ಕಂಟಕ ದೂರಾಗಲೆಂದು ಹೋಮ: ದೊಡ್ಡಣ್ಣ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ಆಗ್ರಹ
ಚಿತ್ರರಂಗಕ್ಕೆ ಇರುವ ಕಂಟಕ ದೂರಾಗಲೆಂದು ಕಲಾವಿದರ ಸಂಘದಲ್ಲಿ ಪೂಜೆ ಮಾಡಲಾಗಿದೆ. ಆದರೆ ಈ ಪೂಜೆಯಿಂದಲೇ ಕಲಾವಿದರ ಸಂಘಕ್ಕೆ ಕಂಟಕ ಬರುವಂತಿದೆ. ಕಲಾವಿದರ ಸಂಘವು ಸಹಕಾರ ಸಂಘಗಳ ನಿಯಮ ಪಾಲಿಸಿಲ್ಲ ಎಂದು ಆರೋಪಿಸಿರುವ ಸಾಮಾಜಿಕ ಕಾರ್ಯಕರ್ತ ಎನ್ಆರ್ ರಮೇಶ್ ತನಿಖೆಗೆ ಒತ್ತಾಯಿಸಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಇರುವ ಕಂಟಕ ದೂರಾಗಲೆಂದು ಇತ್ತೀಚೆಗಷ್ಟೆ ಕಲಾವಿದರ ಸಂಘದ ವತಿಯಿಂದ ಹೋಮ, ಹವನ ವಿವಿಧ ರೀತಿಯ ಪೂಜೆಗಳನ್ನು ಮಾಡಿಸಲಾಯ್ತು. ನಟ ದೊಡ್ಡಣ್ಣ ದಂಪತಿ ಕಲಾವಿದರ ಪರವಾಗಿ ಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರಾಕ್ಲೈನ್ ವೆಂಕಟೇಶ್ ಸೇರಿದಂತೆ ಹಲವು ಕಲಾವಿದರು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಬಗ್ಗೆ ಚಿತ್ರರಂಗದಲ್ಲಿ ಹೆಚ್ಚಿನ ಟೀಕೆಗಳೇನೂ ವ್ಯಕ್ತವಾಗಿರಲಿಲ್ಲ. ಆದರೆ ಈಗ ಸಾಮಾಜಿಕ ಕಾರ್ಯಕರ್ತರೊಬ್ಬರು ಕಲಾವಿದರ ಸಂಘದ ವಿರುದ್ಧ ಭ್ರಷ್ಟಾಚಾರ, ಅನೀತಿ ಆರೋಪಗಳನ್ನು ಮಾಡಿದ್ದಾರೆ. ಅಲ್ಲದೆ ನಟ ದೊಡ್ಡಣ್ಣ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಾಮಾಜಿಕ ಹೋರಾಟಗಾರ, ರಾಜಕಾರಣಿ ಎನ್ಆರ್ ರಮೇಶ್ ಈ ಬಗ್ಗೆ ಮಾತನಾಡಿದ್ದು, ‘ಸಹಕಾರ ಸಂಘಗಳ ನಿಯಮದ ಅನುಸಾರ ಕಲಾವಿದರ ಸಂಘಕ್ಕೆ ಚುನಾವಣೆಗಳನ್ನು ನಡೆಸಲಾಗಿಲ್ಲ. ಕಲಾವಿದರ ಸಂಘದ ಯಾವೊಬ್ಬ ಪದಾಧಿಕಾರಿಯೂ ಸಹ ಸೂಕ್ತವಾಗಿ ಜವಾಬ್ದಾರಿಗಳನ್ನು ನಿಭಾಯಿಸಿಲ್ಲ. ನಿಯಮದ ಪ್ರಕಾರ ಲೆಕ್ಕ ಪರಿಶೋಧನಾ ವರದಿಯನ್ನು ಸಹ ಸಲ್ಲಿಸಿಲ್ಲ. ದೊಡ್ಡಣ್ಣ ಕಲಾವಿದರ ಸಂಘದ ಖಜಾಂಚಿ ಆಗಿದ್ದಾರೆ ಆದರೆ ಉಳಿದ ಪದಾಧಿಕಾರಿಗಳು ಯಾರು? ಅವರ ಕಾರ್ಯವೇನು ಎಂಬುದು ಯಾರಿಗೂ ಗೊತ್ತಿಲ್ಲ’ ಎಂದಿದ್ದಾರೆ ಎನ್ಆರ್ ರಮೇಶ್.
ಸಂಘದಲ್ಲಿರುವ ಇತರೇ ಪದಾಧಿಕಾರಿಗಳು ಯಾರಿಗೂ ಒಂದೇ ಒಂದು ಸಂದೇಶವೂ ಹೋಗಲ್ಲ. ಸುಂದರ್ ರಾಜ್, ಜಗ್ಗೇಶ್, ಶ್ರೀನಾಥ್, ರಮೇಶ್ ಯಾರಿಗೂ ಸಹ ಸಂಘದಲ್ಲಿ ಏನಾಗುತ್ತಿದೆ ಎಂದ ಸಂದೇಶ ಸಹ ಹೋಗುವುದಿಲ್ಲ. ಕೇವಲ ಇಬ್ಬರು-ಮೂವರು ಕಲಾವಿದರ ಸಂಘವನ್ನು ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಇದೆಲ್ಲ ನಿಲ್ಲಬೇಕು, ಸಹಕಾರ ಸಂಘಗಳ ನಿಯಮದ ಅನುಸಾರವಾಗಿ ಚುನಾವಣೆ ನಡೆದು ಪದಾಧಿಕಾರಿಗಳ ನೇಮಕ ಆಗಬೇಕು. ಅಲ್ಲದೆ ಲೆಕ್ಕ ಪರಿಶೋಧನಾ ವರದಿಯನ್ನು ಕೊಡದೇ ಇರುವ ಖಜಾಂಚಿ ದೊಡ್ಡಣ್ಣ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಬೇಕು ಎಂದು ಸಹ ಅವರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕಲಾವಿದರ ಸಂಘದಲ್ಲಿ ಪೂಜೆ, ಹೋಮ: ಪ್ರಮುಖ ನಟರೇ ಬಂದಿಲ್ಲ ಎಂದಿದ್ದಕೆ ಸುಮಲತಾ ಏನಂದ್ರು?
ಪೂಜೆ ನೆಪದಲ್ಲಿ ಕಲಾವಿದರು ಒಗ್ಗಟ್ಟಾಗಿದ್ದಾರೆ ಎಂಬ ಮಾತಿಗೆ ಪ್ರತಿಕ್ರಿಯಿಸಿ, ‘ಕಲಾವಿದರಲ್ಲಿ ಎಲ್ಲಿದೆ ಒಗ್ಗಟ್ಟು? ಕಲಾವಿದರಲ್ಲಿ ಒಗ್ಗಟ್ಟು ಎನ್ನುವುದು ಎಂಟನೇ ಅದ್ಭುತ. ಕಲಾವಿದರ ಸಂಘದಲ್ಲಿ ರಾಕ್ಲೈನ್ ವೆಂಕಟೇಶ್ ಮತ್ತು ದೊಡ್ಡಣ್ಣ ಇಬ್ಬರೇ ಇರೋದು. ಇನ್ನುಳಿದವರೆಲ್ಲ ನಾಮ್ಕೆ ವಾಸ್ತೆ ಅಷ್ಟೆ ಎಂದಿದ್ದಾರೆ ರಮೇಶ್.
ಕೆಲ ದಿನದ ಹಿಂದಷ್ಟೆ ಕಲಾವಿದರ ಸಂಘದಲ್ಲಿ ಅದ್ಧೂರಿಯಾಗಿ ಕೆಲ ವಿಶೇಷ ಪೂಜೆ, ಹೋಮ-ಹವನಗಳನ್ನು ಮಾಡಿಸಲಾಯ್ತು. ಈ ಪೂಜೆ ಕಾರ್ಯಕ್ರಮಗಳ ಮುಂದಾಳತ್ವವನ್ನು ದೊಡ್ಡಣ್ಣ ಮತ್ತು ರಾಕ್ಲೈನ್ ವೆಂಕಟೇಶ್ ಹೊತ್ತಿದ್ದರು. ನಟ ದೊಡ್ಡಣ್ಣ ಮತ್ತು ಅವರ ಪತ್ನಿಯವರೇ ಪೂಜೆಗೆ ಕೂತಿದ್ದರು. ಪ್ರಕಾಶ್ ಅಮ್ಮಣ್ಣಾಯ ಸೇರಿದಂತೆ ಇನ್ನೂ ಕೆಲವು ಆಚಾರ್ಯರು, ಪೂಜಾರಿಗಳು ಪೂಜೆಗೆ ಆಗಮಿಸಿ ಪೂಜೆ ನಡೆಸಿಕೊಟ್ಟರು. ದೇವರ ನುಡಿಯನ್ನು ಸಹ ಈ ಸಂದರ್ಭದಲ್ಲಿ ಕೇಳಲಾಯ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Fri, 16 August 24