ಇಂದು (ನವೆಂಬರ್ 09) ಶಂಕರ್ ನಾಗ್ ಹುಟ್ಟುಹಬ್ಬ. ಈ ದಿನ ರಾಜ್ಯದಾದ್ಯಂತ ಆಟೋ ಡ್ರೈವರ್ಗಳು, ಸಿನಿಮಾ ಪ್ರೇಮಿಗಳು ಶಂಕರ್ ನಾಗ್ ಅವರ ಹುಟ್ಟುಹಬ್ಬ ಆಚರಣೆ ಮಾಡಿದ್ದಾರೆ. ಅದರಲ್ಲೂ ಆಟೋ ಡ್ರೈವರ್ಗಳಂತೂ ಶಂಕರ್ ನಾಗ್ ಅವರ ಹುಟ್ಟುಹಬ್ಬವನ್ನು ‘ಚಾಲಕರ ದಿನ’ವನ್ನಾಗಿಯೇ ಆಚರಿಸಿದ್ದಾರೆ. ಶಂಕರ್ ನಾಗ್ ಹುಟ್ಟುಹಬ್ಬವನ್ನು ಚಾಲಕರ ದಿನವನ್ನಾಗಿ ಅಧಿಕೃತ ಘೋಷಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯವನ್ನೂ ಮಾಡಿದ್ದಾರೆ. ಇದರ ನಡುವೆ ಕನ್ನಡದ ‘ಮರ್ಯಾದೆ ಪ್ರಶ್ನೆ’ ಚಿತ್ರತಂಡ ಭಿನ್ನವಾಗಿ ಶಂಕರ್ ನಾಗ್ ಹುಟ್ಟುಹಬ್ಬ ಆಚರಣೆ ಮಾಡಿದೆ.
‘ಮರ್ಯಾದೆ ಪ್ರಶ್ನೆ’ ಚಿತ್ರತಂಡ ಆಟೋ ಚಾಲಕರ ಜೊತೆಗೆ ಶಂಕರ್ ನಾಗ್ ಹುಟ್ಟುಹಬ್ಬ ಆಚರಣೆ ಮಾಡಿದೆ. ಮಾತ್ರವಲ್ಲದೆ ತಮ್ಮ ‘ಮರ್ಯಾದೆ ಪ್ರಶ್ನೆ’ ಸಿನಿಮಾದ ಪ್ರಚಾರವನ್ನೂ ಸಹ ಅದ್ಧೂರಿಯಾಗಿ ಮಾಡಿದೆ. ಮರ್ಯಾದೆ ಪ್ರಶ್ನೆ ಚಿತ್ರತಂಡದ ಜೊತೆಗೆ ನಮ್ಮ ಯಾತ್ರಿ ಆ್ಯಪಿನ ರಾಜೀವ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
2017 ರಲ್ಲಿ ಶಂಕರ್ ನಾಗ್ ಅವರ ಹುಟ್ಟುಹಬ್ಬದಂದೇ ಪ್ರಾರಂಭವಾದ ಆರ್‌ಜೆ ಪ್ರದೀಪ್ ಅವರ ಸಖತ್ ಸ್ಟುಡಿಯೋ ಮೂಲಕ ಬಿಡುಗಡೆ ಆಗಲಿರುವ ಮೊದಲ ಸಿನಿಮಾ ‘ಮರ್ಯಾದೆ ಪ್ರಶ್ನೆ’. ಈ ಸಿನಿಮಾದ ತಂಡ ಆಟೋ ಡ್ರೈವರ್ಗಳ ಜೊತೆಗೆ ಶಂಕರ್ ನಾಗ್ ಹುಟ್ಟು ಹಬ್ಬ ಆಚರಣೆ ಮಾಡಿದೆ. ಜೊತೆಗೆ ಸಿನಿಮಾದ ಪ್ರಚಾರವನ್ನೂ ಸಹ ಮಾಡಿದೆ. ‘ಮರ್ಯಾದೆ ಪ್ರಶ್ನೆ’ ಸಿನಿಮಾದಲ್ಲಿ ‘ಡ್ರೈವರ್’ ಪಾತ್ರ ಮಾಡಿರುವ ನಟ ಪೂರ್ಣಚಂದ್ರ ಮೈಸೂರು ಅವರಿಗೆ ಖಾಕಿ ಕೋಟ್ ಹಾಕುವ ಮೂಲಕ ಆಟೋ ಚಾಲಕರು ಸಾಂಕೇತಿಕವಾಗಿ ಪೂರ್ಣ ಅವರನ್ನು ಚಾಲಕರ ಬಳಗಕ್ಕೆ ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಮರ್ಯಾದೆ ಪ್ರಶ್ನೆ ಚಿತ್ರದ ಆಟೋ ಸ್ಟಿಕ್ಕರ್ಸ್ ಹಾಕಲಾಯ್ತು.
ಇದನ್ನೂ ಓದಿ:ಅಪಘಾತದ ವೇಳೆ ನಿಜಕ್ಕೂ ಶಂಕರ್ ನಾಗ್ ಕಾರು ಚಲಾಯಿಸುತ್ತಿದ್ದರಾ?
ಈ ಸಂದರ್ಭದಲ್ಲಿ ಮಾತನಾಡಿದ ನಟ ಪೂರ್ಣಚಂದ್ರ ಮೈಸೂರು ‘ಈ ಸಿನಿಮಾದಲ್ಲಿ ನಾನು ಚಾಲಕನ ಪಾತ್ರ ಮಾಡಿದ್ದೇನೆ. ಚಾಲಕರ ಕಷ್ಟಸುಖಗಳನ್ನು ತೋರಿಸುವ ಚಂದದ ಪಾತ್ರ. ‘ಮರ್ಯಾದೆ ಪ್ರಶ್ನೆ’ ಮಿಡಲ್ ಕ್ಲಾಸ್ ಜೀವನ ತೋರಿಸುವ ಚಿತ್ರ. ಚಾಲಕರು ಸೇರಿದಂತೆ ಎಲ್ಲ ದುಡಿಯುವ ವರ್ಗಕ್ಕೂ ಈ ಸಿನಿಮಾ ಇಷ್ಟವಾಗುವ ನಂಬಿಕೆಯಿದೆ’ ಎಂದರು.
‘ಲೂಸ್ ಕನೆಕ್ಷನ್’, ‘ಹನಿಮೂನ್’ ವೆಬ್ ಸೀರೀಸ್ಗಳನ್ನು ನಿರ್ಮಿಸಿ ಸದ್ದು ಮಾಡಿದ್ದ ಆರ್‌ಜೆ ಪ್ರದೀಪಾ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಪ್ರದೀಪಾ ಅವರೇ ಬರೆದ ಕಥೆಗೆ ನಾಗರಾಜ ಸೋಮಯಾಜಿ ಅವರ ಚಿತ್ರಕತೆ, ಸಂಭಾಷಣೆ ನಿರ್ದೇಶನವಿದೆ. ‘ಮರ್ಯಾದೆ ಪ್ರಶ್ನೆʼ ನವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದೇ ತಿಂಗಳ 12ಕ್ಕೆ ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ಸಜ್ಜಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ