ಒಂದೇ ವಾರ ಹಲವು ಸಿನಿಮಾಗಳು ಬಿಡುಗಡೆ ಆದಾಗ ಪ್ರೇಕ್ಷಕರಿಗೆ ಗೊಂದಲ ಮೂಡುತ್ತದೆ. ಯಾವ ಸಿನಿಮಾ ನೋಡೋದು, ಯಾವ ಸಿನಿಮಾ ಬಿಡೋದು ಎಂಬ ಪ್ರಶ್ನೆ ಕಾಡುತ್ತದೆ. ಎಲ್ಲ ಚಿತ್ರಕ್ಕೂ ಅದರದ್ದೇ ಆದ ಪ್ರೇಕ್ಷಕರ ವರ್ಗ ಇರುತ್ತದೆ. ಹಾಗಾಗಿ ಎಲ್ಲ ಸಿನಿಮಾಗಳಿಗೂ ನಿರೀಕ್ಷಿತ ಪ್ರಮಾಣದ ಆಡಿಯನ್ಸ್ ಬರುತ್ತಾರೆ ಎಂಬುದು ಚಿತ್ರತಂಡಗಳ ನಂಬಿಕೆ. ಈ ಶುಕ್ರವಾರ (ನವೆಂಬರ್ 22) ಕೂಡ ಕನ್ನಡದಲ್ಲಿ ಹಲವು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈ ಎಲ್ಲ ಸಿನಿಮಾಗಳು ಬೇರೆ ಬೇರೆ ಕಾರಣಕ್ಕೆ ಕೌತುಕ ಮೂಡಿಸಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ..
ನಟ ಡಾಲಿ ಧನಂಜಯ ಅವರು ಪ್ಯಾನ್ ಇಂಡಿಯಾ ಕಲಾವಿದ ಆಗಿದ್ದಾರೆ. ಕನ್ನಡದ ಜೊತೆ ಬೇರೆ ಬೇರೆ ಭಾಷೆಗಳಲ್ಲಿ ಅವರು ನಟಿಸುತ್ತಿದ್ದಾರೆ. ಈಗ ಅವರು ಪ್ರಮುಖ ಪಾತ್ರ ಮಾಡಿರುವ ‘ಜೀಬ್ರಾ’ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅಮೃತಾ ಅಯ್ಯಂಗಾರ್, ಸತ್ಯದೇವ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಮಾಸ್ ಕಥೆ ಬಯಸುವವರು ‘ಜೀಬ್ರಾ’ ವೀಕ್ಷಿಸಬಹುದು.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ಧರ್ಮ ಕೀರ್ತಿರಾಜ್ ಮತ್ತು ಉಗ್ರಂ ಮಂಜು ಸ್ಪರ್ಧಿಸುತ್ತಿದ್ದಾರೆ. ಅವರು ನಟಿಸಿರುವ ‘ಟೆನಂಟ್’ ಸಿನಿಮಾ ಈ ವಾರ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಸೋನು ಗೌಡ, ತಿಲಕ್, ರಾಕೇಶ್ ಮಯ್ಯ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಟ್ರೇಲರ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಲಾಕ್ಡೌನ್ ಸಂದರ್ಭದ ಕಥೆ ಈ ಚಿತ್ರದಲ್ಲಿದೆ. ಕ್ರೈಮ್ ಥ್ರಿಲ್ಲರ್ ಇಷ್ಟಪಡುವ ಪ್ರೇಕ್ಷಕರಿಗೆ ‘ಟೆನಂಟ್’ ಈ ವಾರದ ಆಯ್ಕೆ.
ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಸುನೀಲ್ ರಾವ್, ತೇಜು ಬೆಳವಾಡಿ, ಶೈನ್ ಶೆಟ್ಟಿ, ಪ್ರಭು ಮುಂಡ್ಕೂರ್ ಮುಂತಾದವರು ನಟಿಸಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾ ಕೂಡ ಟ್ರೇಲರ್ ಮೂಲಕ ಸದ್ದು ಮಾಡಿದೆ. ಈ ಚಿತ್ರದ ಹಾಡುಗಳು ಸಹ ಗಮನ ಸೆಳೆದಿವೆ. ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಈ ಸಿನಿಮಾ ಬಗ್ಗೆ ಹೈಪ್ ಸೃಷ್ಟಿ ಆಗಿದೆ. ನಾಗರಾಜ್ ಸೋಮಯಾಜಿ ನಿರ್ದೇಶನ ಮಾಡಿದ್ದು, ಶ್ವೇತಾ ಪ್ರಸಾದ್, ಆರ್ಜೆ ಪ್ರದೀಪ ನಿರ್ಮಾಣ ಮಾಡಿದ್ದಾರೆ. ಮಧ್ಯಮವರ್ಗದ ರಿಯಲಿಸ್ಟಿಕ್ ಕಹಾನಿ ನೋಡಲು ಇಷ್ಟಪಡುವ ಪ್ರೇಕ್ಷಕರಿಗೆ ಈ ಸಿನಿಮಾ ಉತ್ತಮ ಆಯ್ಕೆ.
‘ಗಟ್ಟಿಮೇಳ’, ‘ಅಣ್ಣಯ್ಯ’ ಮುಂತಾದ ಸೀರಿಯಲ್ಗಳ ಮೂಲಕ ಫೇಮಸ್ ಆಗಿರುವ ನಿಶಾ ರವಿಕೃಷ್ಣನ್ ಅವರು ‘ಅಂಶು’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ಎಂ.ಸಿ. ಚನ್ನಕೇಶವ ನಿರ್ದೇಶನ ಮಾಡಿದ್ದಾರೆ. ಸೀರಿಯಲ್ಗಳಲ್ಲಿ ಯಶಸ್ಸು ಪಡೆದ ನಿಶಾ ಅವರು ಹಿರಿತೆರೆಯಲ್ಲಿ ಯಾವ ರೀತಿ ನಟಿಸಿದ್ದಾರೆ ಎಂಬುದು ತಿಳಿಯುವ ಕುತೂಹಲ ಇರುವವರು ‘ಅಂಶು’ ನೋಡಬೇಕು.
ಇದನ್ನೂ ಓದಿ: ಹರಿ ಸಂತೋಷ್ ಸಾರಥ್ಯದಲ್ಲಿ ಸೆಟ್ಟೇರಿದ ‘ಡಿಸ್ಕೊ’, ‘ಕಂಗ್ರ್ಯಾಜುಲೇಷನ್ಸ್ ಬ್ರದರ್’ ಸಿನಿಮಾ
ಅನೀಶ್ ತೇಜೇಶ್ವರ್, ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿರುವ ‘ಆರಾಮ್ ಅರವಿಂದ ಸ್ವಾಮಿ’ ಸಿನಿಮಾ ಕೂಡ ನವೆಂಬರ್ 22ರಂದು ಬಿಡುಗಡೆ ಆಗುತ್ತಿದೆ. ಕಾಮಿಡಿ ಕಿಕ್ ಬೇಕು ಎನ್ನುವ ಪ್ರೇಕ್ಷಕರು ಈ ಸಿನಿಮಾವನ್ನು ಈ ವಾರ ನೋಡಬಹುದು. ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಅಭಿಷೇಕ್ ಶೆಟ್ಟಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ರಾಜಕೀಯದ ಕಥಾಹಂದರ ಇರುವ ‘ಪ್ರಭುತ್ವ’ ಸಿನಿಮಾದಲ್ಲಿ ಚೇತನ್ ಚಂದ್ರ ಅವರು ಮುಖ್ಯ ಪಾತ್ರ ಮಾಡಿದ್ದಾರೆ. ಮತದಾನದ ಮಹತ್ವ ತಿಳಿಸುವಂತಹ ಕಥೆ ಈ ಸಿನಿಮಾದಲ್ಲಿದೆ. ರವಿರಾಜ್ ಎಸ್ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಆದಿ ಲೋಕೇಶ್, ವಿಜಯ್ ಚೆಂಡೂರು, ಡ್ಯಾನಿ, ರಾಜೇಶ್ ನಟರಂಗ, ಅವಿನಾಶ್, ಶರತ್ ಲೋಹಿತಾಶ್ವ, ಪಾವನಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ರಾಜಕೀಯದ ಬಗ್ಗೆ ಪ್ರೇಕ್ಷಕರಿಗೆ ಮೆಸೇಜ್ ನೀಡುವಂತಹ ಕಥೆ ಈ ಚಿತ್ರದಲ್ಲಿದೆ.
ದರ್ಶನ್ ನಟನೆಯ ಸಾಲು ಸಾಲು ಸಿನಿಮಾಗಳು ಮರು ಬಿಡುಗಡೆ ಆಗುತ್ತಿವೆ. ಈಗಾಗಲೇ ಕರಿಯ, ನವಗ್ರಹ ಸಿನಿಮಾಗಳು ರೀ-ರಿಲೀಸ್ ಆಗಿ ಸದ್ದು ಮಾಡಿವೆ. ಈ ವಾರ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಸಿನಿಮಾ ಮರು ಬಿಡುಗಡೆ ಆಗುತ್ತಿದ್ದು, ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ದರ್ಶನ್ ಅವರನ್ನು ದೊಡ್ಡ ಪರದೆಯಲ್ಲಿ ಮಿಸ್ ಮಾಡಿಕೊಳ್ಳುತ್ತಿರುವವರು ಈ ಸಿನಿಮಾ ನೋಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.