ನಟಿ ಮೇಘನಾ ರಾಜ್ ಸರ್ಜಾ (Meghana Raj Sarja) ಅವರು ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಪತಿ ಚಿರಂಜೀವಿ ಸರ್ಜಾ ನಿಧನದಿಂದ ಕುಗ್ಗಿದ್ದ ಅವರು, ಬಳಿಕ ಪುತ್ರನ ಆರೈಕೆಯಲ್ಲಿ ತೊಡಗಿಕೊಂಡಿದ್ದರು. ಈಗ ಸಿನಿಮಾಗಾಗಿಯೂ ಸಮಯ ಹೊಂದಿಸಿಕೊಳ್ಳುತ್ತಿದ್ದಾರೆ. ಮೇಘನಾ ರಾಜ್ ಅವರ ಕಮ್ಬ್ಯಾಕ್ ಚಿತ್ರಕ್ಕೆ ಪನ್ನಗ ಭರಣ (Pannaga Bharana) ಬಂಡವಾಳ ಹೂಡಲಿದ್ದಾರೆ ಹಾಗೂ ವಿಶಾಲ್ ಆತ್ರೇಯಾ ಅವರು ನಿರ್ದೇಶನ ಮಾಡಲಿದ್ದಾರೆ ಎಂದು ಒಂದಷ್ಟು ದಿನಗಳ ಹಿಂದೆ ಸುದ್ದಿ ಹೊರಬಿದ್ದಿತ್ತು. ಈಗ ಆ ಚಿತ್ರಕ್ಕೆ ಶೀರ್ಷಿಕೆ ಏನೆಂಬುದು ರಿವೀಲ್ ಆಗಿದೆ. ‘ತತ್ಸಮ ತದ್ಭವ’ (Tatsama Tadbhava) ಎಂದು ಟೈಟಲ್ ಇಡಲಾಗಿದೆ. ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆ ಆಗಿದ್ದು, ಸಾಕಷ್ಟು ಕುತೂಹಲ ಮೂಡಿಸುವಂತಿದೆ.
ಮೇಘನಾ ರಾಜ್ ಸರ್ಜಾ ಅವರು ಸ್ಕ್ರಿಪ್ಟ್ ಆಯ್ಕೆಯಲ್ಲಿ ತುಂಬ ಕಾಳಜಿ ವಹಿಸುತ್ತಾರೆ. ಈ ಬಾರಿ ಅವರು ಆಯ್ದುಕೊಂಡಿರುವ ‘ತತ್ಸಮ ತದ್ಭವ’ ಸಿನಿಮಾದ ಕತೆ ಕೂಡ ಸಖತ್ ತೀವ್ರತೆಯಿಂದ ಕೂಡಿರುವಂತಿದೆ. ಮೇಘನಾ ಅವರ ಬಾಯಿಯನ್ನು ಯಾರೋ ಮುಚ್ಚಿರುವ ರೀತಿಯಲ್ಲಿ ಫಸ್ಟ್ ಲುಕ್ ಪೋಸ್ಟರ್ ಮೂಡಿಬಂದಿದೆ. ಅವರ ಕಣ್ಣುಗಳಲ್ಲಿ ಭಯ ಎದ್ದು ಕಾಣಿಸುತ್ತಿದೆ. ಈ ಶೀರ್ಷಿಕೆಗೆ ‘ದಿ ಕನ್ಫೆಷನ್’ ಎಂಬ ಟ್ಯಾಗ್ ಲೈನ್ ಕೂಡ ಇದೆ. ಈ ಎಲ್ಲ ಕಾರಣಗಳಿಂದಾಗಿ ‘ತತ್ಸಮ ತದ್ಭವ’ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ.
ಇದನ್ನೂ ಓದಿ: ಕ್ರಿಸ್ಮಸ್ ಪ್ರಯುಕ್ತ ಮೇಘನಾ ರಾಜ್ ಸರ್ಪ್ರೈಸ್; ಯೂಟ್ಯೂಬ್ ಚಾನೆಲ್ ಆರಂಭಿಸಿದ ನಟಿ
ಮೇಘನಾ ರಾಜ್ ಅವರು ಮೊದಲಿನಂತೆ ಚಿತ್ರರಂಗದಲ್ಲಿ ಸಕ್ರಿಯರಾಗಿರುವುದಕ್ಕೆ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್ಗೆ ಪಾಸಿಟಿವ್ ಪ್ರತಿಕ್ರಿಯೆಗಳು ಬರುತ್ತಿವೆ. ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಶ್ರೀನಿವಾಸ್ ರಾಮಯ್ಯ ಛಾಯಾಗ್ರಹಣ, ರವಿ ಆರಾಧ್ಯ ಸಂಕಲನ ಈ ಚಿತ್ರಕ್ಕೆ ಇರಲಿದೆ. ಕೆಆರ್ಜಿ ಸ್ಟುಡಿಯೋಸ್ ಮೂಲಕ ಈ ಸಿನಿಮಾ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಥೈಲ್ಯಾಂಡ್ನಲ್ಲಿ ಮೇಘನಾ ರಾಜ್ ಮೋಜು-ಮಸ್ತಿ; ಇಲ್ಲಿವೆ ಫೋಟೋಗಳು
ಅನೇಕ ಸೆಲೆಬ್ರಿಟಿಗಳು ಮೇಘನಾ ರಾಜ್ ಅವರಿಗೆ ಶುಭ ಕೋರಿದ್ದಾರೆ. ನಟಿ ರಮ್ಯಾ ಅವರು ‘ತತ್ಸಮ ತದ್ಭವ’ ಚಿತ್ರದ ಪೋಸ್ಟರ್ ಅನ್ನು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ‘ಆಲ್ ದಿ ಬೆಸ್ಟ್’ ಹೇಳಿದ್ದಾರೆ. ಎಲ್ಲರಿಂದ ಸಿಗುತ್ತಿರುವ ಬೆಂಬಲ ಕಂಡು ಮೇಘನಾ ರಾಜ್ ಖುಷಿ ಆಗಿದ್ದಾರೆ.
ಹಲವು ಕಾರಣಗಳಿಂದಾಗಿ ‘ತತ್ಸಮ ತದ್ಭವ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅವರಿಬ್ಬರನ್ನು ಒಂದೇ ಸಿನಿಮಾದಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.