
ಪ್ರೀಮಿಯರ್ ಶೋಗಳಲ್ಲಿ ಜನರು ಸಿನಿಮಾ ನೋಡಿ ಮೆಚ್ಚಿಕೊಂಡರೆ ನಂತರದ ದಿನಗಳಲ್ಲಿ ನೋಡಲು ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತದೆ. ಈ ವರ್ಷ ಸೂಪರ್ ಹಿಟ್ ಆದ ‘ಸು ಫ್ರಮ್ ಸೋ’ (Su From So) ಚಿತ್ರವೇ ಈ ಮಾತಿಗೆ ಸಾಕ್ಷಿ. ಈಗ ಕನ್ನಡದಲ್ಲಿ ಮತ್ತೊಂದು ಸಿನಿಮಾ ಅದೇ ರೀತಿ ಪ್ರೀಮಿಯರ್ ಶೋನಲ್ಲೇ ಜನರನ್ನು ಸೆಳೆದುಕೊಂಡಿದೆ. ಹೌದು, ‘ಅರಸಯ್ಯನ ಪ್ರೇಮಪ್ರಸಂಗ’ (Arasayyana Prema Prasanga) ಚಿತ್ರಕ್ಕೆ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಪ್ರೀಮಿಯರ್ ಶೋ ನೋಡಿದ ಜನರು ನಕ್ಕು ಎಂಜಾಯ್ ಮಾಡಿದ್ದಾರೆ. ಹಾಸ್ಯ ನಟ ಮಹಂತೇಶ್ ಹಿರೇಮಠ (Mahantesh Hiremath) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ.
ಒಂದು ಡಿಫರೆಂಟ್ ಕಥೆಯನ್ನು ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಿನಿಮಾದ ಥೀಮ್ ಏನು ಎಂಬುದು ಟ್ರೇಲರ್ ಮೂಲಕವೇ ಗೊತ್ತಾಗಿದೆ. ಟ್ರೇಲರ್ ನೋಡಿದ ಎಲ್ಲರೂ ಚಿತ್ರತಂಡದ ಬೆನ್ನು ತಟ್ಟಿದ್ದರು. ಅದರಿಂದಲೇ ಜನರು ಪ್ರೀಮಿಯರ್ ಶೋಗಳಿಗೆ ಬರುವಂತಾಯಿತು. ಚಿತ್ರವು ಫ್ಯಾಮಿಲಿ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿದೆ.
‘ಸಿನಿಮಾದಲ್ಲಿ ಕಾಮಿಡಿ ತುಂಬ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಎಮೋಷನಲ್ ಆಗಿದೆ. ಆಗ ನಮಗೆ ಅಳುಬಂತು. ಪ್ರೀತಿಗೆ ಮೇಲು-ಬೀಳು ಎಂಬ ಭೇದ ಇಲ್ಲ ಎಂಬುದನ್ನು ಈ ಸಿನಿಮಾ ತೋರಿಸಿದೆ. ಸಮಯ ಹೇಗೆ ಕಳೆಯಿತು ಎಂಬುದೇ ಗೊತ್ತಾಗುವುದಿಲ್ಲ. ಅಷ್ಟು ಎಂಜಾಯ್ ಮಾಡಬಹುದು. ಮೊದಲಿನಿಂದ ಕೊನೆಯವರೆಗೆ ಸ್ವಲ್ಪ ಕೂಡ ಬೋರ್ ಆಗಲಿಲ್ಲ’ ಎಂಬಿತ್ಯಾದಿ ಪ್ರತಿಕ್ರಿಯೆಗಳು ಪ್ರೇಕ್ಷಕರಿಂದ ಸಿಕ್ಕಿವೆ.
ಚಿತ್ರತಂಡದವರು ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ‘ಫ್ಯಾಮಿಲಿ ಪ್ರೇಕ್ಷಕರು ಸಿನಿಮಾವನ್ನು ನೋಡಿ ಎಂಜಾಯ್ ಮಾಡಿದ್ದಾರೆ. ಅರಸಯ್ಯನಿಗೆ ಪ್ರೇಯಸಿ ಸಿಗುತ್ತಾಳೋ ಇಲ್ಲವೋ ಎಂಬುದನ್ನು ನೀವು ಕೂಡ ಚಿತ್ರಮಂದಿರಕ್ಕೆ ಬಂದು ನೋಡಿ’ ಎಂದು ಮಹಂತೇಶ್ ಅವರು ಸಿನಿಪ್ರಿಯರಿಗೆ ಆಹ್ವಾನ ನೀಡಿದ್ದಾರೆ.
ಇದನ್ನೂ ಓದಿ: ಜಾಲಿ ಎಲ್ಎಲ್ಬಿ 3, ಅರಸಯ್ಯನ ಪ್ರೇಮ ಪ್ರಸಂಗ, ಕಮಲ್ ಶ್ರೀದೇವಿ ನಡುವೆ ಈ ವಾರ ಪೈಪೋಟಿ
‘ರಾಜ್ ಕಮಲ ಪಿಕ್ಚರ್ಸ್’ ಮೂಲಕ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾ ನಿರ್ಮಾಣ ಆಗಿದೆ. ಜೆವಿಆರ್ ದೀಪು ಅವರು ನಿರ್ದೇಶನ ಮಾಡಿದ್ದಾರೆ. ಶ್ರೀಮತಿ ಮೇಘಶ್ರೀ ರಾಜೇಶ್ ಅವರು ಬಂಡವಾಳ ಹೂಡಿದ್ದಾರೆ. ಮಹಂತೇಶ್ ಹಿರೇಮಠ ಅವರ ಜೊತೆ ರಶ್ಮಿತಾ, ವಿಜಯ್ ಚಂಡೂರು, ಪಿಡಿ ಸತೀಶ್ ಚಂದ್ರ, ರಘು ರಾಮನಕೊಪ್ಪ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.