ಎರಡು ರಾಷ್ಟ್ರಪ್ರಶಸ್ತಿ ಬಾಚಿಕೊಂಡ ‘ಮಧ್ಯಂತರ’ ಸಿನಿಮಾ ಬಗ್ಗೆ ನಿಮಗೆಷ್ಟು ಗೊತ್ತು?

|

Updated on: Aug 17, 2024 | 10:07 AM

‘ಮಧ್ಯಂತರ’ ಕಿರುಚಿತ್ರ ಎರಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಈ ಕಿರುಚಿತ್ರದ ಕತೆ, ಇದು ನಿರ್ಮಾಣವಾದ ಬಗೆ ಸ್ಪೂರ್ತಿದಾಯಕವಾದುದು. ‘ಮಧ್ಯಂತರ’ದ ಹಿಂದಿನ ಕತೆ ಇಲ್ಲಿದೆ ಓದಿ...

ಎರಡು ರಾಷ್ಟ್ರಪ್ರಶಸ್ತಿ ಬಾಚಿಕೊಂಡ ‘ಮಧ್ಯಂತರ’ ಸಿನಿಮಾ ಬಗ್ಗೆ ನಿಮಗೆಷ್ಟು ಗೊತ್ತು?
Follow us on

ನಿನ್ನೆಯಷ್ಟೆ 70ನೇ ಸಿನಿಮಾ ರಾಷ್ಟ್ರಪ್ರಶಸ್ತಿ ಘೋಷಣೆ ಆಗಿದೆ. ಕನ್ನಡ ಸಿನಿಮಾಗಳಿಗೆ ಅಪರೂಪಕ್ಕೆ ತುಸು ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಫೀಚರ್ ವಿಭಾಗದಲ್ಲಿ ನಾಲ್ಕು ಪ್ರಶಸ್ತಿ ಹಾಗೂ ನಾನ್ ಫೀಚರ್ ವಿಭಾಗದಲ್ಲಿ ಮೂರು ಪ್ರಶಸ್ತಿಗಳು ಲಭಿಸಿದ್ದು ಈ ಬಾರಿ ಒಟ್ಟು ಏಳು ಪ್ರಶಸ್ತಿಗಳು ಕನ್ನಡಕ್ಕೆ ಲಭಿಸಿವೆ. ಫೀಚರ್ ವಿಭಾಗದಲ್ಲಿ ‘ಕಾಂತಾರ’ ಮತ್ತು ‘ಕೆಜಿಎಫ್ 2’ ಸಿನಿಮಾ ಸದ್ದು ಮಾಡಿದರೆ. ನಾನ್ ಫೀಚರ್ ವಿಭಾಗದಲ್ಲಿ ‘ಮಧ್ಯಂತರ’ ಕಿರುಚಿತ್ರ ಬಹುವಾಗಿ ಗಮನ ಸೆಳೆದಿದೆ. ಪ್ರಶಸ್ತಿ ಘೋಷಿಸಿದ ಜ್ಯೂರಿಗಳು ಸಹ ‘ಮಧ್ಯಂತರ’ ಸಿನಿಮಾವನ್ನು ಬಹುವಾಗಿ ಕೊಂಡಾಡಿದ್ದಾರೆ.

‘ಮಧ್ಯಂತರ’ ಕಿರುಚಿತ್ರ ಸಿನಿಮಾ ಪ್ರೇಮಿಗಳಿಬ್ಬರ ಕತೆ. ದಿನೇಶ್ ಶೆಣೈ ಎಂಬ ಅಪ್ಪಟ ಸಿನಿಮಾ ಮೋಹಿ ಹಲವು ಕಷ್ಟಗಳನ್ನು, ಸಮಸ್ಯೆಗಳನ್ನು ಎದುರಿಸಿ ಹಲವು ಗೆಳೆಯರ, ಸಮಾನ ಮನಸ್ಕರ ಸಹಾಕರ ಪಡೆದು ಕಟ್ಟಿರುವ ಕಿರುಚಿತ್ರವಿದು. ಬಂಟ್ವಾಳದ ದಿನೇಶ್ ಅವರು ಸ್ವತಃ ಸಿನಿಮಾ ಮೋಹಿ. ಕಳೆದ 27 ವರ್ಷಗಳಿಂದಲೂ ಅವರು ಮನೊರಂಜನಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೆಹಲಿಯಲ್ಲಿ ಸಿನಿಮಾ ಕುರಿತ ಶಿಕ್ಷಣ ಕಲಿತು ಅಲ್ಲಿಯೇ ಸೆಟಲ್ ಆಗಿರುವ ದಿನೇಶ್, ಜಾಹೀರಾತುಗಳನ್ನು, ಕಾರ್ಪೊರೇಟ್​ಗಳಿಗೆ ಕಿರುಚಿತ್ರ, ಡಾಕ್ಯುಮೆಂಟರಿಗಳನ್ನು ನಿರ್ಮಿಸುತ್ತಿದ್ದರು. ಆದರೆ ಕಾರ್ಪೊರೇಟ್ ಹೊರಗೆ ಒಂದು ಅಪ್ಪಟ ಸಿನಿಮಾ ಅಥವಾ ಕಿರುಚಿತ್ರವನ್ನು ನಿರ್ಮಿಸುವುದು ಅವರ ಬಹುವರ್ಷಗಳ ಕನಸಾಗಿತ್ತು. ಅದನ್ನು ‘ಮಧ್ಯಂತರ’ದ ಮೂಲಕ ಸಾಕಾರಗೊಳಿಸಿಕೊಂಡಿದ್ದಾರೆ.

2022ರ ಮಾರ್ಚ್ ತಿಂಗಳಲ್ಲಿ ‘ಮಧ್ಯಂತರ’ ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದರು ದಿನೇಶ್ ಶೆಣೈ. ಗುಣಮಟ್ಟದ ಕಿರುಚಿತ್ರ ನೀಡುವುದು ಖರ್ಚಿನ ಬಾಬತ್ತು ಎಂಬುದು ಅರಿತಿದ್ದ ದಿನೇಶ್ ಅವರು ಕ್ರೌಡ್ ಫಂಡಿಂಗ್ ಮೂಲಕ ಹಣ ಸೇರಿಸಿಕೊಂಡು ಸಿನಿಮಾ ಪ್ರಾರಂಭ ಮಾಡಿದರು. ದಿನೇಶ್ ಅವರನ್ನು ಬಲ್ಲವರೇ ಹಲವರು ಇದಕ್ಕೆ ಹಣ ಹಾಕಿದರು. ‘ಮಧ್ಯಂತರ’ ಕಿರುಚಿತ್ರ ಅಪ್ಪಟ ಸಿನಿಮಾ ಪ್ರೇಮಿ ಯುವಕರಿಬ್ಬರು ಸಿನಿಮಾ ಮೋಹಕ್ಕೆ ಸಿಲುಕಿ ಸಿನಿಮಾ ನಿರ್ಮಾಣ ಜಗತ್ತಿಗೆ ಇಳಿಯುವ ಸರಳ ಕತೆಯನ್ನು ಒಳಗೊಂಡಿದೆ. ಸಿನಿಮಾದ ನಿರೂಪಣೆ ತಮಾಷೆಯ ಧಾಟಿಯಲ್ಲಿದ್ದರೂ ಗಂಭೀರವಾದ ವಸ್ತು ವಿಷಯ ಒಳಗೊಂಡಿದೆ.

ಮುಖ್ಯ ಪಾತ್ರದಲ್ಲಿ ದಾವಣಗೆರೆಯ ವೀರೇಶ್ ಹಾಗೂ ರಂಗಭೂಮಿ ಹಿನ್ನೆಲೆಯ ಅಜಯ್ ನೀನಾಸಂ ನಟಿಸಿದ್ದಾರೆ. ಹೋಟೆಲ್ ಒಂದರಲ್ಲಿ ಸಪ್ಲೈಯರ್​ಗಳಾಗಿ ಕೆಲಸ ಮಾಡುವ ಈ ಇಬ್ಬರಿಗೂ ನಿಂತರು, ಕೂತರು, ಮಲಗಿದರೂ ಬರೀ ಸಿನಿಮಾದ್ದೆ ಧ್ಯಾನ. ಡಾ ರಾಜ್​ಕುಮಾರ್ ಇವರ ಬಲು ಮೆಚ್ಚಿನ ನಟ. ರಾಜ್​ಕುಮಾರ್ ಅವರನ್ನು ಅನುಕರಸುವುದೆಂದರೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಸಿನಿಮಾ ನೋಡಿ ಬಂದು ಅದನ್ನು ರಸವತ್ತಾಗಿ ಗೆಳೆಯರ ಬಳಿ ಹೇಳುವುದು ಇವರ ಮೆಚ್ಚಿನ ಅಭ್ಯಾಸ. ಕತೆ ಹೇಳುವ ಕಲೆ ಇವರಿಗೆ ಕರಗತ, ಇದೇ ಪ್ರತಿಭೆಯಿಂದ ಇವರು ಸಿನಿಮಾ ನಿರ್ಮಾಣಕ್ಕೂ ಇಳಿಯುತ್ತಾರೆ. ನಿರ್ಮಾಪಕನಿಗೆ ಇವರು ಹೇಳಿದ ಕತೆಯೊಂದು ಒಪ್ಪಿಗೆ ಆಗಿಬಿಡುತ್ತದೆ. ಮುಂದೇನು? ಕಿರುಚಿತ್ರ ನೋಡಿಯೇ ತಿಳಿಯಬೇಕು.

ಇದನ್ನೂ ಓದಿ:ಬೋರ್ ಮೋಟರ್​ನಿಂದ ರಾಷ್ಟ್ರಪ್ರಶಸ್ತಿ ವರೆಗೆ, ಸುರೇಶ್ ಅರಸ್ ಸಿನಿಮಾ ಪಯಣ

1970ರ ದಶಕದಲ್ಲಿ ನಡೆಯುವ ಕತೆ ಇದಾದ್ದರಿಂದ ಸಿನಿಮಾಕ್ಕೆ ರೆಟ್ರೊ ಫೀಲ್ ತರಲು 16 ಎಂಎಂ ಕ್ಯಾಮೆರಾ ನಲ್ಲಿ ಕೊಡಾಕ್ ರೀಲ್ಸ್​ ಬಳಸಿ ಚಿತ್ರೀಕರಣ ಮಾಡಲಾಗಿದೆ. ಆ ಬಳಿಕ ಅದನ್ನು ಡಿಜಿಟಲ್​ಗೆ ಕನ್ವರ್ಟ್ ಮಾಡಲಾಗಿದೆ. ಕ್ಯಾಮೆರಾ, ರೀಲ್ಸ್, ಸಿನಿಮಾಕ್ಕೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರು ನಟರು ಕಡಿಮೆ ಸಂಭಾವನೆಯಲ್ಲಿ ಅಥವಾ ಉಚಿತವಾಗಿ ಕೆಲಸ ಮಾಡಿದವರೆ. ‘ತಿಥಿ’ ಸಿನಿಮಾದ ನಿರ್ದೇಶಕ ರಾಮರೆಡ್ಡಿ ಸಹಾಯದಿಂದ ಉಚಿತವಾಗಿ ಕ್ಯಾಮೆರಾ ಸಿಕ್ಕಿದೆ. ಕ್ಯಾಮೆರಾ ಬಳಸಿ ಕೇವಲ 11 ದಿನದಲ್ಲಿ ಸಿನಿಮಾದ ಚಿತ್ರೀಕರಣವನ್ನು ದಿನೇಶ್ ಪೂರ್ತಿ ಮಾಡಿದ್ದಾರೆ.

ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಸಮಸ್ಯೆಗಳನ್ನು ದಿನೇಶ್ ಹಾಗೂ ತಂಡ ಎದುರಿಸಿದೆ. 70ರ ದಶಕದ ಬಟ್ಟೆಗಳು, ವಸ್ತುಗಳು, ಲೊಕೇಶನ್, ಸೆಟ್ ಪ್ರಾಪರ್ಟಿಗಳು, ಬಟ್ಟೆಗಳು, ಆಗಿನ ಕಾಲದ ಕ್ಲ್ಯಾಪ್ ಬೋರ್ಡ್ ಇನ್ನಿತರೆಗಳನ್ನು ಸೋರ್ಸಿಂಗ್ ಮಾಡಲು ಭಾರಿ ಮೊತ್ತದ ಹಣ ಖರ್ಚಾಯ್ತಂತೆ. ಚಿತ್ರೀಕರಣ ಮಾಡುವಾಗಲೂ ಸಹ ರೀಲ್​ನಲ್ಲಿ ಚಿತ್ರೀಕರಣ ಮಾಡುತ್ತಿದ್ದರಿಂದ ಹೆಚ್ಚಿನ ಲೈಟ್ ವ್ಯವಸ್ಥೆ ಬಳಸಲೇ ಬೇಕಾಯ್ತಂತೆ. ಇದೆಲ್ಲದರಿಂದ ಬಜೆಟ್ ಏರುತ್ತಾ ಸಾಗಿದೆ.

ಇದನ್ನೂ ಓದಿ:National Award: ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳು

ಆದರೆ ಸಮಸ್ಯೆ ಪ್ರಾರಂಭವಾಗಿದ್ದು ಚಿತ್ರೀಕರಣ ಮುಗಿದ ಮೇಲೆ. ರೀಲ್​ಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಮಾಡಲು ಬಹಳ ಹಣ ವ್ಯಯವಾಯ್ತಂತೆ. ಇದರಿಂದಾಗಿ ಅಂದುಕೊಂಡ ಬಜೆಟ್​ಗಿಂತಲೂ ದುಪ್ಪಟ್ಟು ಹಣ ಖರ್ಚಾಗಿದೆ. ಆಗ ಇನ್ನಷ್ಟು ಗೆಳೆಯರು ದಿನೇಶ್​ಗೆ ಸಹಾಯ ಮಾಡಿದ್ದಾರೆ. ಅದಾದ ಮೇಲೆ ರೆಟ್ರೊ ಸಿನಿಮಾ ಆದ್ದರಿಂದ ಕಲರ್ ಗ್ರೇಡಿಂಗ್ ಸಮಸ್ಯೆ ಎದುರಾಗಿದೆ. ಆಗ ದೇಶದ ಅತ್ಯುತ್ತಮ ಕಲರಿಸ್ಟ್​ಗಳಲ್ಲಿ ಒಬ್ಬರಾದ ಕನ್ನಡಿಗರೇ ಆದ ನವೀನ್ ಶೆಟ್ಟಿ ಅವರು ಬಹುತೇಕ ಉಚಿತವಾಗಿ ಕಲರ್ ಗ್ರೇಡಿಂಗ್ ಮಾಡಿಕೊಟ್ಟಿದ್ದಾರೆ. ಅದಾದ ಬಳಿಕ ದೇಶದ ಅತ್ಯುತ್ತಮ ಸಿನಿಮಾ ಎಡಿಟರ್ ಗಳಲ್ಲಿ ಒಬ್ಬರಾದ ಕನ್ನಡಿಗ ಸುರೇಶ್ ಅರಸ್ ಅವರು ಸಿನಿಮಾವನ್ನು ಸುಂದರವಾಗಿ ಹಾಗೂ ಭಿನ್ನವಾಗಿ ಎಡಿಟ್ ಮಾಡಿಕೊಟ್ಟಿದ್ದಾರೆ. ಕೊನೆಗೆ ಕಿರುಚಿತ್ರ ತಯಾರಾಗಿದೆ. ‘ಮಧ್ಯಂತರ’ ಕಿರುಚಿತ್ರಕ್ಕೆ ಅತ್ಯುತ್ತಮ ಎಡಿಟಿಂಗ್ ಹಾಗೂ ಹೊಸ ನಿರ್ದೇಶಕರ ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳು ದೊರೆತಿವೆ.

ದಿನೇಶ್ ಶೆಣೈ ಹೇಳಿರುವಂತೆ, ಸುಮಾರು 10 ತಿಂಗಳ ಕಾಲ ಇದಕ್ಕಾಗಿ ವ್ಯಯಿಸಿದ್ದಾರೆ. ಆರಂಭದಲ್ಲಿ ತುಸು ಕಷ್ಟವಾಯ್ತಾದರೂ ಗೋವಾ ಸಿನಿಮೋತ್ಸವದಲ್ಲಿ ಕಿರುಚಿತ್ರ ಪ್ರದರ್ಶನವಾದ ಬಳಿಕ ತುಸು ಬೇಡಿಕೆ ಕುದುರಿದೆ. ಇದೀಗ ಯಾರಾದರೂ ನಿರ್ಮಾಪಕರು ನಿರ್ಮಾಪಕರು ಮುಂದೆ ಬಂದು ಈ ಕಿರುಚಿತ್ರವನ್ನು ಸಿನಿಮಾ ಮಾಡುವ ಮನಸ್ಸು ಮಾಡಿದರೆ ಅದಕ್ಕಾಗುವಷ್ಟು ವಿಷಯ, ಚಿತ್ರಕತೆ ದಿನೇಶ್ ಅವರ ಬಳಿ ಇದೆಯಂತೆ. ನಿರ್ಮಾಪಕರು ಸಿಗುವ ಭರವಸೆಯಲ್ಲಿದ್ದಾರೆ ದಿನೇಶ್ ಶೆಣೈ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ