ಸಿನಿಮಾವಾದ ದಲಿತ ಮಹಿಳಾ ಪ್ರಥಮ ಆತ್ಮಕೃತಿ; ‘ಮಾತಂಗಿ ದೀವಟಿಗೆ’ ಬಗ್ಗೆ ಸಮತಾ ದೇಶಮಾನೆಯವರೊಂದಿಗೆ ವಿಶೇಷ ಮಾತುಕತೆ

|

Updated on: Mar 08, 2022 | 1:52 PM

Matangi Deevatige | Samata Deshmane: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂದು ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ‘ಮಾತಂಗಿ ದೀವಟಿಗೆ’ ಚಿತ್ರ ಪ್ರದರ್ಶನವಾಗುತ್ತಿದೆ. ಪ್ರೊ.ಸಮತಾ ದೇಶಮಾನೆ ರಚಿಸಿರುವ ಇದೇ ಹೆಸರಿನ ಕೃತಿಯಿಂದ ಚಿತ್ರ ರಚಿತವಾಗಿದೆ. ಚಿತ್ರದ ಕುರಿತು ಟಿವಿ9 ಡಿಜಿಟಲ್​ನೊಂದಿಗೆ ಲೇಖಕಿ ಸಮತಾ ದೇಶಮಾನೆ ಮಾತನಾಡಿದ್ದಾರೆ.

ಸಿನಿಮಾವಾದ ದಲಿತ ಮಹಿಳಾ ಪ್ರಥಮ ಆತ್ಮಕೃತಿ; ‘ಮಾತಂಗಿ ದೀವಟಿಗೆ’ ಬಗ್ಗೆ ಸಮತಾ ದೇಶಮಾನೆಯವರೊಂದಿಗೆ ವಿಶೇಷ ಮಾತುಕತೆ
‘ಮಾತಂಗಿ ದೀವಟಿಗೆ’ ಚಿತ್ರದ ದೃಶ್ಯ (ಎಡ), ಲೇಖಕಿ ಸಮತಾ ದೇಶಮಾನೆ (ಬಲ)
Follow us on

BIFFES | ಕನ್ನಡದ ಮೊದಲ ದಲಿತ ಮಹಿಳಾ ಆತ್ಮಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ‘ಮಾತಂಗಿ ದೀವಟಿಗೆ’ (Matangi Deevatige) ಚಲನಚಿತ್ರ ರೂಪದಲ್ಲಿ ವೀಕ್ಷಕರನ್ನು ಎದುರುಗೊಳ್ಳುತ್ತಿದೆ. ಇದರ ಮೂಲಕೃತಿಯನ್ನು ರಚಿಸಿದವರು ಪ್ರೊ.ಸಮತಾ ಬಿ ದೇಶಮಾನೆ. ಕಲಬುರಗಿ ಮೂಲದ ಸಮತಾ ದೇಶಮಾನೆ ಕುಟುಂಬ ಶಿಕ್ಷಣಕ್ಕಾಗಿ ಹೋರಾಡಿ, ಇಂದು ಸಾಧನೆಯ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.  ಪ್ರೊ.ಸಮತಾ ಬಿ ದೇಶಮಾನೆ (Prof.Samata B Deshmane) ಬರೆದಿರುವ ‘ಮಾತಂಗಿ ದೀವಟಿಗೆ’ ಆತ್ಮಕೃತಿಯಲ್ಲಿ ಕಲಬುರಗಿ ಮೂಲದ ಅವರ ಕುಟುಂಬ ಶಿಕ್ಷಣಕ್ಕಾಗಿ ಪಟ್ಟ ಕಷ್ಟ, ಪರಿಣಾಮವಾಗಿ ದೇಶಮಾನೆ ಕುಟುಂಬದ ಮಕ್ಕಳು ಇಂದು ಮಾಡಿರುವ ಸಾಧನೆ ಇವುಗಳನ್ನು ಕಟ್ಟಿಕೊಡಲಾಗಿದೆ. ಇದೀಗ ಮಂಜು ಪಾಂಡವಪುರ ಅವರು ‘ಮಾತಂಗಿ ದೀವಟಿಗೆ’ ಹೆಸರಿನಲ್ಲಿಯೇ ಚಿತ್ರವನ್ನು ತೆರೆಯ ಮೇಲೆ ತಂದಿದ್ದು, ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ನಿರ್ಮಿಸಿದವರು ಬಿ.ವೈ.ಪದ್ಮ. ಸಮತಾ ದೇಶಮಾನೆ ಅವರ ಕತೆಗೆ ಚಿತ್ರಕತೆ ಹಾಗೂ ಸಂಭಾಷಣೆ ರಚಿಸಿದವರು ಜೆ.ಎಂ.ಪ್ರಹ್ಲಾದ್‌. 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (Bengaluru International Film Festival) ಭಾಗವಾಗಿರುವ ಈ ಚಿತ್ರವು ಈಗಾಗಲೇ ಒಂದು ಪ್ರದರ್ಶನ ಕಂಡಿದೆ. ಮಹಿಳಾ ದಿನಾಚರಣೆಯ ಪ್ರಯುಕ್ತ ಇಂದು (ಮಾ.8) ಸಂಜೆ 6.45ಕ್ಕೆ  ಬೆಂಗಳೂರು ಚಿತ್ರೋತ್ಸವದಲ್ಲಿ ಎರಡನೇ ಪ್ರದರ್ಶನವಾಗಲಿದೆ. ‘ಟಿವಿ9 ಡಿಜಿಟಲ್’ ಲೇಖಕಿ ಸಮತಾ ದೇಶಮಾನೆ ಅವರನ್ನು ಸಂದರ್ಶಿಸಿದಾಗ ಅವರು ಸಂತಸ‌ ಹಂಚಿಕೊಂಡಿದ್ದಾರೆ. ಚಿತ್ರದ ಕುರಿತು ಹಾಗೂ ಮುಂದಿನ ಯೋಜನೆಗಳ ಕುರಿತು ಸಮತಾ ಅವರ ಮಾತುಗಳು ಇಲ್ಲಿವೆ.

ಚಿತ್ರ ಮೊದಲ ಪ್ರದರ್ಶನ ಕಂಡಿದೆ, ಅದರ ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ ಸಮತಾ ದೇಶಮಾನೆ ಉತ್ತರಿಸಿದ್ದಾರೆ. ‘‘ಜನರು, ಸಿನಿ‌ಕ್ಷೇತ್ರದ  ತಂತ್ರಜ್ಞರು, ಪತ್ರಕರ್ತರು ಅರ್ಥಪೂರ್ಣವಾದ ವಿಷಯವಸ್ತು ಎಂದು ಚಿತ್ರದ ಬಗ್ಗೆ ಖುಷಿಪಟ್ಟರು. ಈ ಕಲಾತ್ಮಕ ಚಿತ್ರದಲ್ಲಿ ಒಳ್ಳೆಯ ಸಂದೇಶ ಇದೆ. ಕಷ್ಟಪಟ್ಟರೆ ಮುಂದೆ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿ ನಮ್ಮ ಕುಟುಂಬವಿದೆ. ಎಲ್ಲರೂ ಉನ್ನತ ಹುದ್ದೆ ಅಲಂಕರಿಸಿರುವುದರಿಂದ ಈ ಚಿತ್ರ ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಚಿತ್ರ ನೋಡಿದ ಜನರು ಸೆಲ್ಫಿ ತೆಗೆದುಕೊಳ್ಳಲು‌ ಬಂದಾಗ ಮತ್ತು ಅವರು ಚಿತ್ರದ ಬಗ್ಗೆ ಹೊಗಳಿದ್ದು ಕೇಳಿ ಸಂತಸವಾಗಿದೆ. ವೀಕ್ಷಕರಿಗೆ ನಮ್ಮ ಪರಿಚಯ ಇರುವುದಿಲ್ಲ. ಆದರೆ ಅವರ ಪ್ರೀತಿಗೆ ಕಾರಣವಾಗಿದ್ದು ಚಲನಚಿತ್ರ ಹಾಗೂ ಸಿನಿಮಾದ ವಿಷಯ ವಸ್ತು. ಇದು ಹೆಮ್ಮೆಯ ವಿಷಯ’’ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಮುಖ್ಯವಾಗಿ ರತ್ನಮ್ಮ ಮತ್ತು ಬಾಬುರಾವ್ ದೇಶಮಾನೆ(ಸಮತಾ ಅವರ ತಂದೆ- ತಾಯಿ) ಅವರ ಕುರಿತು ಇದೆ. ಮಕ್ಕಳನ್ನು ಓದಿಸಲು ಅವರು ಪಟ್ಟ ಕಷ್ಟ, ಮೌಢ್ಯ ಆಚರಣೆಗಳು ಮಕ್ಕಳಿಗೆ ಸೋಕದಂತೆ ಅವರನ್ನು ಬೆಳೆಸಿ, ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಮಾಡಿದ್ದು ಎಲ್ಲವೂ ಚಿತ್ರದಲ್ಲಿದೆ.

ಈ ಕುರಿತು ಮಾತನಾಡಿದ ಲೇಖಕಿ, ತಂದೆ- ತಾಯಿಗಳು ಶ್ರೇಷ್ಠ ಸಾಧಕರ ಸಾಲಿನಲ್ಲಿ‌ ನಿಲ್ಲುತ್ತಾರೆ. ಅವರನ್ನು ಸ್ಮರಿಸಿಕೊಳ್ಳುವ ಚಿತ್ರ ಇದು. ದೃಶ್ಯ ರೂಪದಲ್ಲಿ ಚಿತ್ರ ನೋಡಿ ಬಾಲ್ಯದ ದಿನಗಳು‌ ಮರುಕಳಿಸಿದಂತಾಯಿತು. ನಮ್ಮ ಅಕ್ಕ ಡಾ.ವಿಜಯಲಕ್ಷ್ಮಿ ದೇಶಪಾಂಡೆ ತರಕಾರಿ ಮಾರುವ ದೃಶ್ಯ, ಹಾಗೂ ತಂದೆ ತಾಯಿಯವರ ಪಾತ್ರಗಳು- ದೃಶ್ಯಗಳು ಕಣ್ಮುಂದೆ‌ ಬಂದಾಗ ಎಲ್ಲವೂ ನೆನಪಾಯಿತು. ಕಲಾವಿದರು ಬಹಳ ಚೆನ್ನಾಗಿ ಪ್ರಸ್ತುತಪಡಿಸಿದ್ದಾರೆ ಎಂದಿದ್ದಾರೆ.

ಕಲಬುರಗಿಯಲ್ಲಿ ವಿಶೇಷ ಪ್ರದರ್ಶನ:

ಚಿತ್ರದ ಹಿನ್ನೆಲೆ ಇರುವುದು ಕಲಬುರಗಿಯಲ್ಲಿ. ಅಲ್ಲಿನ ಜನರಿಗೆ ಚಿತ್ರವನ್ನು ತೋರಿಸುವ ಯೋಜನೆಗಳ ಬಗ್ಗೆ ಮಾತನಾಡಿದ ಸಮತಾ ಚಿತ್ರ ಪ್ರದರ್ಶನ ಮುಗಿದ ನಂತರದ ಒಂದು ಘಟನೆ ನೆನಪಿಸಿಕೊಂಡಿದ್ದಾರೆ. ‘‘ಕಲಬುರಗಿಯ ಸುಪ್ರಸಿದ್ಧ ಮನೆತನ ಕೋಸಗಿ ಅಂತ. ಅಲ್ಲಿನವರು ಡಾ.ವಿಜಯಲಕ್ಷ್ಮಿ ಕೋಸಗಿ ಅಂತ, ಅವರು ಚಿತ್ರದಲ್ಲಿ ನಟಿಸಿದ್ದಾರೆ. 5ನೇ ತಾರೀಕು ನಡೆದ ಪ್ರದರ್ಶನದಲ್ಲಿ ಅವರು ಚಿತ್ರ ನೋಡುವುದಕ್ಕೆಂದೇ ಕಲಬುರಗಿಯಿಂದ ಬಂದಿದ್ದರು. ಪ್ರದರ್ಶನ ಮುಗಿದ ನಂತರ ಅವರೇ ಸ್ವಯಂಪ್ರೇರಿತರಾಗಿ, ಈ ಚಿತ್ರವನ್ನು ಕಲಬುರಗಿಯಲ್ಲಿ ಪ್ರದರ್ಶನ ಮಾಡಲೇಬೇಕು. ಹಿಂದುಳಿದಿರುವ ಜಿಲ್ಲೆಗೆ ಒಂದು ಸಂದೇಶ ತಲುಪಿಸಿದಂತಾಗುತ್ತದೆ. ಎಷ್ಟೇ ಖರ್ಚಾಗಲಿ, ಅಲ್ಲಿನ ಬಿಡುಗಡೆಯ ಖರ್ಚನ್ನು ತಾವೇ ಹೆಮ್ಮೆಯಿಂದ ಭರಿಸುತ್ತೇವೆ’’ ಎಂದಿದ್ದನ್ನು ಸಮತಾ ತೆರೆದಿಟ್ಟಿದ್ದಾರೆ.

ಕೃತಿಗೆ ಹಾಗೂ ಚಿತ್ರ ನೋಡಿದ ಜನರ ಪ್ರತಿಕ್ರಿಯೆಯನ್ನು ನೆನಪಿಸಿಕೊಂಡ ಸಮತಾ, ‘‘ಮೈಸೂರಿನಿಂದ ರಘು ಒಡೆಯರ್ ಎಂಬುವವರು ಬಂದಿದ್ದರು. ಅವರು ಚಿತ್ರ ನೋಡಿ ನನ್ನ ಕಾಲಿಗೆ ನಮಸ್ಕಾರ ಮಾಡಿದರು. ಚಿತ್ರ ನೋಡಿ ಕಣ್ಣೀರಾಗಿದ್ದ ಅವರು, ನನ್ನ ತಂಗಿ, ಅಣ್ಣ ಎಲ್ಲರೂ ಈ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದಾರೆ ಎಂದು ಅನಿಸುತ್ತಿತ್ತು’’ ಎಂದು ಭಾವುಕರಾಗಿದ್ದರು. ಚಲನಚಿತ್ರ ಒಕ್ಕೂಟದ ಶ್ರೀನಿವಾಸ್, ವೆಂಕಟೇಶ್ ಎಲ್ಲರೂ ಭಾವುಕರಾಗುತ್ತಾ ತಮ್ಮ ಅನಿಸಿಕೆ‌ ಹಂಚಿಕೊಂಡಿದ್ದರು. ಈ ವರ್ಷದ ಅತ್ಯುತ್ತಮ ಚಿತ್ರ ಇದಾಗುವುದರಲ್ಲಿ ಯಾವುದೇ ಅನುಮಾನ‌ ಇಲ್ಲ ಎಂದು ಅವರು ಹೇಳಿದ್ದರು. ದೂರದೂರಿನಿಂದ ಬಂದವರು ಚಿತ್ರ ನೋಡಿ ಹೇಳಿದ ಈ ಮಾತುಗಳನ್ನು ಕೇಳಿದಾಗ ಹೆಮ್ಮೆ ಅನಿಸುತ್ತದೆ’’ ಎಂದು ಸಮತಾ ದೇಶಮಾನೆ ಅನಿಸಿಕೆ ಹಂಚಿಕೊಂಡಿದ್ದಾರೆ.

ನಾರಾಯಣ ಗುರುಗಳ ಕುರಿತ ಚಿತ್ರದ ತಯಾರಿಯಲ್ಲಿ ಚಿತ್ರತಂಡ:

ಮುಂದಿನ ಯೋಜನೆಗಳ ಬಗ್ಗೆ ಮಾತನಾಡಿದ ಸಮತಾ ದೇಶಮಾನೆ, ನಾರಾಯಣ ಗುರುಗಳ ಜೀವನಾಧಾರಿತ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ‘‘ಹಿಜಾಬ್, ಕೇಸರಿಯಂತಹ ಈ ಎಲ್ಲಾ ವಿವಾದಗಳ‌ ನಡುವೆ ಪ್ರಸ್ತುತವಾಗುವುದು ವಿಶ್ವ ಮಾನವತೆಯ ಸಂದೇಶ ಸಾರಿದ ನಾರಾಯಣ ಗುರುಗಳು. ಅವರ ಬಗ್ಗೆ ‘ಶ್ರೀ ಗುರುದೇವ ನಾರಾಯಣಗುರು’ ಕೃತಿ ರಚಿಸಿದ್ದೇನೆ. ಅದು ಕೂಡ ಸಿನಿಮಾ ಆಗಲಿದೆ. ನಾರಾಯಣ ಗುರು ಅವರ ಆತ್ಮಕತೆಯಾದ ಅದರಲ್ಲಿ ಒಂದೇ ಜಾತಿ, ಒಂದೇ ಧರ್ಮದ ವಿಚಾರಗಳಿವೆ’’ ಎಂದಿರುವ ಸಮತಾ, ಇದೇ ತಂಡ ಮುಂದಿನ ಚಿತ್ರದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

Women’s Day: ಮಹಿಳಾ ಪ್ರಧಾನ ಸಿನಿಮಾಗಳಿಗೆ ವಿಶೇಷ ಮನ್ನಣೆ ನೀಡಿರುವ ಕನ್ನಡ ಪ್ರೇಕ್ಷಕ; ಇಲ್ಲಿವೆ ಜನಮನ ಗೆದ್ದ ಚಿತ್ರಗಳು

Women’s Day: ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಬೆಡಗಿಯರಿವರು

Published On - 12:46 pm, Tue, 8 March 22