AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.10ಕ್ಕೆ, ಪವಿತ್ರಾ ಅರ್ಜಿ ಅ.14ಕ್ಕೆ ಮುಂದೂಡಿಕೆ

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 10 ಕ್ಕೆ ಮುಂದೂಡಲಾಯ್ತು. ಇನ್ನು ಪವಿತ್ರಾ ಗೌಡ ಹಾಗೂ ಇತರೆ ನಾಲ್ಕು ಆರೋಪಿಗಳ ಜಾಮೀನು ಅರ್ಜಿಯ ತೀರ್ಪು ಅಕ್ಟೋಬರ್ 14ಕ್ಕೆ ಪ್ರಕಟ ಆಗಲಿದೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.10ಕ್ಕೆ, ಪವಿತ್ರಾ ಅರ್ಜಿ ಅ.14ಕ್ಕೆ ಮುಂದೂಡಿಕೆ
ಮಂಜುನಾಥ ಸಿ.
|

Updated on:Oct 09, 2024 | 5:32 PM

Share

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಕೆಲವು ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯದಲ್ಲಿ ನಡೆದಿದ್ದು, ದರ್ಶನ್​ರ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆ (ಅಕ್ಟೋಬರ್ 10) ಕ್ಕೆ ಮುಂದೂಡಲಾಗಿದೆ. ಪವಿತ್ರಾ ಗೌಡ ಅರ್ಜಿಯ ಸೇರಿದಂತೆ ಇತರೆ ಐದು ಆರೋಪಿಗಳ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 14 ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.

ಆರಂಭದಲ್ಲಿ ವಾದ ಮಂಡಿಸಿದ್ದ ದರ್ಶನ್ ಪರ ವಕೀಲರಾದ ಸಿವಿ ನಾಗೇಶ್, ಪೊಲೀಸರ ತನಿಖೆ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಪೊಲೀಸರೇ ಸಾಕ್ಷ್ಯಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ವಾದಿಸಿದ್ದರು. ಪ್ರಕರಣದ ತನಿಖೆಯಲ್ಲಿ ಸತತವಾಗಿ ತಪ್ಪುಗಳನ್ನು ಮಾಡಿದ್ದಾರೆ ಎಂದಿದ್ದರು. ಆರೋಪ ಪಟ್ಟಿಯನ್ನು ಅರೇಬಿಯನ್ ನೈಟ್ಸ್ ಕತೆಗೆ ಹೋಲಿಸಿದ್ದರು. ಪೊಲೀಸರ ತನಿಖೆಯನ್ನು ಬೀದಿ ಬದಿಯಲ್ಲಿ ಮ್ಯಾಜಿಕ್ ಗೆ ಹೋಲಿಸಿದ್ದರು.

ಸಿವಿ ನಾಗೇಶ್​ರ ವಾದಕ್ಕೆ ಪ್ರತಿವಾದ ಮಂಡಿಸಿದ ಎಸ್​ಪಿಪಿ ಪ್ರಸನ್ನ ಕುಮಾರ್, ನಿನ್ನೆ ಮಂಡಿಸಿದ ವಾದದಲ್ಲಿ ನಾಗೇಶ್​ ಅವರು ಎತ್ತಿದ್ದ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದರು. ರೇಣುಕಾ ಸ್ವಾಮಿಯನ್ನು ಹೇಗೆ ಆರೋಪಿಗಳು ಟ್ರ್ಯಾಪ್ ಮಾಡಿದರು. ಹೇಗೆ ಆತನನ್ನು ಅಪಹರಣ ಮಾಡಿದರು, ಪಟ್ಟಣಗೆರೆ ಶೆಡ್​ನಲ್ಲಿ ದರ್ಶನ್ ಮತ್ತು ಗ್ಯಾಂಗ್​ ಹೇಗೆ ರೇಣುಕಾ ಸ್ವಾಮಿ ಮೇಲೆ ಕ್ರೂರತೆ ಮೆರೆದರು ಎಂದು ನ್ಯಾಯಾಲಯದ ಮುಂದೆ ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದರು.

ಇಂದು (ಅಕ್ಟೋಬರ್ 09) ರಂದು ವಾದ ಮುಂದುವರೆಸಿದ ಪ್ರಸನ್ನ ಕುಮಾರ್ ಅವರು, ದರ್ಶನ್ ಮನೆಯಿಂದ ವಶಪಡಿಸಿಕೊಂಡ ವಸ್ತುಗಳು, ಅವುಗಳ ಮೇಲಿದ್ದ ರಕ್ತದ ಕಲೆ, ಸಾಕ್ಷ್ಯಗಳ ಹೇಳಿಕೆ ದಾಖಲಿಸಲು ವಿಳಂಬ ಆಗಿದ್ದಕ್ಕೆ ಕಾರಣ. ಎಫ್​ಎಸ್​ಎಲ್ ವರದಿಗಳು, ಅವುಗಳ ಸತ್ಯಾಸತ್ಯತೆ ಬಗ್ಗೆ ಎತ್ತಲಾಗಿದ್ದ ಅನುಮಾನಗಳಿಗೆ ಉತ್ತರಗಳನ್ನು ನೀಡಿದರು. ಜೊತೆಗೆ ಪ್ರಕರಣದಲ್ಲಿ ಎ13 ಆಗಿರುವ ದೀಪಕ್ ಗೆ ಜಾಮೀನು ನೀಡಬಹುದು ಆತನ ಮೇಲೆ ಕೊಲೆ ಆರೋಪವಾಗಲಿ, ಅಪಹರಣದ ಆರೋಪವಾಗಲಿ ಇಲ್ಲ. ಆತನ ಮೇಲೆ ಸಾಕ್ಷ್ಯ ನಾಶದ ಆರೋಪ ಇದೆ. ಅದು ಜಾಮೀನು ನೀಡಬಹುದಾದ ಆರೋಪ ಎಂದರು.

ಇದನ್ನೂ ಓದಿ:ನ್ಯಾಯಾಲಯದಲ್ಲಿ ದರ್ಶನ್ ರಕ್ತ ಚರಿತ್ರೆ ಬಿಚ್ಚಿಟ್ಟ ಎಸ್​ಪಿಪಿ ಪ್ರಸನ್ನ ಕುಮಾರ್

ಆದರೆ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ8, ಎ11, ಎ12 ಅವರುಗಳು ಅಪಹರಣ ಹಾಗೂ ಕೊಲೆಯಲ್ಲಿ ಶಾಮೀಲಾಗಿರುವ ಕಾರಣ ಅವರಿಗೆ ಜಾಮೀನು ನೀಡಬಾರದು ಎಂದರು. ಎ8 ಆರೋಪಿ ಕಾರು ಚಾಲಕ ರವಿಶಂಕರ್ ಬಟ್ಟೆಯ ಮೇಲೆ ರಕ್ತದ ಕಲೆ ಪತ್ತೆ ಆಗಿರುವ ಕಾರಣ ಆತನಿಗೂ ಸಹ ಜಾಮೀನು ನೀಡಬಾರದು ಎಂದರು.

ಎಸ್​ಪಿಪಿ ಪ್ರಸನ್ನ ಕುಮಾರ್ ವಾದಕ್ಕೆ ಪ್ರತಿವಾದ ಸಲ್ಲಿಸಲು ಸಿವಿ ನಾಗೇಶ್ ಅವರಿಗೆ ಅವಕಾಶ ನೀಡಲಾಯ್ತು. ಆದರೆ ತಾವು ನಾಳೆ (ಅಕ್ಟೋಬರ್ 10) ರಂದು ವಾದ ಮಂಡಿಸುವುದಾಗಿ ಹೇಳಿದರು ಹಾಗಾಗಿ, ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಲಾಯ್ತು. ಇನ್ನು ಎ1 ಪವಿತ್ರಾ, ಎ8, ಎ11, ಎ12 ಹಾಗೂ ಎ13 ಅವರುಗಳ ಜಾಮೀನು ಅರ್ಜಿಯ ಕುರಿತಾದ ಆದೇಶವನ್ನು ಅಕ್ಟೋಬರ್ 14 ರಂದು ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Wed, 9 October 24