ಅಮ್ಮ ಹೇಳಿದ ಕೊನೆಯ ಮಾತು ನೆನಪಿಸಿಕೊಂಡ ವಿನೋದ್ ರಾಜ್
Vinod Raj: ತಾಯಿಯೇ ಸರ್ವಸ್ವ ಎಂದುಕೊಂಡು ಬದುಕಿದ್ದ ವಿನೋದ್ ರಾಜ್, ಲೀಲಾವತಿಯವರ ಅಗಲಿಕೆಯಿಂದ ಒಬ್ಬಂಟಿಯಾದಂತಾಗಿದ್ದಾರೆ. ಇನ್ನು ಮುಂದೆ ತಾವು ಮಾಡಲಿರುವ ಕೆಲಸಗಳ ಬಗ್ಗೆ ವಿನೋದ್ ರಾಜ್ ಮಾತನಾಡಿದ್ದಾರೆ. ಮಗನ ಬಗ್ಗೆಯೂ ಮಾತನಾಡಿದ್ದಾರೆ.
ಜೀವವೇ ಆಗಿದ್ದ ತಾಯಿ ಲೀಲಾವತಿಯವರು (Leelavathi) ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಇಷ್ಟು ವರ್ಷಗಳ ಕಾಲ ತಾಯಿಯೇ ಸರ್ವಸ್ವ ಎಂದುಕೊಂಡು ಬದುಕಿದ್ದ ವಿನೋದ್ ರಾಜ್ (Vinod Raj) ಒಬ್ಬಂಟಿಯಾಗಿದ್ದಾರೆ. ಇಂದು (ಡಿಸೆಂಬರ್ 09) ತಾಯಿಯ ಅಂತಿಮ ಸಂಸ್ಕಾರ ಮಾಡಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಭಾವುಕರಾಗಿಯೇ ಉತ್ತರಿಸಿದ ವಿನೋದ್ ರಾಜ್, ಅಮ್ಮ ಆಡಿದ ಕೊನೆಯ ಮಾತುಗಳನ್ನು ನೆನಪು ಮಾಡಿಕೊಂಡರು, ಜೊತೆಗೆ ತಮ್ಮ ಇನ್ನು ಮುಂದಿನ ಕಾರ್ಯವೇನು ಎಂಬುದಾಗಿಯೂ ಮಾತನಾಡಿದ್ದಾರೆ.
‘ಕಳೆದ ಹದಿನೈದು ದಿನಗಳಲ್ಲಿ ಅಮ್ಮ ಹೆಚ್ಚು ಮಾತನ್ನೇ ಆಡಿಲ್ಲ. ಅವರಿಗೆ ಸಾಧ್ಯವಾಗುತ್ತಿರಿಲಿಲ್ಲ. ಆಗಾಗ್ಗೆ ವಿನೋದ್, ಮಗನೇ ಎಂದು ಕರೆಯುತ್ತಿದ್ದರಷ್ಟೆ. ನನಗೆ ನೆನಪಿರುವಂತೆ ನೀರು ಕುಡಿಸುವಂತೆ ನನ್ನನ್ನು ಕೇಳಿದರು, ನೀರು ಕುಡಿಸಿದೆ, ನೀರು ಕುಡಿದು ಕಣ್ಣು ಮುಚ್ಚಿ ಬಿಟ್ಟರು’ ಎಂದು ನೆನಪು ಮಾಡಿಕೊಂಡಿದ್ದಾರೆ ವಿನೋದ್ ರಾಜ್.
ಇದನ್ನೂ ಓದಿ:‘ಅಮ್ಮ ಕಂಡ ಕನಸು ಸಾಕಷ್ಟಿದೆ, ಬಾಕಿಯಿರುವ ಕೆಲಸ ಮಾಡುತ್ತೇನೆ’- ವಿನೋದ್ ರಾಜ್
‘‘ಅಮ್ಮನನ್ನು ನನ್ನನ್ನು ಯಾರೂ ದೂರ ಮಾಡಿಲ್ಲ, ಅದು ಸಾಧ್ಯವೂ ಇಲ್ಲ. ಅಮ್ಮನನ್ನು ನಾನು ನನ್ನ ಬಳಿಯೇ ಇಟ್ಟುಕೊಂಡಿದ್ದೇನೆ. ಅವರಿಗೆ ಇಷ್ಟವಾದ ನನ್ನ ಭೂಮಿಯನ್ನೇ ಮಣ್ಣು ಮಾಡಿದ್ದೇನೆ. ಅವರ ಸಮಾಧಿ ಸ್ಥಳವನ್ನು ಒಳ್ಳೆಯ ದೇವಾಲಯದಂತೆ ಮಾಡುತ್ತೀನಿ. ಅಭಿಮಾನಿಗಳಿಗೆ ಇಷ್ಟವಾಗುವಂತೆ ಅವರ ಒಳ್ಳೆಯ ಭಾವಚಿತ್ರಗಳನ್ನು ಹಾಕಿಸುತ್ತೀನಿ, ಅವರ ಸಿನಿಮಾದ ಹಾಡುಗಳು ಸದಾ ಅಲ್ಲಿ ಗುನುಗುತ್ತಲೇ ಇರುವಂತೆ ಮಾಡುತ್ತೀನಿ. ನಾನು ಪ್ರತಿದಿನ ಅಲ್ಲಿಗೆ ಹೋದಾಗ ನನಗೆ ಒಳ್ಳೆಯ ಚೈತನ್ಯ ಬರಬೇಕು, ಹಾಗೆಯೇ ಅವರ ಅಭಿಮಾನಿಗಳು ಬಂದಾಗಲೂ ಅವರಿಗೂ ಚೈತನ್ಯ ಮೂಡಬೇಕು ಅಂಥಹಾ ಒಂದು ಒಳ್ಳೆಯ ಸ್ಮಾರಕವನ್ನು ನಾನು ನಿರ್ಮಾಣ ಮಾಡುತ್ತೀನಿ’’ ಎಂದಿದ್ದಾರೆ ವಿನೋದ್ ರಾಜ್.
ಇದೇ ಸಂದರ್ಭದಲ್ಲಿ ತಮ್ಮ ಪುತ್ರನ ಬಗ್ಗೆಯೂ ಮಾತನಾಡಿದ ವಿನೋದ್ ರಾಜ್, ‘‘ನನ್ನ ಪುತ್ರ ಯುವರಾಜ್ ಎಂದರೆ ಅಮ್ಮನಿಗೆ ಬಹಳ ಪ್ರೀತಿ. ಕಳೆದ ಬಾರಿ ಬಂದಿದ್ದಾಗ ಅಜ್ಜಿ ಎಂದು ಕರೆದೊಡನೆ ಕಣ್ಣು ಬಿಟ್ಟು ನೋಡಿದ್ದರು. ಅವನು ಹೋಗುವವರೆಗೆ ಅವನನ್ನೇ ನೋಡುತ್ತಲೇ ಇದ್ದರು. ಅವನನ್ನು ಚಿತ್ರರಂಗಕ್ಕೆ ತರಬೇಕೆಂಬ ಆಸೆ ಅಮ್ಮನಿಗೆ ಇರಲಿಲ್ಲ. ಆದರೆ ವಿದ್ಯಾಭ್ಯಾಸ ಮಾಡಬೇಕು ಎಂಬ ಆಸೆಯಿತ್ತು, ಹಾಗೆಯೇ ಅವನು ಒಳ್ಳೆಯ ವಿಧ್ಯಾಭ್ಯಾಸ ಮಾಡಿದ್ದಾನೆ. ಸಾಫ್ಟ್ವೇರ್ ಉದ್ಯೋಗ ಮಾಡುತ್ತಿದ್ದಾನೆ’’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ