ಹಾಫ್​ ಸೆಂಚುರಿ ಬಾರಿಸಿದ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​; 50 ಸಿನಿಮಾಗಳ ಮೈಲಿಗಲ್ಲು

ಕನ್ನಡ ಚಿತ್ರರಂಗದ ಜನಪ್ರಿಯ ಮ್ಯೂಸಿಕ್​ ಡೈರೆಕ್ಟರ್​ ಅಜನೀಶ್‌ ಲೋಕನಾಥ್ ಅವರು ಈಗೊಂದು ಮೈಲುಗಲ್ಲು ಸಾಧಿಸಿದ್ದಾರೆ. ಚಿತ್ರರಂಗಕ್ಕೆ ಬಂದು 21 ವರ್ಷ ಕಳೆದಿರುವ ಅವರು ಬರೋಬ್ಬರಿ 50 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನೇಕ ಸೂಪರ್​ ಹಿಟ್​ ಹಾಡುಗಳನ್ನು ನೀಡುವ ಮೂಲಕ ಸಿನಿಪ್ರಿಯ ಮನ ಗೆದ್ದಿದ್ದಾರೆ. ತಮ್ಮ ವೃತ್ತಿ ಬದುಕಿನ ಬಗ್ಗೆ ಅವರು ಮಾತನಾಡಿದ್ದಾರೆ.

ಹಾಫ್​ ಸೆಂಚುರಿ ಬಾರಿಸಿದ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​; 50 ಸಿನಿಮಾಗಳ ಮೈಲಿಗಲ್ಲು
ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​
Follow us
|

Updated on: Sep 01, 2024 | 8:21 PM

ಚಿತ್ರರಂಗದಲ್ಲಿ 21 ವರ್ಷಗಳ ಅನುಭವ ಇರುವ ಅಜನೀಶ್​ ಲೋಕನಾಥ್​ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾಗಿ ದಶಕ ಕಳೆದಿದೆ. ‘ಕಾಂತಾರ’, ‘ಕಿರಿಕ್​ ಪಾರ್ಟಿ’, ‘ವಿಕ್ರಾಂತ್​ ರೋಣ’, ‘ರಂಗಿತರಂಗ’, ‘ಬೆಲ್​ ಬಾಟಂ’ ಮುಂತಾದ ಸಿನಿಮಾಗಳ ಮೂಲಕ ಅಜನೀಶ್​ ಲೋಕನಾಥ್​ ಮೋಡಿ ಮಾಡಿದರು. ಈಗ 50 ಸಿನಿಮಾಗಳನ್ನು ಪೂರೈಸಿದ ಅವರು ಬಹುಬೇಡಿಕೆಯ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸುದೀಪ್​ ನಟನೆಯ ‘ಮ್ಯಾಕ್ಸ್​’, ಉಪೇಂದ್ರ ಅಭಿನಯ/ನಿರ್ದೇಶನದ ‘ಯುಐ’ ಮುಂತಾದ ಬಹುನಿರೀಕ್ಷಿತ ಸಿನಿಮಾಗಳು ಅಜನೀಶ್​ ಲೋಕನಾಥ್​ ಕೈಯಲ್ಲಿವೆ.

ಹಾಫ್​ ಸೆಂಚುರಿ ಬಾರಿಸಿರುವ ಈ ಸಂದರ್ಭದಲ್ಲಿ ಅಜನೀಶ್​ ಲೋಕನಾಥ್​ ಅವರು ತಮ್ಮ ವೃತ್ತಿ ಜೀವನವದ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘2003ರಲ್ಲಿ ನನ್ನ ಕೆಲಸ ಶುರು ಆಯಿತು. ಪ್ರಾರಂಭದಲ್ಲಿ ಕೀ ಬೋರ್ಡ್‌ ಪ್ಲೇಯರ್‌ ಆಗಿದ್ದೆ. ನಂತರ 2005ರಿಂದ ಸಣ್ಣ-ಪುಟ್ಟ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದೆ. ಆದರೆ, ಯಾವುದೂ ಬಿಡುಗಡೆ ಆಗಲಿಲ್ಲ. ಒಳ್ಳೆಯ ಪ್ರಾಜೆಕ್ಟ್​ ಸಿಗುತ್ತಿರಲಿಲ್ಲ. 2010ರಲ್ಲಿ ಬಂದ ‘ಶಿಶಿರ’ ಸಿನಿಮಾ ನನ್ನ ಕೈ ಹಿಡಿಯಿತು. ಆಮೇಲೆ ಬಂದ ‘ಉಳಿದವರು ಕಂಡಂತೆ’ ಒಳ್ಳೆಯ ಹೆಸರು ತಂದುಕೊಟ್ಟಿತು. ಕನ್ನಡ ಅಷ್ಟೇ ಅಲ್ಲದೆ ಬೇರೆ ಭಾಷೆಗಳಿಂದಲೂ ಪ್ರಶಂಸೆ ಸಿಕ್ಕಿತು. ‘ರಂಗಿತರಂಗ’ ಸಿನಿಮಾದಿಂದ ಕಮರ್ಷಿಯಲ್‌ ಸಕ್ಸಸ್‌ ದೊರೆಯಿತು. ‘ಕಿರಿಕ್‌ ಪಾರ್ಟಿ’ ಚಿತ್ರದಿಂದ ಟಾಲಿವುಡ್​ನಲ್ಲೂ ಅವಕಾಶ ಬಂತು’ ಎಂದಿದ್ದಾರೆ ಅಜನೀಶ್​ ಲೋಕನಾಥ್​.

‘ಸಿನಿಮಾಕ್ಕಾಗಿ ಕೆಲಸ ಮಾಡಬೇಕು ಎಂಬುದು ನನ್ನ ಕನಸು. ನಾನು ಸಿನಿಮಾದವನು. ಸಂಗೀತದವನು ಎನ್ನುವ ಬದಲು ಸಿನಿಮಾದವನು ಎಂಬ ಫೀಲ್‌ನಲ್ಲಿ ನಾನು ಕೆಲಸ ಮಾಡುತ್ತೇನೆ. ನನ್ನ ದೃಷ್ಟಿಕೋನದ ಜತೆಗೆ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಹಾಗೂ ಕಲಾವಿದರ ಪಾಯಿಂಟ್‌ ಆಫ್‌ ವ್ಯೂನಲ್ಲಿ ನಾನು ಕೆಲಸ ಮಾಡ್ತೀನಿ. ನನ್ನ ಸಂಗೀತದಿಂದ, ಹಾಡಿನಿಂದ ಒಂದು ಸಿನಿಮಾ ಹಿಟ್‌ ಆಗಬಹುದು. ಹೇಗಾದರೂ ಒಂದು ಸಿನಿಮಾದಿಂದ ಒಂದು ಅಥವಾ ಎರಡು ಸಾಂಗ್ ಹಿಟ್‌ ಆಗಬೇಕು ಎಂಬ ದೃಷ್ಟಿಯಲೇ ನಾನು ಕೆಲಸ ಮಾಡುತ್ತೇನೆ’ ಎಂದು ಅಜನೀಶ್​ ಲೋಕನಾಥ್​ ಹೇಳಿದ್ದಾರೆ.

ಇದನ್ನೂ ಓದಿ: ರಜನಿಕಾಂತ್​ ನಟನೆಯ ‘ಕೂಲಿ’ ಸಿನಿಮಾದಿಂದ ಉಪೇಂದ್ರ ಫಸ್ಟ್​ ಲುಕ್​ ಪೋಸ್ಟರ್ ಬಿಡುಗಡೆ

‘ಒಂದು ವರ್ಷಕ್ಕೆ 3-4 ಸಿನಿಮಾ ಮಾಡಿದ್ದೇನೆ ಎಂದ್ರೂ, ಮೂರು ತಿಂಗಳಿಗೆ ಒಂದು ಸಿನಿಮಾ ಆಗುತ್ತದೆ. ಏನನ್ನು ಕೊಡಬೇಕು, ಹೇಗಿರಬೇಕು ಎಂಬ ಆ ಪ್ರೊಸೆಸ್‌ಗೆ ಇಲ್ಲಿ ಬಹಳ ಸಮಯ ಬೇಕಾಗುತ್ತದೆಯೇ ಹೊರತು, ಮ್ಯೂಸಿಕ್‌ ಮಾಡಲು ಅಲ್ಲ. ಅದೇ ರೀತಿ ‘ಮ್ಯಾಕ್ಸ್‌’ ಸಿನಿಮಾ, UI ಸಿನಿಮಾಗಳನ್ನು ನೋಡಿದ ಮೇಲೆ ಸಂಗೀತ ಸಖತ್‌ ಹೊಂದಿಕೆ ಆಗಿದೆ. ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಎಲ್ಲ ಅಂಶಗಳನ್ನೂ ಸಂಗೀತದ ಮೂಲಕ ನೀಡಿದ್ದೇನೆ. ನೋಡುಗನಿಗೆ ಒಂದೊಳ್ಳೆ ಟ್ರೀಟ್‌ ಈ ಸಿನಿಮಾಗಳ ಮೂಲಕ ಸಿಗಲಿದೆ’ ಎಂದು ಅಜನೀಶ್​ ಲೋಕನಾಥ್​ ಅವರು ಭರವಸೆಯ ಮಾತುಗಳನ್ನು ಆಡಿದ್ದಾರೆ.

ಅಜನೀಶ್​ ಲೋಕನಾಥ್​ ಗಾಡ್‌ಫಾದರ್‌ ಯಾರು?

‘ಸಂಗೀತದ ಮೊದಲ ಗುರು ನನ್ನ ತಂದೆ. ನಾನು ಅವರಿಂದಲೇ ಸಂಗೀತದ ಅ ಆ ಇ ಈ ಕಲಿತಿದ್ದು. ನನಗೆ ಸಿನಿಮಾರಂಗದಲ್ಲಿ ಗಾಡ್‌ಫಾದರ್‌ ಆದವರು ಕೆ. ಕಲ್ಯಾಣ್‌. ಮೊದಲಿಗೆ ನಾನು ಬೆಂಗಳೂರಿಗೆ ಬಂದಾಗ, ಸಿನಿಮಾ ಕ್ಷೇತ್ರದ ಅನುಭವ ಹೇಳಿ ಕೊಟ್ಟವರೇ ಅವರು. ಒಂದು ವರ್ಷ ಅವರ ಮನೆಯಲ್ಲಿಯೇ ಇದ್ದೆ. ಸಂಗೀತ ಗೊತ್ತಿತ್ತು. ಆದರೆ, ಸಿನಿಮಾ ಮ್ಯೂಸಿಕ್‌ ಹೇಗೆ ವರ್ಕ್‌ ಆಗುತ್ತದೆ ಎಂಬುದು ಗೊತ್ತಿರಲಿಲ್ಲ. ಆ ಅನುಭವ ಸಿಕ್ಕಿದ್ದೇ ಅಲ್ಲಿ. ಅವರೇ ನನ್ನ ಗಾಡ್‌ ಫಾದರ್‌’ ಎಂದಿದ್ದಾರೆ ಅಜನೀಶ್​.

ಅಜನೀಶ್​ ಲೋಕನಾಥ್​ ಅವರಿಗೆ ಸಿ.ಆರ್‌. ಬಾಬಿ ಅವರು ಬ್ಯಾಕ್‌ಬೋನ್‌ ಆಗಿದ್ದಾರೆ. ‘ಕಮರ್ಷಿಯಲ್‌ ವಿಚಾರಕ್ಕೆ ಬಾಬಿ ಅವರು ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ. 2006ರಿಂದಲೂ ಅವರು ನನ್ನ ಜತೆಗಿದ್ದಾರೆ. ಸಂಗೀತದಲ್ಲಿಯೂ ಸಹಾಯ ಮಾಡುತ್ತಿದ್ದಾರೆ. ವ್ಯಾವಹಾರಿಕವಾಗಿ ಎಲ್ಲವನ್ನೂ ಅವರೇ ನೋಡಿಕೊಳ್ತಾರೆ. ಮುಂದಿನ ದಿನಗಳಲ್ಲಿಯೂ ಅವರೇ ನೋಡಿಕೊಳ್ಳಲಿದ್ದಾರೆ. ನನ್ನ ಈ ಗೆಲುವಿನ ಅನುಪಾತವನ್ನೂ ಹೇಗೆ ಮುಂದುವರಿಸಿಕೊಂಡು ಹೋಗಬೇಕು ಎಂಬುದನ್ನು ಬಾಬಿ ನೋಡಿಕೊಳ್ಳುತ್ತಿದ್ದಾರೆ. ಅವರೂ ಒಬ್ಬ ಸಂಗೀತ ನಿರ್ದೇಶಕರಾದರೂ ನನ್ನ ಜೊತೆಗೆ ನಿಂತಿದ್ದಾರೆ’ ಎಂದು ಅಜನೀಶ್‌ ಹೇಳಿದ್ದಾರೆ.

ವಿಶೇಷ ಏನೆಂದರೆ, ಸಂಗೀತ ಕ್ಷೇತ್ರದಲ್ಲಿ ಮೋಡಿ ಮಾಡಿರುವ ಅಜನೀಶ್‌ ಲೋಕನಾಥ್‌ ಹಾಗೂ ಸಿ.ಆರ್‌. ಬಾಬಿ ಅವರು ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ‘Abbs Studios’ ಮೂಲಕ ಮೊದಲ ಸಿನಿಮಾವಾಗಿ ‘ಜಸ್ಟ್‌ ಮ್ಯಾರೀಡ್‌’ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶೈನ್‌ ಶೆಟ್ಟಿ ಹಾಗೂ ಅಂಕಿತಾ ಅಮರ್‌ ಅವರು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.