
ಇಂದು (ಏಪ್ರಿಲ್ 24) ಡಾ ರಾಜ್ಕುಮಾರ್ (Dr Rajkumar) ಅವರ ಜಯಂತ್ಯೋತ್ಸವ. ಅಭಿಮಾನಿಗಳು, ಕನ್ನಡ ಚಿತ್ರರಂಗ ಇಂದು ಡಾ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಅಣ್ಣಾವ್ರ ಕುಟುಂಬದವರು ಅಣ್ಣಾವ್ರ ಸಮಾಧಿಗೆ ಭೇಟಿ ನೀಡಿ ವಿಶೇಷ ಪೂಜೆ ಮಾಡಿದ್ದಾರೆ. ಚಿತ್ರರಂಗದ ಹಲವು ಗಣ್ಯರು ಡಾ ರಾಜ್ಕುಮಾರ್ ಅವರೊಂದಿಗಿನ ತಮ್ಮ ಭೇಟಿ, ಅನುಭವಗಳನ್ನು ಈ ಹಿಂದೆ ಹಲವಾರು ಬಾರಿ ಸಂದರ್ಶನ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂದು, ಅಣ್ಣಾವ್ರ ಹುಟ್ಟುಹಬ್ಬದಂದು ನಟಿಯೊಬ್ಬರು ಅಪರೂಪದ ಚಿತ್ರ ಹಂಚಿಕೊಂಡು ತಾವು ಅಣ್ಣಾವ್ರನ್ನು ಮೊದಲ ಬಾರಿ ಭೇಟಿಯಾದ ಅನುಭವ ಹಂಚಿಕೊಂಡಿದ್ದಾರೆ.
ಇಲ್ಲಿ ಕಾಣುತ್ತಿರುವ ಚಿತ್ರ ಬಹಳ ಅಪರೂಪದ್ದು ಡಾ ರಾಜ್ಕುಮಾರ್ ಅವರಿಗೆ ಆಗಿನ ಸಿಎಂ ಎಸ್ಎಂ ಕೃಷ್ಣ ಅವರು ವರ್ಷದ ಅತ್ಯುತ್ತಮ ಕನ್ನಡಿಗ ಪ್ರಶಸ್ತಿಯನ್ನು ಕೊಡುತ್ತಿರುವ ಚಿತ್ರವಿದು. ಚಿತ್ರದಲ್ಲಿ ನಿರ್ಮಾಪಕಿ, ಅಣ್ಣಾವ್ರ ಮಡದಿ ಪಾರ್ವತಮ್ಮ ರಾಜ್ಕುಮಾರ್ ಸಹ ಇದ್ದಾರೆ. ಈ ಚಿತ್ರದಲ್ಲಿ ಎಸ್ಎಂ ಕೃಷ್ಣ ಮತ್ತು ಡಾ ರಾಜ್ಕುಮಾರ್ ಮಧ್ಯೆ ಒಬ್ಬ ಯುವತಿ ಇದ್ದಾರಲ್ಲ, ಆ ಯುವತಿ ಈಗ ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು.
ಇಬ್ಬರು ದಿಗ್ಗಜರ ಮಧ್ಯೆ ಇರುವ ಯುವತಿಯ ಹೆಸರು ಮೇಘನಾ ಗಾಂವ್ಕರ್. ಕನ್ನಡದ ‘ತುಘ್ಲಕ್’, ‘ಸಿಂಪಲ್ ಆಗ್ ಇನ್ನೊಂದು ಸ್ಟೋರಿ’, ‘ಕಾಳಿದಾಸ ಕನ್ನಡ ಮೇಷ್ಟ್ರು’, ‘ಛೂ ಮಂತರ್’, ‘ಶಿವಾಜಿ ಸೂರತ್ಕಲ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಮೇಘನಾ ಗಾಂವ್ಕರ್, ತಮ್ಮ ಇನ್ಸ್ಟಾಗ್ರಾಂನಲ್ಲಿ ಈ ಅಪರೂಪದ ಚಿತ್ರ ಹಂಚಿಕೊಂಡಿದ್ದು, ಅಂದಿನ ದಿನವನ್ನು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಮಂತ್ರಾಲಯದ ಗರ್ಭಗುಡಿಯಲ್ಲಿ ಮಲಗಿದ್ದ ರಾಜ್ಕುಮಾರ್; ಆ ಬಳಿಕ ನಡೆದಿದ್ದು ಏನು?
ಆಗಷ್ಟೆ ಶಾಲೆ ಮುಗಿಸಿದ್ದ ಮೇಘನಾ ಗಾಂವ್ಕರ್, ಟಿವಿ ಶೋ ನಿರೂಪಣೆ ಇನ್ನಿತರೆ ಕೆಲಸಗಳನ್ನು ಮಾಡುತ್ತಿದ್ದರಂತೆ. ಒಮ್ಮೆ ಹೀಗೆ ಮಾಡುತ್ತಿದ್ದಾಗ ಈಟಿವಿ ಕನ್ನಡದವರು ಸ್ಟೇಜ್ ಗರ್ಲ್ ಆಗುವಂತೆ ಆಹ್ವಾನ ನೀಡಿದರಂತೆ. ಅಂತೆಯೇ ಒಪ್ಪಿ ಮೇಘನಾ ಹೋಗಿದ್ದಾರೆ. ಆ ಕಾರ್ಯಕ್ರಮವನ್ನು ಗಾಯಕಿ ಬಿ ಜಯಶ್ರೀ ನಿರ್ದೇಶನ ಮಾಡುತ್ತಿದ್ದರಂತೆ. ರಾಜ್ಕುಮಾರ್ ಅವರಿಗೆ ಪ್ರಶಸ್ತಿ ನೀಡುವ ಸಮಯ ಬಂದಾಗ 23 ಕೆಜಿ ಭಾರವಿದ್ದ ಹೊಯ್ಸಳ ಮೂರ್ತಿಯನ್ನು ಒಬ್ಬರೇ ಕೈಯಲ್ಲಿ ಹಿಡಿದುಕೊಂಡು ವೇದಿಕೆಗೆ ಬಂದರಂತೆ ಮೇಘನಾ ಗಾಂವ್ಕರ್.
ಪ್ರಶಸ್ತಿ ಬಲು ಭಾರವಿದ್ದ ಕಾರಣ, ಒಬ್ಬರಿಂದ ಇನ್ನೊಬ್ಬರಿಗೆ ಅದನ್ನು ಸುಲಭವಾಗಿ ಹಸ್ತಾಂತರ ಮಾಡಲು ಆಗುತ್ತಿರಲಿಲ್ಲ. ಹಾಗಾಗಿ ಎಸ್ಎಂ ಕೃಷ್ಣ ಅವರು ಅಣ್ಣಾವ್ರಿಗೆ ಪ್ರಶಸ್ತಿ ನೀಡುವಾಗ ಅದನ್ನು ಹಿಡಿದುಕೊಂಡು ಅವರಿಬ್ಬರ ಮಧ್ಯದಲ್ಲಿ ನಿಂತಿದ್ದಾರೆ ಮೇಘನಾ. ಪ್ರಶಸ್ತಿ ನೀಡುತ್ತಿದ್ದಂತೆ ಮುಂದಿದ್ದ ಕ್ಯಾಮೆರಾಮ್ಯಾನ್ಗಳು ಪಟ-ಪಟನೆ ಫೋಟೊಗಳನ್ನು ತೆಗೆದರಂತೆ, ಮಾಧ್ಯಮದವರು ವಿಡಿಯೋಗಳನ್ನು ಮಾಡಿಕೊಂಡರಂತೆ. ಅದೇ ಮೊದಲ ಬಾರಿಗೆ ಮೇಘನಾ ಅಷ್ಟೋಂದು ಮಾಧ್ಯಮದವರನ್ನು ಒಟ್ಟಿಗೆ ನೋಡಿದ್ದಂತೆ.
ಅಷ್ಟೆಲ್ಲ ನಡೆಯುತ್ತಿದ್ದರೂ ರಾಜ್ಕುಮಾರ್ ಅವರು, ಮೇಘನಾ ಕುರಿತು, ‘ಭಾರವಾಗುತ್ತಿದೆಯೇನಮ್ಮ?’ ಎಂದು ಕಾಳಜಿಯಿಂದ ಕೇಳಿದರಂತೆ. ಅದಕ್ಕೆ ಮೇಘನಾ ನಗುತ್ತಾ ‘ಹೌದು’ ಎಂದರಂತೆ. ಬಳಿಕ ರಾಜ್ಕುಮಾರ್ ಅವರು ಭಾಷಣ ಆರಂಭಿಸಿದರಂತೆ. ಆಗ ಆ ಭಾರದ ಪ್ರಶಸ್ತಿಯನ್ನು ಹಿಡಿದುಕೊಂಡು ವೇದಿಕೆ ಮೇಲೆಯೇ ನಿಂತಿದ್ದರಂತೆ ಮೇಘನಾ. ಭಾಷಣ ಹೆಚ್ಚು ಸಮಯ ನಡೆದಿದ್ದರಿಂದ ಭಾರ ತಡೆಯಲಾಗದೆ ಪ್ರಶಸ್ತಿ ಹಿಡಿದುಕೊಂಡು ವೇದಿಕೆಯ ಹಿಂಭಾಗಕ್ಕೆ ಹೋಗಿಬಿಟ್ಟರಂತೆ ಮೇಘನಾ.
ಕಾರ್ಯಕ್ರಮ ಮುಗಿಸಿಕೊಂಡು ಮನೆಗೆ ಹೋದ ಮೇಘನಾಗೆ ಬೆಳಿಗ್ಗೆ ಕಾದಿತ್ತು ಆಶ್ಚರ್ಯ. ಬೆಳಿಗ್ಗೆ ಎದ್ದು ಯಾವ ಪತ್ರಿಕೆ ನೋಡಿದರೂ ಅವರದ್ದೇ ಫೋಟೊ. ಎಸ್ಎಂ ಕೃಷ್ಣ-ಅಣ್ಣಾವ್ರ ನಡುವೆ ನಿಂತಿದ್ದ ಕಾರಣಕ್ಕೆ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿಯೂ ಅವರ ಚಿತ್ರ ಅಚ್ಚಾಗಿತ್ತಂತೆ. ಎಲ್ಲ ಟಿವಿ ಸುದ್ದಿಗಳಲ್ಲಿಯೂ ಮೇಘನಾ ಕಾಣಿಸಿಕೊಂಡಿದ್ದರಂತೆ. ಮೊದಲ ಬಾರಿಗೆ ಅಣ್ಣಾವ್ರನ್ನು ಭೇಟಿ ಆಗಿದ್ದು ನನ್ನ ಜೀವನದ ಅತ್ಯುತ್ತಮ ಅನುಭವ ಎಂದು ಹೇಳಿಕೊಂಡಿದ್ದಾರೆ ಮೇಘನಾ ಗಾಂವ್ಕರ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ