
ಶಿವರಾಜ್ ಕುಮಾರ್ (Shiva Rajkumar) ನಟನೆಯ ‘ಸಂತ’, ಉಪೇಂದ್ರ ನಟನೆಯ ‘ನಾಗರಹಾವು’ ಸಿನಿಮಾಗಳ ನಿರ್ದೇಶಕ ಎಸ್ ಮುರಳಿ ಮೋಹನ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ತಮ್ಮ ಚಿಕಿತ್ಸೆಗೆ ಹಣಕಾಸಿನ ಅಗತ್ಯವಿದ್ದು ನೆರವಿಗಾಗಿ ಮನವಿ ಮಾಡಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಅವರ ಆಪ್ತರೂ ಆಗಿರುವ ಎಸ್ ಮುರಳಿ ಮೋಹನ್ ಸಿನಿಮಾ ನಿರ್ದೇಶನದ ಜೊತೆಗೆ ಹಲವಾರು ಸಿನಿಮಾಗಳಿಗೆ ಕತೆಗಾರ, ಸಂಭಾಷಣೆಕಾರ ಮತ್ತು ಗೀತ ರಚನೆಕಾರರಾಗಿಯೂ ಕೆಲಸ ಮಾಡಿದ್ದಾರೆ. ಈಗ ಅವರಿಗೆ ಗಂಭೀರ ಆರೋಗ್ಯ ಸಮಸ್ಯೆ ಎದುರಾಗಿದ್ದು, ಚಿಕಿತ್ಸೆಗಾಗಿ ದೊಡ್ಡ ಮೊತ್ತದ ಹಣಕಾಸಿನ ಅಗತ್ಯವಿದೆ.
ಬಹಿರಂಗ ಪತ್ರ ಬರೆದಿರುವ ನಿರ್ದೇಶಕ ಎಸ್ ಮುರಳಿ ಮೋಹನ್, ‘ನಾನು ಕಳೆದ 36 ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ, ಗೀತ ರಚನೆಕಾರನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 2018 ರಿಂದಲೂ ಆರೋಗ್ಯ ಸಮಸ್ಯೆ ಇದೆ. ಮೂತ್ರಪಿಂಡ ವೈಫಲ್ಯ ಉಂಟಾದ ವಾರಕ್ಕೆ ಮೂರು ದಿನ ಡಯಾಲಿಸಿಸ್ ಮಾಡಿಸುತ್ತಿದ್ದೇನೆ. 2020ರಲ್ಲಿ ನಾನು ಮೂತ್ರಪಿಂಡಕ್ಕಾಗಿ ಅಂಗಾಗ ಕಸಿ ಕಾರ್ಯಕ್ರಮ ಜೀವನಸಾರ್ಥಕತೆಯಲ್ಲಿ ನೊಂದಣಿ ಮಾಡಿಸಿದ್ದೇನೆ. ಈಗ ನನಗೆ ಮೂತ್ರಪಿಂಡ ಕಸಿ ಮಾಡಿಸುವ ಸಮಯ ಬಂದಿದೆ. ಬೆಂಗಳೂರಿನ ಜೆಸಿ ನಗರದಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ’ ಎಂದಿದ್ದಾರೆ.
ಇದನ್ನೂ ಓದಿ:‘ರಾಜ್ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು ರಾಮಚಂದ್ರಪ್ಪ
‘ಈ ಶಸ್ತ್ರಚಿಕಿತ್ಸೆಗೆ 25 ಲಕ್ಷ ರೂಪಾಯಿಗಳು ಅಗತ್ಯವಿದೆ. ನಾನು ಈಗಾಗಲೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಇತರೆ ಚಿಕಿತ್ಸೆಗಳು ಮಾಡಿಸಿಕೊಂಡಿರುವ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ತಾವುಗಳು ದಯಮಾಡಿ ನನಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇನೆ’ ಎಂದು ಪತ್ರದಲ್ಲಿ ಬರೆದು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಎಸ್ ಮುರಳಿ ಮೋಹನ್ ನೀಡಿದ್ದಾರೆ.
ಎಸ್ ಮುರಳಿ ಮೋಹನ್ ಅವರು ಕನ್ನಡದ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ನಟ ಉಪೇಂದ್ರ ಅವರ ಆಪ್ತರಾಗಿದ್ದ ಮುರಳಿ ಮೋಹನ್, ‘ಓಂ’ ಸೇರಿದಂತೆ ಆರಂಭದ ಅವರ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ, ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದಾರೆ. ಈಗ ಗಂಭೀರ ಆರೋಗ್ಯ ಸಮಸ್ಯೆಯಿಂದ ಮುರಳಿ ಬಳಲುತ್ತಿದ್ದು ಚಿಕಿತ್ಸೆಗಾಗಿ ಬೇಡಿಕೆ ಇಟ್ಟಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:12 pm, Tue, 29 April 25