ರಾಜಮೌಳಿ-ಮಹೇಶ್ ಬಾಬು ಸಿನಿಮಾಕ್ಕೆ ಮತ್ತೊಬ್ಬ ಸ್ಟಾರ್ ನಟ ಎಂಟ್ರಿ
SS Rajamouli-Mahesh Babu: ಎಸ್ಎಸ್ ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಇಡೀ ವಿಶ್ವದ ಸಿನಿಮಾ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಸಿನಿಮಾ ಎನಿಸಿಕೊಂಡಿದೆ. ಈ ಸಿನಿಮಾದಲ್ಲಿ ಕೆಲವು ಹಾಲಿವುಡ್ ತಾರೆಯರು ಸಹ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ನಟಿಸಲಿದ್ದಾರೆ ಎನ್ನಲಾಗಿದೆ. ಇದೀಗ ದಕ್ಷಿಣದ ಸ್ಟಾರ್ ನಟರೊಬ್ಬರು ಚಿತ್ರತಂಡ ಸೇರಿಕೊಂಡಿರುವ ಸುದ್ದಿ ಬಂದಿದೆ.
ಭಾರತ ಮಾತ್ರವೇ ಅಲ್ಲದೆ ವಿಶ್ವದ ಸಿನಿಮಾ ಪ್ರೇಮಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಜಮೌಳಿ ಹಾಗೂ ಮಹೇಶ್ ಬಾಬು ಕಾಂಬಿನೇಷನ್ನ ಸಿನಿಮಾ. ‘ಆರ್ಆರ್ಆರ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಮಹೇಶ್ ಬಾಬು ಹಾಗೂ ರಾಜಮೌಳಿ ಹೊಸ ಸಿನಿಮಾ ಘೋಷಣೆ ಮಾಡಿದ್ದರು. ಆದರೆ ಸಿನಿಮಾದ ‘ಆರ್ಆರ್ಆರ್’ ಸಿನಿಮಾ ಬಿಡುಗಡೆ ಆಗಿ ಮೂರು ವರ್ಷವಾಗುತ್ತಾ ಬಂತು ಆದರೆ ಈಗಲೂ ಸಹ ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸೆಟ್ಟೇರಿಲ್ಲ. ಸಿನಿಮಾದ ಪ್ರೀ ಪ್ರೊಡಕ್ಷನ್ ಕಾರ್ಯ ಚಾಲ್ತಿಯಲ್ಲಿದ್ದು, ಹಲವು ದೊಡ್ಡ ತಾರೆಯರು ಸಿನಿಮಾಕ್ಕಾಗಿ ಒಂದಾಗುತ್ತಿದ್ದಾರೆ.
ಸಿನಿಮಾದ ಪ್ರೀ ಪ್ರೊಡಕ್ಷನ್ನಲ್ಲಿ ರಾಜಮೌಳಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಿನಿಮಾಕ್ಕಾಗಿ ಲೊಕೇಶನ್ ಹುಡುಕಾಟ, ವಿಎಫ್ಎಕ್ಸ್, ಗ್ರಾಫಿಕ್ಸ್ ಇನ್ನಿತರೆ ಒಪ್ಪಂದಗಳನ್ನು ಮುಗಿಸಿಕೊಂಡಿದ್ದಾರೆ. ನಟರ ಹುಡುಕಾಟದ ಕಾರ್ಯ ಪ್ರಸ್ತುತ ನಡೆಯುತ್ತಿದ್ದು, ಹಲವರ ಸ್ಕ್ರೀನ್ ಟೆಸ್ಟ್ಗಳನ್ನು ಮಾಡಿ ನಟರನ್ನು ಆಯ್ಕೆ ಮಾಡಲಾಗುತ್ತಿದೆ. ರಾಜಮೌಳಿ ಹಾಗೂ ಮಹೇಶ್ ಬಾಬು ಅವರ ಸಿನಿಮಾದಲ್ಲಿ ಈಗ ಹಾಲಿವುಡ್ನಲ್ಲಿ ಸೆಟಲ್ ಆಗಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಟಿಸಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳ ಹಿಂದೆ ಹರಿದಾಡಿತ್ತು.
ಇದನ್ನೂ ಓದಿ:ರಾಜಮೌಳಿ ಹೊಸ ಡಾಕ್ಯುಮೆಂಟರಿ ನಾಲ್ಕು ದಿನಕ್ಕೆ ಗಳಿಸಿದ್ದು ಕೇವಲ 6 ಲಕ್ಷ ರೂಪಾಯಿ
ಆದರೆ ಈಗ ಪ್ರಿಯಾಂಕಾ ಚೋಪ್ರಾ ಜೊತೆಗೆ ದಕ್ಷಿಣದ ಮತ್ತೊಬ್ಬ ಸ್ಟಾರ್ ನಟ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದುವೇ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್. ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಈಗಾಗಲೇ ನಟಿಸಿರುವ ಮಲಯಾಳಂ ಸ್ಟಾರ್ ನಟ ಮತ್ತು ನಿರ್ದೇಶಕ ಪೃಥ್ವಿರಾಜ್ ಸುಕುಮಾರ್ ಇದೀಗ ರಾಜಮೌಳಿ ಮತ್ತು ಮಹೇಶ್ ಬಾಬು ಅವರ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಹಿಂದೆ ಅವರು ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾದಲ್ಲಿ ನಟಿಸಿದ್ದರು.
ಇದೇ ಸಿನಿಮಾದಲ್ಲಿ ಹಾಲಿವುಡ್ನ ಖ್ಯಾತ ನಟ, ‘ಥಾರ್’ ಖ್ಯಾತಿಯ ಕ್ರಿಸ್ ಹ್ಯಾಮ್ಸ್ವರ್ತ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಮಾತ್ರವಲ್ಲದೆ ಸಿನಿಮಾದ ನಾಯಕಿಯೂ ಸಹ ಹಾಲಿವುಡ್ ನಟಿಯೇ ಆಗಿರಲಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ. ಆದರೆ ಈ ಸುದ್ದಿಗಳು ಇನ್ನಷ್ಟೆ ಖಾತ್ರಿ ಆಗಬೇಕಿದೆ. ಸಿನಿಮಾದ ಮುಹೂರ್ತ ಜನವರಿ ತಿಂಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿದೆ. ಸಿನಿಮಾ ಬಿಡುಗಡೆ ಆಗುವುದು 2027ಕ್ಕಂತೆ. ಈ ಸಿನಿಮಾಕ್ಕೆ ಸುಮಾರು 1000 ಕೋಟಿ ಬಜೆಟ್ ಹಾಕಲಾಗುತ್ತಿದೆ. ಹಾಲಿವುಡ್ ಲೆವೆಲ್ನಲ್ಲಿ ಸಿನಿಮಾದ ನಿರ್ಮಾಣ ಮಾಡಲು ರಾಜಮೌಳಿ ಮುಂದಾಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ