ಮಣ್ಣು ಸೇರಿದ ‘ಸ್ವಾಭಿಮಾನದ ನಲ್ಲೆ’ ಲೀಲಾವತಿ, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ

|

Updated on: Dec 09, 2023 | 5:17 PM

Leelavathi: ಹಿರಿಯ ನಟಿ ಲೀಲಾವತಿಯವರ ಅಂತ್ಯಸಂಸ್ಕಾರ ಇಂದು (ಡಿಸೆಂಬರ್ 09) ನೆಲಮಂಗಲದ ಬಳಿಕ ಸೋಲದೇವನಹಳ್ಳಿಯಲ್ಲಿ ನೆರವೇರಿತು.

ಮಣ್ಣು ಸೇರಿದ ‘ಸ್ವಾಭಿಮಾನದ ನಲ್ಲೆ’ ಲೀಲಾವತಿ, ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ
Follow us on

ಹಿರಿಯ ನಟಿ ಲೀಲಾವತಿ (Leelavathi) ತಮ್ಮ ಇಷ್ಟದ ತೋಟದಲ್ಲಿಯೇ ಮಣ್ಣಾಗಿದ್ದಾರೆ. ನಿನ್ನೆ (ಡಿಸೆಂಬರ್ 08) ಸಂಜೆ ನಿಧನ ಹೊಂದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರನ್ನು ಇಂದು (ಡಿಸೆಂಬರ್ 09) ಅವರ ನೆಲಮಂಗಲದ ಬಳಿಕ ಸೋಲದೇವನಹಳ್ಳಿಯ ತೋಟದಲ್ಲಿ ಭಂಟ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿ ಅಂತಿಮ ಸಂಸ್ಕಾರ ಮಾಡಲಾಗಿದೆ.

85 ವರ್ಷ ವಯಸ್ಸಾಗಿದ್ದ ಲೀಲಾವತಿಯವರು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ಡಿಸೆಂಬರ್ 08) ಕೊನೆ ಉಸಿರೆಳೆದರು. ಅವರ ಅಂತಿಮ ದರ್ಶನಕ್ಕೆ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಸಹಸ್ರಾರು ಮಂದಿ ಅಭಿಮಾನಿಗಳು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಇಂದು ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಂಗಳೂರಿನಲ್ಲಿಯೂ ಸಹ ಹಲವಾರು ಕಲಾವಿದರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದುಕೊಂಡರು.

ರವೀಂದ್ರ ಕಲಾಕ್ಷೇತ್ರದಿಂದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಅವರ ನಿವಾಸವಾಗಿದ್ದ ಸೋಲದೇವನಹಳ್ಳಿಗೆ ಕೊಂಡೊಯ್ಯಲಾಯ್ತು. ಅಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ಸಂಸ್ಕಾರ ಮಾಡುವ ಮುನ್ನ ಲೀಲಾವತಿಯವರ ಪಾರ್ಥಿವ ಶರೀರಕ್ಕೆ ಪುತ್ರ ವಿನೋದ್ ರಾಜ್​ಕುಮಾರ್ ಹಾಗೂ ಇತರರು ಪೂಜೆ ಮಾಡಿದರು. ಲೀಲಾವತಿಯವರು ಭಂಟ ಸಮುದಾಯಕ್ಕೆ ಸೇರಿದ್ದ ಕಾರಣ ಅದೇ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ಮಾಡಲಾಯ್ತು.

ಇದನ್ನೂ ಓದಿ:Leelavathi No More: ಅಗಲಿದ ತನ್ನೊಡತಿಯ ಭಾವಚಿತ್ರದ ಎದುರು ಲೀಲಾವತಿ ನೆಚ್ಚಿನ ನಾಯಿ ಬ್ಲ್ಯಾಕಿ ಮೂಕರೋದನೆ!

ಸೋಲದೇವನಹಳ್ಳಿಯ ಮನೆಯಿಂದ ಅಂತ್ಯ ಕ್ರಿಯೆಗೆ ಸಜ್ಜು ಮಾಡಲಾಗಿದ್ದ ಜಾಗಕ್ಕೆ ದೊಡ್ಡ ಹೂವಿನ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮಾಡಿಕೊಂಡು ಬರಲಾಯ್ತು. ಅದಾದ ಬಳಿಕ ವಿನೋದ್ ರಾಜ್ ಹಾಗೂ ಇತರರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ನಂತರ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯ್ತು, ಮೂರು ಸುತ್ತು ಬಂದೂಕು ತೋಪು ಹಾರಿಸಿ ನಮನ ಸಲ್ಲಿಸಲಾಯ್ತು. ಬಳಿಕ ಲೀಲಾವತಿ ಪುತ್ರ ವಿನೋದ್ ರಾಜ್ ಹಾಗೂ ಮೊಮ್ಮಗ ಸೇರಿ ಹಲವು ವಿಧಿ-ವಿಧಾನಗಳನ್ನು ಮಾಡಿದರು. ಅಂತಿಮವಾಗಿ ಲೀಲಾವತಿಯವರನ್ನು ಮಣ್ಣಿಗೆ ಸೇರಿಸಲಾಯ್ತು.

ಸೋಲದೇವನಹಳ್ಳಿಯ ಜನತೆ, ಲೀಲಾವತಿಯವರ ಬಂಧುಗಳು, ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಲೀಲಾವತಿಯರು ಮಣ್ಣು ಸೇರಿದರು. ಈ ವೇಳೆ ಲೀಲಾವತಿಯವರ ಪುತ್ರ ವಿನೋದ್ ರಾಜ್​ಕುಮಾರ್ ಸೇರಿದಂತೆ ನೆರೆದಿದ್ದ ಅಸಂಖ್ಯ ಅಭಿಮಾನಿಗಳು ಕಣ್ಣೀರು ಹಾಕಿದರು. ನಟಿಯಾಗಿ ಮೆರೆದು, ರೈತ ಮಹಿಳೆಯಾಗಿ ಕಾಯಕ ಮಾಡಿದ್ದ ಲೀಲಾವತಿಯವರು ಕೊನೆಗೆ ತಾವು ಸಿನಿಮಾಕ್ಕಿಂತಲೂ ಅಪಾರವಾಗಿ ಪ್ರೀತಿಸುತ್ತಿದ್ದ ಪರಿಸರ, ಗಿಡ-ಮರಗಳ ನಡುವಲ್ಲಿಯೇ ಮಣ್ಣಾದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:16 pm, Sat, 9 December 23