ಅನೇಕ ಬಾರಿ ರ‍್ಯಾಪ್ ಸಾಂಗ್ಗಳಲ್ಲಿ ಬಳಕೆ ಆಗುವ ಪದಗಳು ಖಾರವಾಗಿ ಇರುತ್ತವೆ. ಆದರೆ ಎಲ್ಲ ರ‍್ಯಾಪ್ ಸಾಂಗ್ ಇದೇ ರೀತಿ ಇರಬೇಕು ಎಂದೇನೂ ಇಲ್ಲ. ಯುವ ರಾಜಕಾರಣಿ ಮೊಹಮ್ಮದ್ ನಲಪಾಡ್ ಕೂಡ ಇದೇ ಅಭಿಪ್ರಾಯ ತಿಳಿಸಿದ್ದಾರೆ. ಅದಕ್ಕೆ ವೇದಿಕೆ ಆಗಿದ್ದು, ‘ಲೈಫ್ ಆಫ್ ಮೃದುಲ’ ಸಿನಿಮಾದ ಹೊಸ ಸಾಂಗ್ ಬಿಡುಗಡೆ ಕಾರ್ಯಕ್ರಮ. ಬಹುತೇಕ ಹೊಸಬರೇ ಸೇರಿಕೊಂಡು ಈ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ‘ಮದನ್ ಮೂವೀಸ್’ ಮೂಲಕ ಮದನ್ ಕುಮಾರ್ ಸಿ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಾಯಕನಾಗಿಯೂ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ‘ಬಗ್ಸೋದೇ ಬಡಿಯೋದೇ’ ಸಾಂಗ್ ಬಿಡುಗಡೆ ಮಾಡಲಾಯಿತು. ಮೊಹಮ್ಮದ್ ನಲಪಾಡ್ ಅವರು ಈ ಹಾಡನ್ನು ಬಿಡುಗಡೆ ಮಾಡಿದರು. ಬಳಿಕ ತಮ್ಮ ಪ್ರಾಮಾಣಿಕ ಅನಿಸಿಕೆ ತಿಳಿಸಿದರು.
ಯೋಗಿ ದೇವಗಂಗೆ ಅವರು ಸಂಭಾಷಣೆ ಬರೆಯುವುದರ ಜೊತೆಗೆ ಈ ಸಿನಿಮಾದ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಹಲವು ಡೈರೆಕ್ಟರ್ಸ್ ಬಳಿ ಸಿನಿಮಾದ ಕಸುಬು ಕಲಿತು ಬಂದಿರುವ ಚೇತನ್ ತ್ರಿವೇಣ್ ಅವರು ಈ ಸಿನಿಮಾಗೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಪ್ರಮೋಷನ್ನ ಮೊದಲ ಹಂತವಾಗಿ ‘ಬಗ್ಸೋದೇ ಬಡಿಯೋದೇ’ ಎಂಬ ರ‍್ಯಾಪ್ ಹಾಡನ್ನು ರಿಲೀಸ್ ಮಾಡಲಾಯಿತು. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಮೊಹಮ್ಮದ್ ನಲಪಾಡ್ ಮಾತನಾಡಿದರು.
‘ಹೊಸಬರು ಸೇರಿ ಈ ಸಿನಿಮಾ ಮಾಡಿರುವುದು ಖುಷಿ. ಅದೇ ಕಾರಣಕ್ಕಾಗಿ ನಾನು ಈ ಕಾರ್ಯಕ್ರಮಕ್ಕೆ ಬಂದೆ. ಚಿತ್ರತಂಡಕ್ಕೆ ನಾನು ಒಂದು ಸಲಹೆ ನೀಡುತ್ತೇನೆ. ಬಗ್ಸೋದು ಬಡಿಯೋದು ಎಲ್ಲ ಬೇಕಾಗಿಲ್ಲ. ಬಗ್ಗಿಸಿ, ಹೊಡೆಸಿ ಅನುಭವ ಇರುವ ನಾನು ಈ ಮಾತನ್ನು ನಿಮಗೆ ಹೇಳುತ್ತಿದ್ದೇನೆ. ಅದೆಲ್ಲ ಏನೂ ಬೇಡ. ಇಂಥದ್ದನ್ನೆಲ್ಲ ನಮ್ಮ ಯುವಕರಿಗೆ ತೋರಿಸಬಾರದು. ನಮ್ಮ ಶೈಲಿಯಲ್ಲಿ ಬದಲಾವಣೆ ಬೇಕು. ರ‍್ಯಾಪ್ ಸಾಂಗ್ ಎಂದಮಾತ್ರಕ್ಕೆ ಅದು ಕ್ರೂರವಾಗಿ ಇರಬೇಕು ಅಂತೇನೂ ಇಲ್ಲ. ಒಳ್ಳೆಯ ರೀತಿಯಲ್ಲೂ ರ‍್ಯಾಪ್ ಸಾಂಗ್ ಮಾಡಬಹುದು. ಈ ಪದಗಳಲ್ಲಿ ಬದಲಾವಣೆ ಇದ್ದರೆ ಮಾತ್ರ ಮುಂದಿನ ತಲೆಮಾರಿನವರು ಬದಲಾವಣೆ ನೋಡೋಕೆ ಸಾಧ್ಯವಾಗುವುದು. ಮುಂದಿನ ದಿನಗಳಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಒಳ್ಳೆಯತನವನ್ನು ಬೆಳೆಸೋಣ. ಇನ್ನೊಂದು ರೊಮ್ಯಾಂಟಿಕ್ ಹಾಡು ಚೆನ್ನಾಗಿದೆ’ ಎಂದಿದ್ದಾರೆ ಮೊಹಮ್ಮದ್ ನಲಪಾಡ್.
ಈ ಸಿನಿಮಾದಲ್ಲಿ ಪೂಜಾ ಪೋಕಾಪುರ ಅವರು ನಾಯಕಿಯಾಗಿ ನಟಿಸಿದ್ದಾರೆ. ಅವರ ಜೊತೆ ಆಶಾ ಸುಜಯ್, ಕುಲದೀಪ್, ಶಶಾಂಕ್, ಯೋಗಿ ದೇವಗಂಗೆ, ಅನೂಪ್ ಥಾಮಸ್, ಶರೀಫ್, ಪ್ರೀತಿ ಚಿದಾನಂದ್ ಮುಂತಾದವರು ಅಭಿನಯಿಸಿದ್ದಾರೆ. ರಾಹುಲ್ ಎಸ್. ವಾಸ್ತರ್ ಅವರು ಸಂಗೀತ ನೀಡಿದ್ದಾರೆ. ಅಚ್ಚು ಸುರೇಶ್ ಅವರ ಛಾಯಾಗ್ರಹಣ, ವಸಂತ ಕುಮಾರ್ ಕೆ. ಅವರ ಸಂಕಲನ ಈ ಸಿನಿಮಾಗಿದೆ. ಬೆಂಗಳೂರು, ಕುಂದಾಪುರದಲ್ಲಿ 25 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.
ಇದನ್ನೂ ಓದಿ: ‘ಬ್ಯಾಕ್ ಬೆಂಚರ್ಸ್’ ಚಿತ್ರದಲ್ಲಿ ಕಾಲೇಜ್ ಮಂದಿ ಕಥೆ; ತರ್ಲೆ, ತಮಾಷೆಗೆ ಆದ್ಯತೆ
‘ಲೈಫ್ ಆಫ್ ಮೃದುಲ’ ಸಿನಿಮಾಗೆ ಈಗಾಗಲೇ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಮೃದುಲಾ ಎಂಬಾಕೆಯ ಬದುಕಿನಲ್ಲಿ ಎದುರಾಗುವ 3 ವಿಭಿನ್ನ ಕಾಲ ಘಟ್ಟಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗುವುದು. ತನ್ನ ಜೀವನದಲ್ಲಿ ಬರುವ ಕೆಲವು ಅನಿರೀಕ್ಷಿತ ಸವಾಲುಗಳನ್ನು ಆಕೆ ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಇಂಟರೆಸ್ಟಿಂಗ್ ಟ್ವಿಸ್ಟ್ಗಳ ಮೂಲಕ ಥ್ರಿಲ್ಲರ್ ಶೈಲಿಯಲ್ಲಿ ತೋರಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.