ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?

ಒಂದೇ ದಿನ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಬಿಡುಗಡೆ ಆಗುತ್ತಿದ್ದು, ಬಾಕ್ಸ್ ಆಫೀಸ್​​ನಲ್ಲಿ ಪೈಪೋಟಿ ಜೋರಾಗಿದೆ. ಪರಭಾಷೆಯ ಸಿನಿಮಾಗಳು ಕೂಡ ತೆರೆಕಾಣುತ್ತಿವೆ. ಈ ನಡುವೆ ‘ದಿ ಡೆವಿಲ್’ ಸಿನಿಮಾ ಸಹ ಚಿತ್ರಮಂದಿರದಲ್ಲಿ ಇದೆ. ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆ ಇರುವ ಕಾರಣ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆ ಇದೆ.

ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?
Mark, 45, The Devil

Updated on: Dec 24, 2025 | 7:51 PM

2025ರ ವರ್ಷ ಮುಗಿಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳಾದ ‘45’ ಮತ್ತು ‘ಮಾರ್ಕ್’ ಸಿನಿಮಾ (Mark Movie) ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿದೆ. ಈಗಾಗಲೇ ‘ದಿ ಡೆವಿಲ್’ (The Devil) ಸಿನಿಮಾ ಡಿಸೆಂಬರ್ 11ರಂದು ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಸ್ಟಾರ್ ನಟರ ಸಿನಿಮಾಗಳೆಲ್ಲ ಒಂದೇ ತಿಂಗಳಲ್ಲಿ ರಿಲೀಸ್ ಆಗಿದ್ದರಿಂದ ಸಹಜವಾಗಿಯೇ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಉಂಟಾಗಿದೆ. ಕಿಚ್ಚ ಸುದೀಪ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಶಿವರಾಜ್​​ಕುಮಾರ್ ಅಭಿಮಾನಿಗಳಿಗೆ ‘45’ (45 Kannada Movie) ಮತ್ತು ‘ಮಾರ್ಕ್’ ಸಿನಿಮಾಗಳಿಂದ ಮನರಂಜನೆ ಸಿಗಲಿದೆ. ಈ ಎರಡು ಸಿನಿಮಾಗಳ ನಡುವೆ ಪೈಪೋಟಿ ಇದೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್​ ಧರಿಸಿ ‘45’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್​​ಕುಮಾರ್, ರಾಜ್ ಬಿ. ಶೆಟ್ಟಿ ಮತ್ತು ಉಪೇಂದ್ರ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಒಂದು ಫ್ಯಾಂಟಸಿ ಕಥೆಯನ್ನು ಈ ಸಿನಿಮಾದಲ್ಲಿ ಅರ್ಜುನ್ ಜನ್ಯ ಅವರು ಹೇಳಿದ್ದಾರೆ. ಈಗಾಗಲೇ ಪ್ರೀಮಿಯರ್ ಶೋಗಳಿಂದ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿದೆ. ರಮೇಶ್ ರೆಡ್ಡಿ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

‘ಮಾರ್ಕ್’ ಸಿನಿಮಾಗೆ ಕಾಲಿವುಡ್ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ನಿರ್ದೇಶನ ಮಾಡಿದ್ದಾರೆ. ಈ ಮೊದಲು ‘ಮ್ಯಾಕ್ಸ್’ ಸಿನಿಮಾದಿಂದ ಯಶಸ್ಸು ಕಂಡ ಸುದೀಪ್ ಮತ್ತು ವಿಜಯ್ ಕಾರ್ತಿಕೇಯ ಅವರ ಕಾಂಬಿನೇಷನ್ ‘ಮಾರ್ಕ್’ ಸಿನಿಮಾದಲ್ಲೂ ಮುಂದುವರಿದಿದೆ. ಡಿಸೆಂಬರ್ 25ರಂದು ಮುಂಜಾನೆ 6.30ಕ್ಕೆ ಮೊದಲ ಶೋ ಆರಂಭ ಆಗುತ್ತಿದೆ. ಸಿನಿಮಾ ಹೇಗಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆ ಇದೆ. ಅದರಿಂದ ಹೆಚ್ಚಿನ ಸಂಖೆಯ ಪ್ರೇಕ್ಷಕರು ಚಿತ್ರಮಂದಿರಗಳತ್ತ ಹೆಜ್ಜೆ ಹಾಕುವ ನಿರೀಕ್ಷೆ ಇದೆ. ಆ ಬಳಿಕ ವೀಕೆಂಡ್ ಬರಲಿದೆ. ಇದು ಕೂಡ ಈ ಸಿನಿಮಾಗಳಿಗೆ ಪ್ಲಸ್ ಆಗಲಿದೆ. ‘ಮಾರ್ಕ್’ ಮತ್ತು ‘45’ ಸಿನಿಮಾಗಳು ಬೇರೆ ಬೇರೆ ಶೈಲಿಗೆ ಸೇರಿದ ಚಿತ್ರಗಳಾದ್ದರಿಂದ ಪ್ರೇಕ್ಷಕರು ಎರಡೂ ಸಿನಿಮಾ ನೋಡಿ ಎಂಜಾಯ್ ಮಾಡಲಿದ್ದಾರೆ.

ಇದನ್ನೂ ಓದಿ: ಸುದೀಪ್ ‘ಮಾರ್ಕ್’ ಸಿನಿಮಾ ತುಳಿಯಲು ‘ಟಿವಿ9 ಕನ್ನಡ’ ಹೆಸರು ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು

ದರ್ಶನ್ ಅವರ ‘ದಿ ಡೆವಿಲ್’ ಸಿನಿಮಾ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಿಲ್ಲ. ಮೊದಲ ದಿನ 10 ಕೋಟಿ ರೂಪಾಯಿಯಿಂದ ಆರಂಭ ಆದ ಈ ಸಿನಿಮಾದ ಕಲೆಕ್ಷನ್ ಈಗಾಗಲೇ ಲಕ್ಷಗಳಿಗೆ ಕುಸಿದಿದೆ. ‘45’ ಮತ್ತು ‘ಮಾರ್ಕ್’ ಸಿನಿಮಾದ ಪೈಪೋಟಿಯಿಂದಾಗಿ ‘ದಿ ಡೆವಿಲ್’ ಕಲೆಕ್ಷನ್ ಇನ್ನಷ್ಟು ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಅತ್ತ, ‘ಧುರಂಧರ್’ ಸಿನಿಮಾ ಕೂಡ ಕಠಿಣ ಪೈಪೋಟಿ ನೀಡುತ್ತಿದೆ.

ಮಲಯಾಳಂ ಚಿತ್ರರಂಗದಿಂದ ಮೋಹನ್​ಲಾಲ್ ನಟನೆ ‘ವೃಷಭ’ ಸಿನಿಮಾ ಇದೇ ದಿನ ಬಿಡುಗಡೆ ಆಗುತ್ತಿದೆ. ರಾಗಿಣಿ ದ್ವಿವೇದಿ, ಸಮರ್ಜಿತ್ ಲಂಕೇಶ್ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ‘ತು ಮೇರಿ ಮೇ ತೇರ ಮೇ ತೇರ ತು ಮೇರಿ’ ಸಿನಿಮಾ ಕೂಡ ಡಿ.25ಕ್ಕೆ ತೆರೆಕಾಣುತ್ತಿದೆ. ಈ ಎಲ್ಲ ಸಿನಿಮಾಗಳ ನಡುವೆ ಪೈಪೋಟಿ ಏರ್ಪಡಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.