ಹಿರಿಯ ನಟಿ ಲೀಲಾವತಿ (Leelavathi) ಅವರು ನಿಧನವಾಗಿ ಮೂರು ದಿನಗಳಾಗಿದ್ದು ಮೂರನೇ ದಿನದ ಹಾಲು-ತುಪ್ಪ ಕಾರ್ಯವನ್ನು ಇಂದು ಕುಟುಂಬ ನೆರವೇರಿಸಿದೆ. ಲೀಲಾವತಿ ಪುತ್ರ ವಿನೋದ್ ರಾಜ್ (Vinod Raj), ಅವರ ಪತ್ನಿ ಅನು, ಪುತ್ರ ಯುವರಾಜ್ ಸೇರಿದಂತೆ ಇನ್ನೂ ಕೆಲವು ಆಪ್ತರು ಸೇರಿಕೊಂಡು ಲೀಲಾವತಿಯವರಿಗೆ ಹಾಲು-ತುಪ್ಪ ಕಾರ್ಯವನ್ನು ನೆರವೇರಿಸಿದೆ. ಎಡೆಯಿಟ್ಟು ಶಾಂತಿ ಕೋರಿದರು. ಪ್ರಾರ್ಥನೆ ಮಾಡಿದರು.
ಲೀಲಾವತಿ ಅವರು ಡಿಸೆಂಬರ್ 08ರ ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಅದರ ಮಾರನೇಯ ದಿನ ಅಂದರೆ ಡಿಸೆಂಬರ್ 09 ರಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಲೀಲಾವತಿ ಅವರನ್ನು ನೆಲಮಂಗಲದ ಬಳಿಯ ಸೋಲದೇವನಹಳ್ಳಿಯ ಅವರದ್ದೇ ತೋಟದಲ್ಲಿ ಮಣ್ಣು ಮಾಡಲಾಯ್ತು. ಅದೇ ಸ್ಥಳದಲ್ಲಿ ಇಂದು ಬೆಳಿಗ್ಗೆ ಸುಮಾರು 11 ಗಂಟೆಗೆ ವಿಶೇಷ ಪೂಜೆ ನಡೆಸಿ ಹಾಲು-ತುಪ್ಪ ಕಾರ್ಯ ಮಾಡಲಾಗಿದೆ. ಹಾಲು-ತುಪ್ಪ ಕಾರ್ಯದ ವೇಳೆ ಕುಟುಂಬಸ್ಥರ ಜೊತೆಗೆ ಸೋಲದೇವನಹಳ್ಳಿ ಗ್ರಾಮಸ್ಥರು ಹಲವರು ಕಾರ್ಯದಲ್ಲಿ ಭಾಗಿಯಾಗಿದ್ದರು.
ವಿನೋದ್ ರಾಜ್ ಅವರು ಕೇಶಮುಂಡನ ಮಾಡಿಸಿಕೊಂಡು, ಅಮ್ಮನ ಸಮಾಧಿಗೆ ಶ್ರದ್ಧಾ ಭಕ್ತಿಗಳಿಂದ ಪೂಜೆ ಮಾಡಿದರು. ಅವರ ಕುಟುಂಬಸ್ಥರು ಸಹ ಶ್ರದ್ಧೆಯಿಂದ ಪೂಜೆ ಮಾಡಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಈ ಪೂಜೆಗಳು ನಡೆದವು. ಬಳಿಕ ವಿನೋದ್ ರಾಜ್ ಅವರ ಪುತ್ರ ಯುವರಾಜ್ ಸೇರಿದಂತೆ ಇನ್ನೂ ಹಲವು ಬಂಧುಗಳು ಲೀಲಾವತಿ ಅವರ ಸಮಾಧಿಗೆ ಹಾಲು-ತುಪ್ಪ ಎರೆದು ಕೈ ಮುಗಿದರು. ಮೂರು ದಿನದ ಕಾರ್ಯ ಮುಗಿದಿದ್ದು ಇನ್ನು 11 ದಿನದ ಕಾರ್ಯ ಮಾಡುವುದು ಬಾಕಿ ಇದೆ. ಆ ದಿನ ಸೋಲದೇವನಹಳ್ಳಿಯ ಸಕಲ ಗ್ರಾಮಸ್ಥರು ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಅಂದು ತಿಥಿ ಊಟವನ್ನು ಹಾಕಿಸುವುದು ವಾಡಿಕೆ.
ಇದನ್ನೂ ಓದಿ:‘ನಾನು ವಿಸ್ಮಯ ನೋಡಿದೆ’: ಅಮ್ಮನಿಗೆ ಅಂತಿಮ ವಿದಾಯ ಹೇಳಿದ ವಿನೋದ್ ರಾಜ್ ಭಾವುಕ ಮಾತು
ಲೀಲಾವತಿಯವರ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡುವ ಗರಿಯನ್ನು ಸಹ ವಿನೋದ್ ರಾಜ್ ಇಟ್ಟುಕೊಂಡಿದ್ದಾರೆ. ಅಮ್ಮನನ್ನು ನನ್ನ ಭೂಮಿಯಲ್ಲೇ ಇರಿಸಿಕೊಂಡಿದ್ದೇನೆ. ಅಲ್ಲಿ ಒಂದು ಒಳ್ಳೆಯ ಸ್ಮಾರಕ ನಿರ್ಮಾಣ ಮಾಡಬೇಕು ಎಂಬ ಆಸೆಯಿದೆ. ಅಮ್ಮನ ಹಳೆಯ ಫೋಟೊಗಳನ್ನು ಹಾಕಿ, ಸುಂದರವಾದ ಸ್ಮಾರಕ ನಿರ್ಮಾಣ ಮಾಡುತ್ತೇನೆ. ಶಾಂತವಾಗಿರುವಂತೆ ನೋಡಿಕೊಳ್ಳುತ್ತೇನೆ, ನಾನು ಅಲ್ಲಿಗೆ ಹೋದಾಗ ಚೈತನ್ಯ ತುಂಬಬೇಕು ಆ ರೀತಿ ನಿರ್ಮಾಣ ಮಾಡುತ್ತೇನೆ, ಯಾರೇ ಅಭಿಮಾನಿಗಳು ಬಂದರೂ ಅವರಿಗೆ ಪ್ರಶಾಂತತೆಯ ಅನುಭವ ಆಗಬೇಕು ಆ ರೀತಿಯ ಸ್ಮಾರಕ ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ