ಕುಟುಂಬದ 4 ಜನ ಮಲ್ಟಿಪ್ಲೆಕ್ಸ್ಗೆ ಹೋದರೆ 10 ಸಾವಿರ ರೂ. ಬೇಕು: ಕರಣ್ ಜೋಹರ್
ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರು ಹೇಳುವ ಪ್ರಕಾರ, ಕುಟುಂಬದ 4 ಸದಸ್ಯರು ಒಂದು ಸಿನಿಮಾವನ್ನು ನೋಡಲು ಮಲ್ಟಿಪ್ಲೆಕ್ಸ್ಗೆ ಹೋದರೆ ಬರೋಬ್ಬರಿ 10 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಆದರೆ ಈ ಮಾತನ್ನು ‘ಭಾರತದ ಮಲ್ಟಿಪ್ಲೆಕ್ಸ್ ಒಕ್ಕೂಟ’ ತಳ್ಳಿಹಾಕಿದೆ. ಹಾಗಾದರೆ ಮಲ್ಟಿಪ್ಲೆಕ್ಸ್ನವರು ಹೇಳುವ ಪ್ರಕಾರ 4 ಜನರಿಗೆ ಎಷ್ಟು ಖರ್ಚಾಗುತ್ತದೆ? ಈ ಸುದ್ದಿಯಲ್ಲಿದೆ ವಿವರ..
ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಹೋಲಿಸಿದರೆ ಮಲ್ಟಿಪ್ಲೆಕ್ಸ್ಗಳಲ್ಲಿ ಸಿನಿಮಾದ ಟಿಕೆಟ್ ಬೆಲೆ ಹೆಚ್ಚಿರುತ್ತದೆ. ಅಲ್ಲದೇ, ಅಲ್ಲಿ ಸಿಗುವ ತಿನಿಸು ಮತ್ತು ಪಾನೀಯಗಳ ಬೆಲೆ ಕೂಡ ದುಬಾರಿ ಆಗಿರುತ್ತದೆ. ಆ ಕಾರಣದಿಂದ ಅನೇಕರು ಮಲ್ಟಿಪ್ಲೆಕ್ಸ್ ಎಂದರೆ ಹಿಂದೇಟು ಹಾಕುತ್ತಾರೆ. ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡಲು ಹೋಗಿ ಪಾಪ್ಕಾರ್ನ್ ಖರೀದಿಸಿದರೆ ಬಡವರ ಮತ್ತು ಮಧ್ಯಮ ವರ್ಗದವರ ಕೈ ಸುಟ್ಟು ಹೋಗುತ್ತದೆ. ಇಡೀ ಫ್ಯಾಮಿಲಿ ಹೋದರೆ ಜೇಬಿಗೆ ಕತ್ತರಿ ಬೀಳುತ್ತದೆ. ಆ ಬಗ್ಗೆ ಕರಣ್ ಜೋಹರ್ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರ ಲೆಕ್ಕವನ್ನು ಮಲ್ಟಿಪ್ಲೆಕ್ಸ್ನವರು ಒಪ್ಪಿಕೊಂಡಿಲ್ಲ.
ಚಿತ್ರರಂಗದಲ್ಲಿ ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಕರಣ್ ಜೋಹರ್ ಅವರು ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ಅವರಿಗೆ ಇರುವ ಅನುಭವ ಅಪಾರ. ಆದರೆ ಅವರು ಮಲ್ಟಿಪ್ಲೆಕ್ಸ್ನಲ್ಲಿನ ದುಡ್ಡಿನ ಬಗ್ಗೆ ಮಾತನಾಡುವಾಗ ಲೆಕ್ಕ ತಪ್ಪಿದ್ದಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕೆಂದರೆ, ಒಂದು ಫ್ಯಾಮಿಲಿಯ ನಾಲ್ಕು ಜನರು ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್ಗೆ ಹೋದರೆ ಹತ್ತು ಸಾವಿರ ರೂಪಾಯಿ ಬೇಕಾಗುತ್ತದೆ ಎಂದು ಕರಣ್ ಜೋಹರ್ ಹೇಳಿದ್ದಾರೆ. ಆದರೆ ಅವರ ಈ ಲೆಕ್ಕಕ್ಕೆ ‘ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ತಕರಾರು ತೆಗೆದಿದೆ.
ಕರಣ್ ಜೋಹರ್ ಅಭಿಪ್ರಾಯ ಏನು?
‘ಮಲ್ಟಿಪ್ಲೆಕ್ಸ್ಗೆ ಹೋದಾಗ ಮಕ್ಕಳು ಪಾಪ್ಕಾರ್ನ್ ಅಥವಾ ಬೇರೆ ಏನನ್ನಾದರೂ ಕೇಳಿದರೆ ಕೊಡಿಸೋಕೆ ಆಗಲ್ಲ ಅಂತ ಹೇಳಲು ಬೇಸರ ಆಗುತ್ತದೆ ಎಂದು ಫ್ಯಾಮಿಲಿ ಪ್ರೇಕ್ಷಕರು ಹೇಳ್ತಾರೆ. ಅದರ ಬದಲು ಅವರು ಯಾವುದಾದರೂ ರೆಸ್ಟೋರೆಂಟ್ಗೆ ಹೋಗಿ ಊಟಕ್ಕೆ ಮಾತ್ರ ಹಣ ನೀಡುತ್ತಾರೆ. 4 ಜನರು ಇರುವ ಒಂದು ಕುಟುಂಬಕ್ಕೆ ಮಲ್ಟಿಪ್ಲೆಕ್ಸ್ನಲ್ಲಿ ಸಿನಿಮಾ ನೋಡಲು 10 ಸಾವಿರ ರೂಪಾಯಿ ಬೇಕು. ಅದನ್ನು ಭರಿಸಲು ಅವರಿಗೆ ಸಾಧ್ಯವಿಲ್ಲ’ ಎಂದು ಕರಣ್ ಜೋಹರ್ ಹೇಳಿದ್ದಾರೆ.
ಇದನ್ನೂ ಓದಿ: ಅವಕಾಶಕ್ಕಾಗಿ ಕರಣ್ ಜೋಹರ್ ಕಾರಿನ ಹಿಂದೆ ಓಡಿದ್ದ ನಟ ತಹ ಶಾ; ಈಗ ಹೇಗಿದೆ ಜೀವನ?
ಮಲ್ಟಿಪ್ಲೆಕ್ಸ್ ಮಂದಿ ಹೇಳೋದೇನು?
ಕರಣ್ ಜೋಹರ್ ಅವರ ಹೇಳಿಕೆಗೆ ‘ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ ಪ್ರತಿಕ್ರಿಯೆ ನೀಡಿದೆ. ‘2023ರಲ್ಲಿ ಒಂದು ಸಿನಿಮಾದ ಸರಾಸರಿ ಟಿಕೆಟ್ ಬೆಲೆ 130 ರೂಪಾಯಿ. 2023-24ರಲ್ಲಿ ಪಿವಿಆರ್-ಐನಾಕ್ಸ್ ಪ್ರಕಾರ ಸಿನಿಮಾ ಟಿಕೆಟ್ನ ಸರಾಸರಿ ಬೆಲೆ 258 ರೂಪಾಯಿ. ಪ್ರತಿ ವ್ಯಕ್ತಿಯ ಪಾನೀಯ ಮತ್ತು ತಿಂಡಿಯ ಬೆಲೆ 132 ರೂಪಾಯಿ. ಸಿನಿಮಾ ಮತ್ತು ತಿಂಡಿ-ಪಾನೀಯದ ಬೆಲೆ 4 ಜನರಿಗೆ ಒಟ್ಟು 1560 ರೂಪಾಯಿ ಮಾತ್ರ ಆಗುತ್ತದೆ’ ಎಂದು ಹೇಳಿಕೆ ಬಿಡುಗಡೆ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.