ಕೊನೆಗೂ ಶುರುವಾಯ್ತು ರಾಜಮೌಳಿ-ಮಹೇಶ್ ಬಾಬು ಸಿನಿಮಾ
SS Rajamouli-Mahesh Babu: ಎಸ್ಎಸ್ ರಾಜಮೌಳಿ ಮತ್ತು ಮಹೇಶ್ ಬಾಬು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂದು ಘೋಷಣೆ ಮಾಡಿ ವರ್ಷಗಳೇ ಕಳೆದಿವೆ. ಇದೀಗ ಕೊನೆಗೂ ಇಂದು (ಜನವರಿ 02) ಅಧಿಕೃತವಾಗಿ ಈ ಇಬ್ಬರ ಸಿನಿಮಾ ಸೆಟ್ಟೇರಿದೆ. ಇಂದು ಹೈದರಾಬಾದ್ನಲ್ಲಿ ಸಿನಿಮಾದ ಮುಹೂರ್ತ ಮಾಡಲಾಗಿದೆ.
ರಾಜಮೌಳಿ ಮತ್ತು ಮಹೇಶ್ ಬಾಬು ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ ಎಂದು ಘೋಷಿಸಿ ಮೂರು ವರ್ಷಗಳೇ ಆದವು. ‘ಆರ್ಆರ್ಆರ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಅಧಿಕೃತವಾಗಿ ರಾಜಮೌಳಿಯೇ ತಮ್ಮ ಮುಂದಿನ ಸಿನಿಮಾ ಮಹೇಶ್ ಬಾಬು ಜೊತೆಗೆ ಎಂದು ಘೋಷಿಸಿದ್ದರು. ಆದರೆ ‘ಆರ್ಆರ್ಆರ್’ ಸಿನಿಮಾದ ಅಭೂತಪೂರ್ವ ಯಶಸ್ಸು, ಆ ಸಿನಿಮಾ ವಿಶ್ವದಾದ್ಯಂತ ಪರ್ಯಟನೆ ಮಾಡಿದ ಪರಿ, ಆಸ್ಕರ್ ರೇಸ್ ಇತ್ಯಾದಿಗಳಿಂದಾಗಿ ಸಿನಿಮಾ ಪ್ರಾರಂಭವಾಗುವುದು ತಡವಾಗಿತ್ತು. ‘ಆರ್ಆರ್ಆರ್’ ಸಿನಿಮಾದ ಭಾರಿ ಯಶಸ್ಸಿನ ಬಳಿಕ ಮುಂದಿನ ಸಿನಿಮಾವನ್ನು ಹಾಲಿವುಡ್ ಲೆವೆಲ್ನಲ್ಲಿಯೇ ಮಾಡಬೇಕು ಎಂದು ರಾಜಮೌಳಿ ಹಠ ತೊಟ್ಟಿದ್ದರಿಂದಾಗಿ ಸಿನಿಮಾ ಇಷ್ಟು ತಡವಾಗಿದೆ.
ಆದರೆ ಕೊನೆಗೂ ಇಂದು (ಜನವರಿ 02) ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಸಿನಿಮಾ ಅಧಿಕೃತವಾಗಿ ಆರಂಭವಾಗಿದೆ. ಸಿನಿಮಾದ ಮುಹೂರ್ತ ಇಂದು ಹೈದರಾಬಾದ್ನಲ್ಲಿ ನಡೆದಿದೆ. ಹೈದರಾಬಾದ್ನ ಅಲ್ಯುಮೀನಿಯಂ ಫ್ಯಾಕ್ಟರಿಯಲ್ಲಿ ಸಿನಿಮಾದ ಮುಹೂರ್ತ ನಡೆದಿದೆ. ಮುಹೂರ್ತದಲ್ಲಿ ರಾಜಮೌಳಿ ಅವರ ಪತ್ನಿ ರಮಾ ಪಾಲ್ಗೊಂಡಿದ್ದರು. ಮಹೇಶ್ ಬಾಬು ಹಾಗೂ ಅವರ ಕುಟುಂಬದವರು ಸಹ ಪೂಜೆಗೆ ಆಗಮಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮಹೇಶ್ ಬಾಬು ನಟನೆಯ 29ನೇ ಸಿನಿಮಾ ಇದಾಗಿದ್ದು, ಈ ಸಿನಿಮಾ ಅರಣ್ಯದಲ್ಲಿ ನಡೆಯುವ ಆಕ್ಷನ್ ಕತೆಯನ್ನು ಒಳಗೊಂಡಿರಲಿದೆ. ಸಿನಿಮಾದಲ್ಲಿ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರಿಯಾಂಕಾ ಚೋಪ್ರಾ ಜೊತೆಗೆ ಹಾಲಿವುಡ್ನ ನಟಿಯೊಬ್ಬರು ಸಹ ಸಿನಿಮಾದಲ್ಲಿ ಇರಲಿದ್ದಾರೆ. ಇವರ ಜೊತೆಗೆ ಹಾಲಿವುಡ್ನ ಖ್ಯಾತ ನಟ ‘ಥೋರ್’ ಖ್ಯಾತಿಯ ಕ್ರಿಸ್ ಹ್ಯಾಮ್ಸ್ವರ್ತ್ ಸಹ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ
ಸ್ಟಿವನ್ ಸ್ಪೀಲ್ಬರ್ಗ್ ಅವರ ಹಾಲಿವುಡ್ ಸಿನಿಮಾ ‘ಇಂಡಿಯಾನಾ ಜೋನ್ಸ್’ ನಿಂದ ಸ್ಪೂರ್ತಿ ಪಡೆದ ಕತೆ ಇದಾಗಿದ್ದು, ರಾಜಮೌಳಿ ಹಲವು ವರ್ಷಗಳಿಂದಲೂ ಒಂದು ‘ಜಂಗಲ್ ಅಡ್ವೇಂಚರ್’ ಸಿನಿಮಾ ಮಾಡಲು ಯೋಜಿಸಿದ್ದರಂತೆ. ಅದರಂತೆ ಈಗ ಮಹೇಶ್ ಬಾಬು ಜೊತೆ ಈ ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಅಮೆಜಾನ್ ಕಾಡುಗಳು ಸೇರಿದಂತೆ ಹಲವು ದೇಶಗಳಲ್ಲಿ ನಡೆಯಲಿದೆ. ‘ಮಿಷನ್ ಇಂಪಾಸಿಬಲ್’ ಸಿನಿಮಾಗಳಲ್ಲಿ ಇರುವಂತೆ ಈ ಸಿನಿಮಾದ ಕತೆ ಸಹ ಹಲವು ದೇಶಗಳಲ್ಲಿ ನಡೆಯಲಿದೆಯಂತೆ ಆದರೆ ಅರಣ್ಯದಲ್ಲಿ ನಡೆಯುವ ಸಾಹಸ ಸಿನಿಮಾದ ಪ್ರಧಾನ ಅಂಶವಂತೆ. ಸಿನಿಮಾದ ಕತೆಯನ್ನು ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಬರೆದಿದ್ದಾರೆ.
ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಗಾಗಿ ರಾಜಮೌಳಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಸಮಯ ವ್ಯಯಿಸಿದ್ದಾರೆ. ಹಾಲಿವುಡ್ನ ಹಲವು ಅತ್ಯುತ್ತಮ ವಿಎಫ್ಎಕ್ಸ್ ಮತ್ತು ಇನ್ನಿತರೆ ಸಂಸ್ಥೆಗಳೊಟ್ಟಿಗೆ ಹಲವು ಸುತ್ತುಗಳ ಮಾತುಕತೆಯನ್ನು ಮಾಡಿದ್ದಾರೆ. ಈ ಸಿನಿಮಾವನ್ನು ಖ್ಯಾತ ಹಾಲಿವುಡ್ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ನಿರ್ಮಿಸುವುದು ಅವರ ಗುರಿ. ಅದಕ್ಕೆ ಇಂದು ದೇವರ ಆಶೀರ್ವಾದ ಪಡೆಯಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:47 pm, Thu, 2 January 25