇಶ್ ಹೇಳಿದ್ದರು. ಅದಕ್ಕೆ ಉತ್ತರಿಸಿದ ಪ್ರಸನ್ನ ಕುಮಾರ್, ಕೃತ್ಯ ನಡೆದ ಸ್ಥಳದಲ್ಲಿ 96 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಯಾವುದೋ ಒಂದೆರಡು ವಸ್ತುಗಳಲ್ಲಿ ರಕ್ತದ ಕಲೆ ಇಲ್ಲವೆಂದ ಮಾತ್ರಕ್ಕೆ ಕೃತ್ಯ ನಡೆದಿಲ್ಲ ಎನ್ನಲಾಗದು’ ಎಂದಿದ್ದಾರೆ. ಸಿವಿ ನಾಗೇಶ್ ಅವರು ನಾಳೆ ಮತ್ತೆ ತಮ್ಮ ವಾದ ಮುಂದುವರೆಸಲಿದ್ದಾರೆ. ನಾಳೆ ಸಿವಿ ನಾಗೇಶ್ ಅವರ ವಾದ ಏನಾಗಿರಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ