National Award: ರಾಷ್ಟ್ರಪ್ರಶಸ್ತಿ ಪಡೆದ ಕನ್ನಡ ಸಿನಿಮಾಗಳು
70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಇಂದು (ಆಗಸ್ಟ್ 16) ಘೋಷಣೆ ಆಗಿವೆ. ಕೆಲವು ಕನ್ನಡ ಸಿನಿಮಾಗಳು ಅದರಲ್ಲೂ ಕನ್ನಡದ ‘ಜನಪ್ರಿಯ’ ಸಿನಿಮಾಗಳು ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಅವುಗಳ ಮಾಹಿತಿ ಇಲ್ಲಿದೆ.
ಇಂದು (ಆಗಸ್ಟ್ 16) ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಯವು 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಈ ವರ್ಷ ದೇಶದಾದ್ಯಂತ ಹಲವು ಭಾಷೆಗಳ ಸಿನಿಮಾಗಳು ಪ್ರಶಸ್ತಿಗಾಗಿ ಸೆಣೆಸಾಟದಲ್ಲಿದ್ದವು. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಕನ್ನಡ ಸಿನಿಮಾಗಳು ಅದರಲ್ಲಿಯೂ ಕನ್ನಡದ ‘ಜನಪ್ರಿಯ’ ಸಿನಿಮಾಗಳು ಉತ್ತಮ ಪ್ರದರ್ಶನ ತೋರಿದ್ದು, ಪ್ರಶಸ್ತಿ ಪಟ್ಟಿಯಲ್ಲಿ ಹೆಸರು ಕಾಣುವಂತಾಗಿದೆ.
‘ಕಾಂತಾರ’, ‘ಕೆಜಿಎಫ್ 2’ ಸೇರಿದಂತೆ ಇನ್ನೂ ಕೆಲವು ಉತ್ತಮ ಕನ್ನಡ ಸಿನಿಮಾಗಳು ಈ ಬಾರಿ ರಾಷ್ಟ್ರೀಯ ಪ್ರಶಸ್ತಿಗಾಗಿ ವಿವಿಧ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಿದ್ದವು. ರಿಷಬ್ ಶೆಟ್ಟಿಗೆ ಅವರಿಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರಕಿದೆ. ‘ಕಾಂತಾರ’ದ ಅತ್ಯುತ್ತಮ ನಟನೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಕನ್ನಡದ ‘ತಬರನ ಕತೆ’ ಸಿನಿಮಾದಲ್ಲಿ ನಟಿಸಿದ್ದ ತಮಿಳು ನಟ ಚಾರುಹಾಸನ್ಗೆ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ದೊರೆತಿತ್ತು, ಅದಾದ ಬಳಿಕ ‘ನಾನು ಅವನಲ್ಲ ಅವಳು’ ಸಿನಿಮಾದ ನಟನೆಗೆ ಸಂಚಾರಿ ವಿಜಯ್ಗೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಇವರ ಹೊರತಾಗಿ ಇನ್ಯಾವುದೇ ಕನ್ನಡ ಸಿನಿಮಾ ನಟನಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿರಲಿಲ್ಲ. ಇದೀಗ ರಿಷಬ್ ಶೆಟ್ಟಿ ಈ ಅತ್ಯುತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇದನ್ನೂ ಓದಿ:Breaking: ನೀಗಿದ ದಶಕಗಳ ಬರ, ರಿಷಬ್ ಶೆಟ್ಟಿಗೆ ಒಲಿದ ರಾಷ್ಟ್ರ ಪ್ರಶಸ್ತಿ
ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಮಟ್ಟದಲ್ಲಿ ಮೌಲ್ಯ ತಂದುಕೊಟ್ಟ ‘ಕೆಜಿಎಫ್ 2’ ಸಿನಿಮಾ ಸಹ ಒಂದು ಪ್ರಶಸ್ತಿಯನ್ನು ಬಾಚಿಕೊಂಡಿದೆ. ಸಿನಿಮಾದ ಆಕ್ಷನ್ ದೃಶ್ಯಗಳ ಗುಣಮಟ್ಟವನ್ನು ಮೆಚ್ಚಿ, ಅತ್ಯುತ್ತಮ ಸ್ಟಂಟ್ ಕೊರಿಯೋಗ್ರಫಿ ಪ್ರಶಸ್ತಿಯನ್ನು ‘ಕೆಜಿಎಫ್ 2’ ಸಿನಿಮಾಕ್ಕೆ ನೀಡಲಾಗಿದೆ. ಮಾತ್ರವಲ್ಲದೆ ‘ಕೆಜಿಎಫ್ 2’ ಅತ್ಯುತ್ತಮ ಕನ್ನಡ ಸಿನಿಮಾ ಪ್ರಶಸ್ತಿಗೂ ಭಾಜನವಾಗಿದೆ. ಎರಡು ಅತ್ಯುತ್ತಮ ಪ್ರಶಸ್ತಿಗಳನ್ನು ಬಾಚಿಕೊಂಡ ‘ಕೆಜಿಎಫ್ 2’ ಹಾಗೂ ‘ಕಾಂತಾರ’ ಸಿನಿಮಾಗಳು ಹೊಂಬಾಳೆಯದ್ದೇ ನಿರ್ಮಾಣದ ಸಿನಿಮಾಗಳು ಎಂಬುದು ಸಹ ವಿಶೇಷ.
ಮನೊರಂಜನೆ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ‘ಕಾಂತಾರ’ ಸಿನಿಮಾ ಆಯ್ಕೆ ಆಗಿದೆ. ರಿಷಬ್ ಶೆಟ್ಟಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವ ಜೊತೆಗೆ ಅವರ ನಿರ್ದೇಶನಕ್ಕೂ ಈ ಮೂಲಕ ಗೌರವ ಲಭಿಸಿದಂತೆ ಆಗಿದೆ. ಮನೊರಂಜನೆ ವಿಭಾಗದಲ್ಲಿ ‘ಕಾಂತಾರ’ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ದೊರೆತಿದೆ.
‘ಮಧ್ಯಂತರ’ ಹೆಸರಿನ ಕಿರುಚಿತ್ರಕ್ಕೆ ನಾನ್ ಫೀಚರ್ ವಿಭಾಗದಲ್ಲಿ ಅತ್ಯುತ್ತಮ ಎಡಿಟಿಂಗ್ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಘೋಷಿಸಿದ ಜ್ಯೂರಿ, ‘ಮಧ್ಯಂತರ’ ಬಹಳ ಭಿನ್ನವಾದ ಕಿರುಚಿತ್ರ ಮತ್ತು ಆಸಕ್ತಿಕರ ಎಡಿಟಿಂಗ್ ಇದರಲ್ಲಿದೆ ಎಂದು ಬಣ್ಣಿಸಿದರು. ಸುರೇಶ್ ಅರಸ್ ಅವರಿಗೆ ‘ಮಧ್ಯಂತರ’ ಕಿರುಚಿತ್ರದ ಅತ್ಯುತ್ತಮ ಎಡಿಟಿಂಗ್ ಪ್ರಶಸ್ತಿ ದೊರಕಿದೆ. ‘ಮಧ್ಯಂತರ’ ಕಿರು ಚಿತ್ರಕ್ಕೆ ನಾನ್ ಫೀಚರ್ ವಿಭಾಗದಲ್ಲಿ ಮತ್ತೊಂದು ಪ್ರಶಸ್ತಿ ದೊರೆತಿದೆ. ನಾನ್ ಫೀಚರ್ ವಿಭಾಗದ ಹೊಸ ನಿರ್ದೇಶಕನ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ‘ಮಧ್ಯಂತರ’ ಸಿನಿಮಾದ ನಿರ್ದೇಶಕ ಬಸ್ತಿ ದಿನೇಶ್ ಶೆಣೈ ಅವರಿಗೆ ಪ್ರಶಸ್ತಿ ದೊರೆತಿದೆ.
ನಾನ್ ಫೀಚರ್ ವಿಭಾಗದಲ್ಲಿ ಕನ್ನಡದ ‘ರಂಗ ವೈಭೋಗ’ ಎಂಬ ಸಿನಿಮಾಕ್ಕೆ ಅತ್ಯುತ್ತಮ ಕಲಾ ಮತ್ತು ಸಂಸ್ಕೃತಿ ಸಿನಿಮಾ ಪ್ರಶಸ್ತಿ ನೀಡಲಾಗಿದೆ. ಸಿನಿಮಾವನ್ನು ಸುನಿಲ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಸುನಿಲ್ ಪುರಾಣಿಕ್ ಪುತ್ರ ನಿರ್ದೇಶನ ಮಾಡಿದ್ದ ಡೊಳ್ಳು ಸಿನಿಮಾಕ್ಕೂ ರಾಷ್ಟ್ರಪ್ರಶಸ್ತಿ ಬಂದಿತ್ತು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅತ್ಯುತ್ತಮ ನಟ ಪ್ರಶಸ್ತಿ ಕನ್ನಡಿಗ ರಿಷಬ್ ಶೆಟ್ಟಿಗೆ ದೊರೆತಿದೆ ಜೊತೆಗೆ ಅತ್ಯುತ್ತಮ ನಟಿ ಪ್ರಶಸ್ತಿ ಸಹ ಕನ್ನಡಿತಿಗೆ ದೊರೆತಿದೆ. ಕನ್ನಡದ ನಟಿ ನಿತ್ಯಾ ಮೆನನ್ ಅವರಿಗೆ ತಮಿಳಿನ ‘ತಿರುಚಿತ್ರಂಬಳಂ’ ಸಿನಿಮಾಕ್ಕಾಗಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರಕಿದೆ. ನಿತ್ಯಾ ಮೆನನ್ ಮಾತ್ರವೇ ಅಲ್ಲದೆ ಮಾನಸಿ ಪಾರೆಖ್ ಅವರಿಗೂ ಸಹ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ನೀಡಲಾಗಿದ್ದು, ಈ ಪ್ರಶಸ್ತಿಯನ್ನು ಅವರ ‘ಕಚ್ ಎಕ್ಸ್ಪ್ರೆಸ್’ ಸಿನಿಮಾದ ನಟನೆಗಾಗಿ ನೀಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Fri, 16 August 24