ಇಡೀ ಭಾರತದಲ್ಲಿ ಮುಂಬೈ ಬಿಟ್ಟರೆ ಕರ್ನಾಟಕದಲ್ಲೇ ಸಿನಿಮಾ ಟಿಕೆಟ್ ದರ ಹೆಚ್ಚು. ಇಲ್ಲಿ ಟಿಕೆಟ್ ದರ ನಿಗದಿಗೆ ಯಾವುದೇ ಮಾನದಂಡಗಳಿಲ್ಲ. ಕೆಲವು ಪರಭಾಷೆ ಸಿನಿಮಾಗಳ ಟಿಕೆಟ್ ದರ 1500-2000 ಸಹ ಇವೆ. ಅದೇ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಯಾವುದೇ ಚಿತ್ರಮಂದಿರ, ಯಾವುದೇ ಸಿನಿಮಾ ಆದರೂ ಸಹ 200 ರೂಪಾಯಿ ದಾಟುವಂತಿಲ್ಲ. ರಾಜ್ಯದಲ್ಲಿಯೂ ಸಹ ಸಿನಿಮಾ ಟಿಕೆಟ್ ದರವನ್ನು ನಿಯಂತ್ರಿಸಬೇಕು ಎಂಬ ಕೂಗು ವರ್ಷಗಳಿಂದಲೂ ಕೇಳಿ ಬರುತ್ತಿತ್ತು, ಇದೀಗ ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಸರ್ಕಾರವನ್ನು ಒತ್ತಾಯಿಸಿದ್ದು, ಇನ್ನು ಹತ್ತು ದಿನಗಳಲ್ಲಿ ಈ ಬಗ್ಗೆ ಆದೇಶ ಹೊರಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸುರೇಶ್, ‘ಈ ಹಿಂದೆ 2017 ರಲ್ಲಿ ಸಾರಾ ಗೋವಿಂದು ಅವರು ಅಧ್ಯಕ್ಷರಾಗಿದ್ದಾಗ, ಆಗ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ನಮ್ಮ ರಾಜ್ಯದಲ್ಲಿ ಮಲ್ಟಿಪ್ಲೆಕ್ಸ್ಗಳು ಜನರಿಂದ ಭಾರಿ ಮೊತ್ತದ ಟಿಕೆಟ್ ದರವನ್ನು ಪಡೆಯುತ್ತಿವೆ, ಇದರಿಂದ ಚಿತ್ರರಂಗಕ್ಕೆ ಮತ್ತು ಸಿನಿಮಾ ಪ್ರೇಕ್ಷಕರಿಗೆ ಸಮಸ್ಯೆ ಆಗುತ್ತಿದೆ ಎಂದು ಮನವಿ ಮಾಡಿದ್ದರು. ಅಂತೆಯೇ ಮಲ್ಟಿಪ್ಲೆಕ್ಸ್ಗಳ ಟಿಕೆಟ್ ದರದ ಮೇಲೆ ನಿಯಂತ್ರಣ ಹೇರುವಂತೆ ಸಿದ್ದರಾಮಯ್ಯ ನಿರ್ದೇಶನದ ಮೇರೆಗೆ ವಾರ್ತಾ ಇಲಾಖೆ ಆದೇಶ ಹೊರಡಿಸಿತ್ತು’ ಎಂದು ಮಾಹಿತಿ ನೀಡಿದರು.
‘ಆದರೆ ವಾರ್ತಾ ಇಲಾಖೆ ನೀಡಿದ್ದ ಆದೇಶದ ಮೇಲೆ ಮಲ್ಟಿಪ್ಲೆಕ್ಸ್ಗಳು ನ್ಯಾಯಾಲಯದಲ್ಲಿ ತಡೆ ತಂದಿದ್ದರು. ಆದರೆ ಈಗ ಆ ತಡೆ ಆದೇಶ ರದ್ದಾಗಿದೆ. ಈಗ ರಾಜ್ಯದ ಗೃಹ ಇಲಾಖೆಯಿಂದ ಹೊಸ ಆದೇಶ ಹೊರಡಿಸಬೇಕಾಗಿದೆ. ಈ ಬಗ್ಗೆ ನಾವು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ನಮ್ಮ ನೆರೆಯ ರಾಜ್ಯಗಳಲ್ಲಿ ಇರುವ ಟಿಕೆಟ್ ದರ ಹಾಗೂ ನಮ್ಮ ರಾಜ್ಯದಲ್ಲಿ ಇರುವ ಟಿಕೆಟ್ ದರ ಇನ್ನಿತರೆ ವಿಷಯಗಳ ಬಗ್ಗೆ ಮನವರಿಕೆ ಮಾಡಿದ್ದೆವೆ. ಇನ್ನು 10 ದಿನಗಳಲ್ಲಿ ಈ ಬಗ್ಗೆ ಗೃಹ ಇಲಾಖೆಯಿಂದ ನಿಖರ ಆದೇಶ ಹೊರಡಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ’ ಎಂದಿದ್ದಾರೆ ಸುರೇಶ್.
ಇದನ್ನೂ ಓದಿ:ಕುಟುಂಬದ 4 ಜನ ಮಲ್ಟಿಪ್ಲೆಕ್ಸ್ಗೆ ಹೋದರೆ 10 ಸಾವಿರ ರೂ. ಬೇಕು: ಕರಣ್ ಜೋಹರ್
ಮಾಜಿ ಅಧ್ಯಕ್ಷ ಸಾರಾ ಗೋವಿಂದು ಮಾತನಾಡಿ, ‘ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ಗಳು ಮನಸೋಇಚ್ಛೆ ಟಿಕೆಟ್ ದರ ವಸೂಲಿ ಮಾಡುತ್ತೀವೆ. ಇತ್ತೀಚೆಗೆ ಬಿಡುಗಡೆ ಆದ ರಜನೀಕಾಂತ್ ಸಿನಿಮಾಕ್ಕೆ 1500-2000 ಟಿಕೆಟ್ ದರ ವಿಧಿಸಲಾಗಿತ್ತು. ಇದರಿಂದ ಬೇರೆ ಸಿನಿಮಾಗಳಿಗೆ ಸಮಸ್ಯೆ ಆಗುತ್ತದೆ. ಮಧ್ಯಮವರ್ಗದವರು ಚಿತ್ರಮಂದಿರದಿಂದ ದೂರ ಇರಬೇಕಾಗುತ್ತದೆ. ಎಲ್ಲ ಸಿನಿಮಾಗಳಿಗೆ, ಎಲ್ಲ ಚಿತ್ರಮಂದಿರಗಳಿಗೂ ಒಂದೇ ಟಿಕೆಟ್ ದರ ಇರಬೇಕು ಎಂಬುದು ನಮ್ಮ ಬೇಡಿಕೆ. ಹೊಸ ಆದೇಶ ಹೊರಡಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ, ಒಂದೊಮ್ಮೆ ಆದೇಶ ಹೊರಡಿಸದೇ ಇದ್ದರೆ ಏನು ಮಾಡಬೇಕು ಎಂದು ನಾವು ನಿರ್ಧಾರ ಮಾಡುತ್ತೇವೆ’ ಎಂದಿದ್ದಾರೆ ಸಾರಾ ಗೋವಿಂದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:03 am, Sun, 27 October 24