‘ಮನದ ಕಡಲು’ ಸಿನಿಮಾಗಾಗಿ ಅರ್ಥವಿಲ್ಲದ ಹಾಡು ಬರೆದ ಯೋಗರಾಜ್​ ಭಟ್​

ಸುಮುಖ, ಅಂಜಲಿ ಅನೀಶ್​, ರಾಶಿಕಾ ಶೆಟ್ಟಿ, ರಂಗಾಯಣ ರಘು ಮುಂತಾದವರು ನಟಿಸಿದ ‘ಮನದ ಕಡಲು’ ಸಿನಿಮಾಗೆ ಚಿತ್ರೀಕರಣ ಮುಕ್ತಾಯ ಆಗಿದೆ. ಯೋಗರಾಜ್​ ಭಟ್​ ನಿರ್ದೇಶನದ, ಈ. ಕೃಷ್ಣಪ್ಪ ನಿರ್ಮಾಣದ ಈ ಸಿನಿಮಾದಿಂದ ಹೊಸ ಹಾಡನ್ನು ರಿಲೀಸ್ ಮಾಡಲಾಗಿದೆ. ವಿಚಿತ್ರವಾದ ಸಾಹಿತ್ಯವಿರುವ ಹಾಡಿನ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು.

‘ಮನದ ಕಡಲು’ ಸಿನಿಮಾಗಾಗಿ ಅರ್ಥವಿಲ್ಲದ ಹಾಡು ಬರೆದ ಯೋಗರಾಜ್​ ಭಟ್​
Sumukha, Yogaraj Bhat, E Krishnappa

Updated on: Jan 09, 2025 | 6:06 PM

ಹಾಡುಗಳ ಮೂಲಕ ‘ಮನದ ಕಡಲು’ ಸಿನಿಮಾ ಸುದ್ದಿ ಆಗುತ್ತಿದೆ. ಕೆಲವೇ ದಿನಗಳ ಹಿಂದೆ ‘ಹೂ ದುಂಬಿಯ ಕಥೆ..’ ಹಾಡನ್ನು ಬಿಡುಗಡೆ ಮಾಡಲಾಗಿತ್ತು. ಯೋಗರಾಜ್​ ಭಟ್​ ಬರೆದ ಆ ಹಾಡಿನ ಸಾಹಿತ್ಯ ಕೇಳಿ ಪ್ರೇಮಿಗಳ ಮನಸ್ಸಿಗೆ ಖುಷಿ ಆಗಿತ್ತು. ಈಗ ಇದೇ ಸಿನಿಮಾದಿಂದ 2ನೇ ಹಾಡು ರಿಲೀಸ್ ಆಗಿದೆ. ಆದರೆ ಯಾವುದೇ ಕಾರಣಕ್ಕೂ ಈ ಹಾಡಿನ ಸಾಹಿತ್ಯ ಅರ್ಥ ಆಗುವುದಿಲ್ಲ. ಯಾಕೆಂದರೆ, ಇದು ಅರ್ಥ ಇರುವ ಹಾಡಲ್ಲ. ಬದಲಿಗೆ ಅನರ್ಥದ ಹಾಡು. ಇದನ್ನು ಕೂಡ ಯೋಗರಾಜ್ ಭಟ್ ಅವರೇ ಬರೆದಿದ್ದಾರೆ.

‘ಮುಂಗಾರುಮಳೆ’ ಸಿನಿಮಾಗೆ ಈ. ಕೃಷ್ಣಪ್ಪ ಅವರು ಬಂಡವಾಳ ಹೂಡಿದ್ದರು. ಯೋಗರಾಜ್ ಭಟ್​ ನಿರ್ದೇಶನ ಮಾಡಿದ್ದರು. ಈಗ ಅವರಿಬ್ಬರ ಕಾಂಬಿನೇಷನ್​ನಲ್ಲಿ ಬರುತ್ತಿರುವ ಚಿತ್ರವೇ ‘ಮನದ ಕಡಲು’. ಈಗ ಬಿಡುಗಡೆ ಆಗಿರುವ ಹಾಡಿನ ಹೆಸರು ‘ತುರ್ರಾ’. ನೆಲಮಂಗಲದ ಬಳಿ ಇರುವ ಈ. ಕೃಷ್ಣಪ್ಪ ಅವರ ತೋಟದಲ್ಲಿ ಈ ಸಾಂಗ್ ರಿಲೀಸ್ ಮಾಡಲಾಯಿತು. ಈ ಗೀತೆಗೆ ವಿ. ಹರಿಕೃಷ್ಣ ಅವರ ಸಂಗೀತವಿದೆ. ಹರಿಕೃಷ್ಣ, ಸಂಜಿತ್ ಹೆಗ್ಡೆ, ಪ್ರಾರ್ಥನಾ ಅವರ ಧ್ವನಿಯಲ್ಲಿ ‘ತುರ್ರಾ’ ಹಾಡು ಮೂಡಿಬಂದಿದೆ.

ಸುದ್ದಿಗೋಷ್ಠಿಯಲ್ಲಿ ಯೋಗರಾಜ್ ಭಟ್​ ಅವರು ‘ತುರ್ರಾ’ ಹಾಡಿನ ಬಗ್ಗೆ ಮಾಹಿತಿ ನೀಡಿದರು. ‘ನನ್ನ ಮತ್ತು ವಿ. ಹರಿಕೃಷ್ಣ ಕಾಂಬಿನೇಷನ್​ನಲ್ಲಿ ಅರ್ಥ ಇರುವ ಅನೇಕ ಹಾಡುಗಳು ಹಿಟ್ ಆಗಿದೆ. ಆದರೆ ಅರ್ಥವಿಲ್ಲದ, ಅನರ್ಥದ ಸಾಂಗ್​ಗಳು ಸೂಪರ್ ಹಿಟ್ ಆಗಿವೆ. ಅಂತಹ ಅನರ್ಥದ ಹಾಡುಗಳ ಪಟ್ಟಿಗೆ ತುರ್ರಾ ಸಾಂಗ್ ಕೂಡ ಸೇರ್ಪಡೆ ಆಗಿದೆ’ ಎಂದು ಯೋಗರಾಜ್​ ಭಟ್ ಹೇಳಿದ್ದಾರೆ.

ತುರ್ರಾ ಸಾಂಗ್:

ಅಷ್ಟಕ್ಕೂ ಯೋಗರಾಜ್​ ಭಟ್​ ಅವರಿಗೆ ಇಂಥ ಸಾಂಗ್ ಬರೆಯಲು ಸ್ಫೂರ್ತಿ ಆಗಿದ್ದು ಒಬ್ಬ ಹುಚ್ಚ! ‘ನನ್ನ‌ ಬಾಲ್ಯದಲ್ಲಿ‌ ನಮ್ಮೂರಿನಲ್ಲಿ ಅಲಿಮಾ‌ ಎಂಬ ಹುಚ್ಚನಿದ್ದ. ಅವನಿಗೆ ಮಕ್ಕಳೆಂದರೆ ಪ್ರೀತಿ. ಆತನ ಹಿಂದೆ ನಾವೆಲ್ಲಾ‌ ಸುತ್ತುತ್ತಿದ್ದೆವು. ಆತ ಬಳಸುತ್ತಿದ್ದ ಪದಗಳೇ ಈ ಹಾಡು ಬರೆಯಲು ಸ್ಫೂರ್ತಿ. ಈ ಹಾಡಿಗೆ ಹರಿಕೃಷ್ಣ ಧ್ವನಿ ಸೂಕ್ತವಾಗಿದೆ. ಅವರೊಂದಿಗೆ ಸಂಜಿತ್ ಹೆಗ್ಡೆ ಮತ್ತು ಪ್ರಾರ್ಥನಾ ಕೂಡ ಹಾಡಿದ್ದಾರೆ’ ಎಂದರು ಯೋಗರಾಜ್ ಭಟ್.

ಇದನ್ನೂ ಓದಿ: ರಂಗಾಯಣ ರಘು ಪಾತ್ರಕ್ಕೆ ಹೊಸ ಭಾಷೆ ಸೃಷ್ಟಿ ಮಾಡಿದ ಯೋಗರಾಜ್​ ಭಟ್

‘ನನಗೆ ಈ ಸಾಂಗ್ ಕೇಳಿದ ಕೂಡಲೇ ಇಷ್ಟ ಆಯಿತು. ಹಾಗಾಗಿ ಈ ಹಾಡು ಇರಲಿ ಎಂದು ನಿರ್ದೇಶಕರಿಗೆ ಹೇಳಿದೆ’ ಎಂದ ನಿರ್ಮಾಪಕ ಇ. ಕೃಷ್ಣಪ್ಪ ಅವರು ಚಿತ್ರತಂಡದ ಕೆಲಸವನ್ನು ಮೆಚ್ಚಿಕೊಂಡರು. ಈ ಗೀತೆಯನ್ನು ಹಾಡಲು ಬಹಳ ಸಮಯ ಬೇಕಾಯಿತು ಎಂದು ಹರಿಕೃಷ್ಣ ಹೇಳಿದರು. ಈ ಹಾಡಿನಲ್ಲಿ ನಾಯಕ ಸುಮುಖ, ನಾಯಕಿ ಅಂಜಲಿ ಅನೀಶ್, ನಟ ರಂಗಾಯಣ ರಘು ಮುಂತಾದವರು ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ರಾಶಿಕಾ ಶೆಟ್ಟಿ, ಸಹ-ನಿರ್ಮಾಪಕ ಜಿ. ಗಂಗಾಧರ್, ಕಾರ್ಯಕಾರಿ‌ ನಿರ್ಮಾಪಕ ಪ್ರತಾಪ್, ಛಾಯಾಗ್ರಾಹಕ ಸಂತೋಷ್ ರೈ‌ ಪಾತಾಜೆ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us