ಶೀರ್ಷಿಕೆಯಿಂದ ಕೌತುಕ ಮೂಡಿಸಿರುವ ‘ಮೆಜೆಸ್ಟಿಕ್ 2’ ಸಿನಿಮಾದ ಶೂಟಿಂಗ್ ಮುಕ್ತಾಯದ ಹಂತದಲ್ಲಿದೆ. ಈ ಸಿನಿಮಾಗೆ ರಾಮು ನಿರ್ದೇಶನ ಮಾಡುತ್ತಿದ್ದಾರೆ. ಮೆಜೆಸ್ಟಿಕ್ ಏರಿಯಾದಲ್ಲಿ ಹುಟ್ಟಿ ಬೆಳೆದ ಹುಡುಗನ ಕಥೆಯನ್ನು ‘ಮೆಜೆಸ್ಟಿಕ್ 2’ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಕುಮಾರ್ ಅವರು ಹೀರೋ ಆಗಿ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ‘ಅಮ್ಮಾ ಎಂಟರ್ ಪ್ರೈಸಸ್’ ಮೂಲಕ ಚಿತ್ರದುರ್ಗದ ಹೆಚ್. ಆನಂದಪ್ಪ ಅವರು ‘ಮೆಜೆಸ್ಟಿಕ್ 2’ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಹಿರಿಯ ನಟಿ ಮಾಲಾಶ್ರೀ ಕೂಡ ನಟಿಸುತ್ತಿದ್ದಾರೆ.
‘ಮೆಜೆಸ್ಟಿಕ್ 2’ ಸಿನಿಮಾ ಹೀರೋ ಇಂಟ್ರಡಕ್ಷನ್ ಹಾಡಿನ ಚಿತ್ರೀಕರಣವನ್ನು ಇತ್ತೀಚಿಗೆ ಆರ್.ಎಸ್. ಗೌಡ ಅವರ ಸ್ಟುಡಿಯೋದಲ್ಲಿ ಮಾಡಲಾಯಿತು. ಅಣ್ಣಮ್ಮ ದೇವಿ ಜಾತ್ರೆಯ ಅದ್ದೂರಿ ಸೆಟ್ನಲ್ಲಿ ಶೂಟಿಂಗ್ ನಡೆದಿದೆ. ಇದೇ ಸಾಂಗ್ನಲ್ಲಿ ಮಾಲಾಶ್ರೀ ಮತ್ತು ನಾಯಕ ಭರತ್ ಕುಮಾರ್ ಅವರು ನೂರಾರು ಸಹ-ಕಲಾವಿದರ ಜೊತೆ ಹೆಜ್ಜೆ ಹಾಕಿದ್ದಾರೆ. ತ್ರಿಭುವನ್ ಅವರು ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.
ಈ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಮಾಲಾಶ್ರೀ ಮಾತನಾಡಿದ್ದಾರೆ. ‘ನಿರ್ದೇಶಕ ರಾಮು ಅವರು ನಮ್ಮ ಬ್ಯಾನರಿನಲ್ಲಿ ಕೆಲಸ ಮಾಡಿದ್ದಾರೆ. ನನ್ನನ್ನು ಕಂಡರೆ ಅವರಿಗೆ ಬಹಳ ಅಭಿಮಾನವಿದೆ. ಈ ಸಿನಿಮಾದಲ್ಲಿ ಒಂದು ಡ್ಯಾನ್ಸ್ ಮಾಡಬೇಕು ಅಂತ ಅವರು ಕೇಳಿಕೊಂಡರು. ನಾನು ಸ್ಟೆಪ್ ಹಾಕಿ ಬಹಳ ವರ್ಷಗಳಾಯಿತು. ಎಲ್ಲದೂ ಮರೆತು ಹೋಗಿದೆ ಅಂತ ಅವರಿಗೆ ಹೇಳಿದ್ದೆ. ಆಗ ತ್ರಿಭುವನ್ ಮಾಸ್ಟರ್ ಬಂದು ಪ್ರೋತ್ಸಾಹ ನೀಡಿದರು. ಇದು ಮಾರಮ್ಮ ದೇವಿ ಹಾಡು. ನನ್ನ ಡ್ಯಾನ್ಸ್ ನೋಡಿ ನನಗೇ ಖುಷಿ ಆಯಿತು. ಇದು ನಾನೇನಾ ಎನಿಸಿತು. ನನ್ನ ಹಿಂದಿನ ದಿನಗಳನ್ನು ನೆನಪಿಸಿತು. ನಾನು ತುಂಬ ಎಂಜಾಯ್ ಮಾಡಿದ್ದೇನೆ’ ಎಂದು ಮಾಲಾಶ್ರಿ ಹೇಳಿದ್ದಾರೆ.
‘ಮಾಲಾಶ್ರೀ ಅವರಂತಹ ಮಹಾನ್ ನಟಿ ನಮ್ಮ ಸಿಮಿಮಾದಲ್ಲಿ ನಟಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ’ ಎಂದು ನಿರ್ಮಾಪಕ ಹೆಚ್. ಆನಂದಪ್ಪ ಹೇಳಿದ್ದಾರೆ. ‘ಈಗಾಗಲೇ ಶೇ 80ರಷ್ಟು ಶೂಟಿಂಗ್ ಮುಗಿದಿದೆ. ದೀಪಾವಳಿ ಹಬ್ಬದ ವೇಳೆಗೆ ಸಿನಿಮಾ ರಿಲೀಸ್ ಮಾಡಲು ಪ್ಲಾನ್ ಇದೆ’ ಎಂದು ಅವರು ಮಾಹಿತಿ ನೀಡಿದರು. ನಿರ್ದೇಶಕ ರಾಮು ಮಾತನಾಡಿ, ‘ಒಂದು ಡ್ಯುಯೆಟ್ ಹಾಡು ಮತ್ತು ಆ್ಯಕ್ಷನ್ ಸೀನ್ ಬಾಕಿ ಇದೆ. ಶೂಟಿಂಗ್ ಜೊತೆಜೊತೆಯಲ್ಲೇ ಎಡಿಟಿಂಗ್ ಕೂಡ ನಡೆಯುತ್ತಿದೆ. ನಾವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಸಿನಿಮಾ ಮೂಡಿಬರುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ: ಶೆಡ್ಡಿಗೆ ಹೋಗಣ ಬಾ, ಕುಂಟೆಬಿಲ್ಲೆ ಆಡೋಣ ಬಾ: ‘ಮೆಜೆಸ್ಟಿಕ್ 2’ ಚಿತ್ರದಲ್ಲಿ ಹೀಗೊಂದು ಹಾಡು
‘ಮಾಲಾಶ್ರೀ ಅವರ ಜೊತೆ ತುಂಬ ಹಾಡುಗಳನ್ನು ಮಾಡಿದ್ದೇನೆ. ಈಗ ಮತ್ತೆ ಅವರೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತಸ ಆಗುತ್ತಿದೆ’ ಎಂದು ಕೊರಿಯೋಗ್ರಾಫರ್ ತ್ರಿಭುವನ್ ಹೇಳಿದರು. ಈ ಸಿನಿಮಾದಲ್ಲಿ ನಟ ಭರತ್ ಅವರು ದರ್ಶನ್ ಫ್ಯಾನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಿರಿಯ ನಟಿ ಶೃತಿ ಕೂಡ ಈ ಪಾತ್ರವರ್ಗದಲ್ಲಿ ಇದ್ದಾರೆ. ವಿನು ಮನಸು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ವೀನಸ್ ಮೂರ್ತಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.