ಕಿಚ್ಚ ಸುದೀಪ್ ಅವರು ವೃತ್ತಿ ಜೀವನದಲ್ಲಿ ಇಷ್ಟು ದೊಡ್ಡ ಯಶಸ್ಸು ಕಂಡು ಅದೆಷ್ಟೋ ವರ್ಷಗಳೇ ಆಗಿ ಹೋಗಿದ್ದವು. ‘ಮ್ಯಾಕ್ಸ್’ ಸಿನಿಮಾ ಅವರ ವೃತ್ತಿ ಜೀವನಕ್ಕೆ ದೊಡ್ಡ ಗೆಲುವನ್ನೇ ತಂದುಕೊಟ್ಟಿದೆ. ಈ ಚಿತ್ರ ರಜಾ ದಿನಗಳಲ್ಲಿ ಮಾತ್ರವಲ್ಲ, ವಾರದ ದಿನವೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಇದು ಸುದೀಪ್ ಖುಷಿಯನ್ನು ಹೆಚ್ಚಿಸಿದೆ. ನಟನಾಗಿ, ನಿರ್ಮಾಪಕನಾಗಿ ಅವರು ದೊಡ್ಡ ಮಟ್ಟದ ಗೆಲುವು ಕಂಡಿದ್ದಾರೆ. ಚಿತ್ರದ ಒಟ್ಟಾರೆ ಗಳಿಕೆ ಬಗ್ಗೆ ಈ ಸ್ಟೋರಿಯಲ್ಲಿ ವಿವರ ಇದೆ.
‘ಮ್ಯಾಕ್ಸ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ 25ರಂದು ತೆರೆಗೆ ಬಂತು. ಈ ಸಿನಿಮಾ ಕರ್ನಾಟಕದಲ್ಲಿ ಕಳೆದ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ಖ್ಯಾತಿ ಪಡೆಯಿತು. ಈಗ 2025ರಲ್ಲೂ ಚಿತ್ರದ ಅಬ್ಬರ ಮುಂದುವರಿದಿದೆ. ಹೊಸ ವರ್ಷಕ್ಕೆ ರಜೆ ಇದ್ದ ಕಾರಣ ಸಿನಿಮಾ 4.62 ಕೋಟಿ ರೂಪಾಯಿ ಗಳಿಸಿತ್ತು. ಜನವರಿ 2ರಂದು ಸಿನಿಮಾ 1.75 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಜನವರಿ 1ಕ್ಕೆ ಹೋಲಿಕೆ ಮಾಡಿದರೆ ಗುರುವಾರದ ಕಲೆಕ್ಷನ್ ಕೊಂಚ ಕಡಿಮೆಯೇ. ಆದರೆ, ವಾರದ ದಿನವೂ ಸಿನಿಮಾ ಸುಮಾರು 2 ಕೋಟಿ ರೂಪಾಯಿ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ನಿಜಕ್ಕೂ ಖುಷಿಯ ವಿಚಾರ. ಸದ್ಯ ಎಲ್ಲ ಕಡೆಗಳಲ್ಲಿ ‘ಯುಐ’ ಚಿತ್ರದ ಹವಾ ಕಡಿಮೆ ಆಗುತ್ತಿದೆ. ಹೀಗಾಗಿ ಹಲವು ಕಡೆಗಳಲ್ಲಿ ‘ಯುಐ’ ಬದಲು ‘ಮ್ಯಾಕ್ಸ್’ ಪ್ರದರ್ಶನ ಆರಂಭಿಸಿದೆ.
ಕರ್ನಾಟಕದ ಹಲವು ತಾಲೂಕುಗಳಲ್ಲಿ ಒಂದೇ ಥಿಯೇಟರ್ ಇದೆ. ಅಲ್ಲಿ ಇಷ್ಟು ದಿನ ‘ಯುಐ’ ಪ್ರದರ್ಶನ ಕಾಣುತ್ತಿತ್ತು. ಇಂದಿನಿಂದ (ಜನವರಿ 3) ‘ಯುಐ’ ಬದಲು ‘ಮ್ಯಾಕ್ಸ್’ ಸಿನಿಮಾನ ಪ್ರದರ್ಶನ ಮಾಡಲಾಗುತ್ತಿದೆ. ಹೀಗಾಗಿ ವಾರಂತ್ಯದಲ್ಲಿ ಸಿನಿಮಾ ಮತ್ತಷ್ಟು ಗಳಿಕೆ ಮಾಡುವ ನಿರೀಕ್ಷೆ ಇದೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ದಾಖಲೆಯ ಗಳಿಕೆ ಮಾಡಿದ ‘ಮ್ಯಾಕ್ಸ್’; ಮಂಕಾದ ‘ಯುಐ’
‘ಮ್ಯಾಕ್ಸ್’ ಚಿತ್ರಕ್ಕೆ ಸುದೀಪ್ ಹೀರೋ ಆದರೆ, ಉಗ್ರಂ ಮಂಜು, ಇಳವರಸು, ಸಂಯುಕ್ತಾ ಹೊರನಾಡು ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರಕ್ಕೆ ಕಲೈಪ್ಪುಲಿ ಧಾನು ಬಂಡವಾಳ ಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.