ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ಮಗನಿಗೆ ಹೆಸರಿಟ್ಟಿದ್ದಕ್ಕೆ ಕಾರಣ ತಿಳಿಸಿದ ಮೇಘನಾ ರಾಜ್​

| Updated By: ಮದನ್​ ಕುಮಾರ್​

Updated on: Sep 05, 2021 | 8:05 AM

Raayan Raj Sarja: ಚಿರಂಜೀವಿ ಸರ್ಜಾ ಪುತ್ರನಿಗೆ ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರವೂ ನಾಮಕರಣ ಮಾಡಿದ್ದರ ಬಗ್ಗೆ ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂಥವರಿಗೆ ಮೇಘನಾ ರಾಜ್​ ಸ್ಪಷ್ಟನೆ ನೀಡಿದ್ದಾರೆ.

ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ಮಗನಿಗೆ ಹೆಸರಿಟ್ಟಿದ್ದಕ್ಕೆ ಕಾರಣ ತಿಳಿಸಿದ ಮೇಘನಾ ರಾಜ್​
ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ಮಗನಿಗೆ ಹೆಸರಿಟ್ಟಿದ್ದಕ್ಕೆ ಕಾರಣ ತಿಳಿಸಿದ ಮೇಘನಾ ರಾಜ್​
Follow us on

ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಪುತ್ರನಿಗೆ ರಾಯನ್​ ರಾಜ್​ ಸರ್ಜಾ ಎಂದು ಹೆಸರು ಇಡಲಾಗಿದೆ. ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯಗಳ ಪ್ರಕಾರ ಶುಕ್ರವಾರ (ಸೆ.3) ನಾಮಕರಣ ಮಾಡಲಾಯಿತು. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ ಕೂಡ. ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರವೂ ಮಗನಿಗೆ ನಾಮಕರಣ ಮಾಡಿದ್ದರ ಬಗ್ಗೆ ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂಥವರಿಗೆ ಸ್ಪಷ್ಟನೆ ನೀಡುವ ರೀತಿಯಲ್ಲಿ ಮೇಘನಾ ರಾಜ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಒಂದು ಪೋಸ್ಟ್​ ಮಾಡಿದ್ದಾರೆ. ನಾಮಕರಣ ಶಾಸ್ತ್ರದ ವಿಡಿಯೋ ಹಂಚಿಕೊಂಡು, ಅದರ ಜೊತೆ ತಮ್ಮ ಮಾತುಗಳನ್ನು ಬರೆದುಕೊಂಡಿದ್ದಾರೆ.

‘ನನ್ನ ಮಗನಿಗೆ ಅತ್ಯುತ್ತಮವಾದನ್ನು ನೀಡುವುದು ತಾಯಿಯಾಗಿ ನನಗೆ ಮುಖ್ಯವಾಗುತ್ತದೆ. ಅವನ ತಂದೆ-ತಾಯಿ ಖುಷಿಪಟ್ಟ ರೀತಿಯಲ್ಲಿ ಎರಡೂ ಧರ್ಮಗಳಲ್ಲಿ ಇರುವ ಒಳ್ಳೆಯದು ಅವನಿಗೆ ಯಾಕೆ ಸಿಗಬಾರದು? ಜಾತಿ-ಧರ್ಮಗಳ ಭೇದ ಇಲ್ಲದೇ ಎಲ್ಲ ಜನರು ಅವನಿಗಾಗಿ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದಾರೆ. ಎಲ್ಲ ದೇವರಿಂದಲೂ ನಾವು ಆಶೀರ್ವಾದ ಬೇಡುತ್ತೇವೆ’ ಎಂದು ಮೇಘನಾ ಪೋಸ್ಟ್​ ಮಾಡಿದ್ದಾರೆ.

‘ಎರಡೂ ಸಂಪ್ರದಾಯದ ಪ್ರಕಾರ ಇದನ್ನು ಮಾಡುವುದು ನನಗೆ ಮುಖ್ಯವಾಗಿತ್ತು. ಯಾಕೆಂದರೆ ಅವನ ತಂದೆ, ನಮ್ಮ ರಾಜ ಚಿರು ಅವರು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದರು. ಎರಡೂ ಸಂಪ್ರದಾಯದಲ್ಲಿ ಇರುವ ಉತ್ತಮ ವಿಚಾರಗಳನ್ನು ಆಚರಿಸಿದ್ದೇವೆ’ ಎಂದು ಮೇಘನಾ ಸ್ಪಷ್ಟನೆ ನೀಡಿದ್ದಾರೆ.

‘ರಾಯನ್​ ಎಂಬ ಈ ಹೆಸರು ಕೂಡ ಎಲ್ಲ ಧರ್ಮಕ್ಕೆ ಸೇರಿದೆ. ಬೇರೆ ಬೇರೆ ವರ್ಷನ್​, ಬೇರೆ ಬೇರೆ ಉಚ್ಛಾರ ಇರಬಹುದು. ಆದರೆ ಅರ್ಥ ಒಂದೇ. ರಾಯನ್​ ರಾಜ್​ ಸರ್ಜಾ ಎಂದು ನಮ್ಮ ಯುವರಾಜನನ್ನು ಪರಿಚಯಿಸುತ್ತಿದ್ದೇವೆ. ಮಗನೇ ನೀನು ತಂದೆಯಂತೆಯೇ ಬೆಳೆಯಬೇಕು. ಜನರನ್ನು ಮತ್ತು ಜನರು ಮಾಡುವ ಮಾನವೀಯ ಕೆಲಸಗಳನ್ನು ಅವರು ಪ್ರೀತಿಸುತ್ತಿದ್ದರು. ಜನರ ಹಿನ್ನೆಲೆ ನೋಡಿ ಪ್ರೀತಿಸುತ್ತಿರಲಿಲ್ಲ’ ಎಂದು ಮೇಘನಾ ಬರೆದುಕೊಂಡಿದ್ದಾರೆ.

ಧ್ರುವ ಸರ್ಜಾ, ಪ್ರಮೀಳಾ ಜೋಷಾಯ್​, ಸುಂದರ್​ ರಾಜ್​, ಧ್ರುವ ಪತ್ನಿ ಪ್ರೇರಣಾ, ಪ್ರಜ್ವಲ್​ ದೇವರಾಜ್​, ಅವರ ಪತ್ನಿ ರಾಗಿಣಿ ಚಂದ್ರನ್​ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ‘ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ’ ಎಂಬ ಅರ್ಥ ಈ ಹೆಸರಿಗೆ ಇದೆ ಎಂದು ಆ ದಿನವೇ ಮೇಘನಾ ರಾಜ್​ ವಿವರಿಸಿದ್ದರು. ‘ರಾಯನ್​ ಎಂಬ ಹೆಸರು ನನ್ನ ಮನಸಿನಲ್ಲಿ ಮೊದಲಿನಿಂದಲೂ ಇತ್ತು. ಚಿರು ನಮ್ಮ ಪಾಲಿಗೆ ರಾಜ. ಅವರಿಗೆ ಹುಟ್ಟಿದ ಈ ಮಗು ಯುವರಾಜ. ನಮ್ಮ ಎಲ್ಲರ ಜೀವನದಲ್ಲಿ ಕತ್ತಲೆ ತುಂಬಿತ್ತು. ಆದರೆ ನಮಗೆ ಬೆಳಕು ತಂದವನೇ ನನ್ನ ಮಗ’ ಎಂದು ಮೇಘನಾ ರಾಜ್​ ಹೇಳಿದರು.

ಇದನ್ನೂ ಓದಿ:

ಮೇಘನಾ ರಾಜ್​ ಸುದ್ದಿಗೋಷ್ಠಿ: ರಾಯನ್​ ರಾಜ್​ ಸರ್ಜಾ ಹೆಸರಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಕುಟುಂಬ

‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್​ ನೇರ​ ಮಾತು