ಟ್ರೇಲರ್ ಮೂಲಕ ‘ಫ್ಯಾಮಿಲಿ ಡ್ರಾಮಾ’ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರತಂಡದಿಂದ ಒಂದು ಹೊಸ ಸಾಂಗ್ ಬಿಡುಗಡೆ ಮಾಡಲಾಗಿದೆ. ಇದು ಸಿನಿಮಾದ ಶೀರ್ಷಿಕೆ ಗೀತೆ. ಆಕರ್ಷ್ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಇದು ಅವರ ಮೊದಲ ಸಿನಿಮಾ. ಅಭಯ್, ಅನನ್ಯಾ ಅಮರ್, ರೇಖಾ, ಸಿಂಧು ಶ್ರೀನಿವಾಸ್ ಮೂರ್ತಿ, ಪೂರ್ಣಚಂದ್ರ ಮೈಸೂರು ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಡಬ್ಬುಗುಡಿ ಮುರಳಿಕೃಷ್ಣ ಅವರು ‘ಡಿಎಂಕೆ ಎಂಟರ್ಟೇನ್ಮೆಂಟ್’ ಸಂಸ್ಥೆಯ ಮೂಲಕ ಬಂಡವಾಳ ಹೂಡಿದ್ದಾರೆ. ಬಹುತೇಕ ಹೊಸ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಕ್ರಿಯೇಟಿವ್ ಆದಂತಹ ಟ್ರೇಲರ್ ನೋಡಿದ ಬಳಿಕ ‘ಫ್ಯಾಮಿಲಿ ಡ್ರಾಮಾ’ ಒಂದು ಡಿಫರೆಂಟ್ ಸಿನಿಮಾ ಆಗಲಿದೆ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿ ಮೂಡಿದೆ. ಅದರ ಜೊತೆ, ಈಗ ಬಿಡುಗಡೆ ಆಗಿರುವ ಟೈಟಲ್ ಟ್ರ್ಯಾಕ್ ಕೂಡ ಜನರ ಗಮನ ಸೆಳೆಯುತ್ತದೆ. ವಾಸುಕಿ ವೈಭವ್ ಅವರ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದೆ. ‘ಲಿ ಲಿ ಫ್ಯಾಮಿಲಿ..’ ಎಂಬ ಹಾಡಿನ ದೃಶ್ಯಗಳು ಕೂಡ ಇಂಟರೆಸ್ಟಿಂಗ್ ಆಗಿವೆ. ಸಿನಿಮಾದ ಬಗ್ಗೆ ಕೌತುಕ ಹೆಚ್ಚಿಸುವಲ್ಲಿ ಈ ಸಾಂಗ್ ಯಶಸ್ವಿಯಾಗಿದೆ.
ಇದನ್ನೂ ಓದಿ: ಸದ್ದು ಮಾಡುತ್ತಿದೆ ‘ಫ್ಯಾಮಿಲಿ ಡ್ರಾಮಾ’ ಟ್ರೇಲರ್; ಭರವಸೆ ಮೂಡಿಸಿದ ಹೊಸ ಸಿನಿಮಾ ತಂಡ
‘ಲಿ ಲಿ ಫ್ಯಾಮಿಲಿ..’ ಹಾಡಿಗೆ ಚೇತನ್ ಅಮ್ಮಯ್ಯ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶರತ್ ವಶಿಷ್ಠ ಮತ್ತು ಚೇತನ್ ಅಮ್ಮಯ್ಯ ಜೊತೆಯಾಗಿ ಸಾಹಿತ್ಯ ರಚಿಸಿದ್ದಾರೆ. ಒಂದು ಪಾರ್ಟಿಯ ಹಿನ್ನೆಲೆಯಲ್ಲಿ ಈ ಸಾಂಗ್ ಸಾಗುತ್ತದೆ. ಸಿಂಧು, ಅಭಯ್, ಅನಯ್ಯಾ ಆ್ಯಂಡ್ ಗ್ಯಾಂಗ್ನವರು ಯಾರನ್ನೊ ಕೊಲೆ ಮಾಡಲು ಸ್ಕೆಚ್ ಹಾಕುವ ಸನ್ನಿವೇಶ ಇದರಲ್ಲಿದೆ. ಮುಂದೇನಾಗುತ್ತದೆ ಎಂಬ ಕೌತುಕ ಮೂಡಿಸುವ ರೀತಿಯಲ್ಲಿ ಹಾಡು ಮೂಡಿಬಂದಿದೆ.
ಈ ಸಿನಿಮಾ ಮೇಲೆ ನಿರ್ಮಾಪಕ ಮುರಳಿಕೃಷ್ಣ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಮೆರಿಕದಲ್ಲಿ ನೆಲೆಸಿರುವ ಅವರು ತಮ್ಮ ನೆಲದ ಮೇಲಿನ ಪ್ರೀತಿ ಹಾಗೂ ಸಿನಿಮಾ ಮೇಲಿನ ಆಸಕ್ತಿಯಿಂದ ‘ಫ್ಯಾಮಿಲಿ ಡ್ರಾಮಾ’ ನಿರ್ಮಿಸಿದ್ದಾರೆ. ಉತ್ತಮ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬುದು ಅವರ ಗುರಿ. ಕನ್ನಡದ ‘ಫ್ಯಾಮಿಲಿ ಡ್ರಾಮ’ ಮಾತ್ರವಲ್ಲದೇ ತೆಲುಗಿನಲ್ಲಿ 3 ಸಿನಿಮಾಗಳ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ಡಿಎಂಕೆ ಎಂಟರ್ಟೇನ್ಮೆಂಟ್’ ಮೂಲಕ ಹೊಸಬರಿಗೆ ಅವಕಾಶ ನೀಡಬೇಕು ಮತ್ತು ದೊಡ್ಡ ಬಜೆಟ್ನಲ್ಲಿ ಸ್ಟಾರ್ ನಟರ ಸಿನಿಮಾಗಳನ್ನು ನಿರ್ಮಿಸಬೇಕು ಎಂಬ ಉದ್ದೇಶ ಕೂಡ ಅವರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.