ಕನ್ನಡದ 100 ಸ್ಮರಣೀಯ ಸಿನಿಮಾಗಳು ಯಾವವು ಗೊತ್ತಾ? ಶರಣು ಹುಲ್ಲೂರು ಬರೆದ ಪುಸ್ತಕದಲ್ಲಿದೆ ಉತ್ತರ

|

Updated on: Oct 10, 2023 | 7:08 PM

ಮೂಕಿ ಸಿನಿಮಾಗಳ ಯುಗದಿಂದ 2022ರ ತನಕ ರಿಲೀಸ್​ ಆದ ಕನ್ನಡದ ಸಿನಿಮಾಗಳಲ್ಲಿ ನೂರು ಸಿನಿಮಾಗಳನ್ನು ಆಯ್ಕೆ ಮಾಡುವ ಮೂಲಕ ಸಿನಿಮಾಸಕ್ತರಿಗಾಗಿ ಶರಣು ಹುಲ್ಲೂರು ಅವರು ಈ ಪುಸ್ತಕ ರಚಿಸಿದ್ದಾರೆ. ಅತಿ ಅಪರೂಪದ ಫೋಟೋಗಳು ಕೂಡ ಈ ಪುಸ್ತಕದಲ್ಲಿವೆ. ಇದರ ಬಗ್ಗೆ ರಮೇಶ್ ಅರವಿಂದ್, ಜೋಗಿ ಮೆಚ್ಚುಗೆ ಸೂಚಿಸಿದ್ದಾರೆ.

ಕನ್ನಡದ 100 ಸ್ಮರಣೀಯ ಸಿನಿಮಾಗಳು ಯಾವವು ಗೊತ್ತಾ? ಶರಣು ಹುಲ್ಲೂರು ಬರೆದ ಪುಸ್ತಕದಲ್ಲಿದೆ ಉತ್ತರ
‘ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮ
Follow us on

ಕನ್ನಡದಲ್ಲಿ ಈವರೆಗೂ 4800ಕ್ಕೂ ಅಧಿಕ ಸಿನಿಮಾಗಳು (Kannada Movies) ಬಂದಿವೆ. ಇಷ್ಟು ದೊಡ್ಡ ಸಮುದ್ರದಲ್ಲಿ ಸ್ಮರಣೀಯವಾದ 100 ಸಿನಿಮಾಗಳನ್ನು ಪಟ್ಟಿ ಮಾಡುವುದು ಎಂದರೆ ನಿಜಕ್ಕೂ ಸವಾಲಿನ ಕೆಲಸ. ಆ ಕೆಲಸವನ್ನು ಮಾಡಿದ್ದಾರೆ ಪತ್ರಕರ್ತ ಶರಣು ಹುಲ್ಲೂರು (Sharanu Hullur). ಹಲವು ವರ್ಷಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಅವರು ‘ಕನ್ನಡದ 100 ಸ್ಮರಣೀಯ ಸಿನಿಮಾಗಳು: ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಕೃತಿಯನ್ನು ಬರೆದಿದ್ದಾರೆ. ಭಾನುವಾರ (ಅಕ್ಟೋಬರ್​ 8) ಬೆಂಗಳೂರಿನಲ್ಲಿ ಈ ಪುಸ್ತಕ ಬಿಡುಗಡೆ ಆಯಿತು. ಸ್ಯಾಂಡಲ್​ವುಡ್​ನ ಖ್ಯಾತ ನಟ, ನಿರ್ದೇಶಕ, ನಿರೂಪಕ ರಮೇಶ್​ ಅರವಿಂದ್​ (Ramesh Aravind) ಹಾಗೂ ಹಿರಿಯ ಪತ್ರಕರ್ತ, ಲೇಖಕ ಜೋಗಿ ಅವರು ಈ ಕೃತಿಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.

ಪುಸ್ತಕದ ಶೀರ್ಷಿಕೆಯೇ ಹೇಳುವಂತೆ ‘ಕನ್ನಡದ 100 ಸ್ಮರಣೀಯ ಸಿನಿಮಾಗಳು: ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಪುಸ್ತಕದಲ್ಲಿ ಒಟ್ಟು 100 ಸಿನಿಮಾಗಳ ಬಗ್ಗೆ ಮಾಹಿತಿ ಇದೆ. ಅವುಗಳ ಕುರಿತ ವಿಶ್ಲೇಷಣೆ ಇದೆ. ಈ ಚಿತ್ರಗಳನ್ನು ಯಾಕೆ ನೋಡಬೇಕು ಎಂಬ ಪ್ರಶ್ನೆಗೆ ಉತ್ತರ ಇದೆ. ಆ ಸಿನಿಮಾಗಳಲ್ಲಿ ಕೆಲಸ ಮಾಡಿದ ಕಲಾವಿದರು ಮತ್ತು ತಂತ್ರಜ್ಞರ ಬಗ್ಗೆ ಮಾಹಿತಿ ಇದೆ. ಅನೇಕ ಅಪರೂಪದ ಸಂಗತಿಗಳ ಬಗ್ಗೆ ಮಾಹಿತಿ ಈ ಪುಸ್ತಕದಲ್ಲಿ ಸಿಗುತ್ತದೆ.

ಇದನ್ನೂ ಓದಿ: ಪುನೀತ್​​ ಬಯೋಗ್ರಫಿ ‘ನೀನೆ ರಾಜಕುಮಾರ’ ರಿಲೀಸ್ ಮಾಡಿದ ಕಿಚ್ಚ ಸುದೀಪ್​ ಹೇಳಿದ್ದೇನು?

ಮೂಕಿ ಸಿನಿಮಾಗಳ ಯುಗದಿಂದ 2022ರ ತನಕ ರಿಲೀಸ್​ ಆದ ಸಿನಿಮಾಗಳಲ್ಲಿ ನೂರು ಸಿನಿಮಾಗಳನ್ನು ಆಯ್ಕೆ ಮಾಡುವ ಮೂಲಕ ಸಿನಿಮಾಸಕ್ತರಿಗಾಗಿ ಶರಣು ಹುಲ್ಲೂರು ಅವರು ಈ ಪುಸ್ತಕ ರಚಿಸಿದ್ದಾರೆ. ಅತಿ ಅಪರೂಪದ ಫೋಟೋಗಳು ಕೂಡ ಈ ಪುಸ್ತಕದಲ್ಲಿವೆ. ಇದರ ಬಗ್ಗೆ ರಮೇಶ್ ಅರವಿಂದ್ ಮಾತನಾಡಿದ್ದಾರೆ. ‘ಅನೇಕ ವರ್ಷಗಳಿಂದ ಶರಣು ಹುಲ್ಲೂರು ಅವರು ನನಗೆ ಗೊತ್ತು. ಸಿನಿಮಾಗಳನ್ನು ಅವರು ಗ್ರಹಿಸುವ ರೀತಿ ವಿಶೇಷವಾಗಿದೆ. ಸಿನಿಮಾಗಳ ವಿಶ್ಲೇಷಣೆ ಬಗ್ಗೆ ಅವರಿಗೆ ಇರುವ ಆಸಕ್ತಿಯಿಂದಲೇ ಈ ರೀತಿಯ ಪುಸ್ತಕ ಬರೆಯಲು ಸಾಧ್ಯವಾಗಿದೆ. ಈ ಪುಸ್ತಕವನ್ನು ಓದಲು ಮರೆಯದಿರಿ ಮರೆತು ನಿರಾಶಾರಾಗದಿರಿ’ ಎನ್ನುವ ಮೂಲಕ ರಮೇಶ್​ ಅವರು ಈ ಪುಸ್ತಕಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: Puneeth Rajkumar Biography: ‘ನೀನೇ ರಾಜಕುಮಾರ’; ಅಪ್ಪು ಬಯೋಗ್ರಫಿಯ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ಸಾವಣ್ಣ ಪ್ರಕಾಶನದ ಮೂಲಕ ಈ ಪುಸ್ತಕ ಹೊರಬಂದಿದೆ. ಈ ಮೊದಲು ಶರಣು ಹುಲ್ಲೂರ ಬರೆದ ‘ಅಂಬರೀಶ್’, ‘ನೀನೇ ರಾಜಕುಮಾರ’ ಪುಸ್ತಕಗಳನ್ನು ಕೂಡ ಇದೇ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ‘ಕನ್ನಡದ 100 ಸ್ಮರಣೀಯ ಸಿನಿಮಾಗಳು: ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ’ ಪುಸ್ತಕಕ್ಕೆ ಜೋಗಿ ಅವರು ಹಿನ್ನುಡಿ ಬರೆದಿದ್ದಾರೆ. ‘ಶರಣು ಹುಲ್ಲೂರು ಅಸಾಧ್ಯ ಜೀವಂತಿಕೆಯ, ಹೊಸತನಗಳ ಹುಡುಕಾಟದ, ಬರೆಯುವ ಹುರುಪು ಉಳಿಸಿಕೊಂಡ ಲವಲವಿಕೆಯ ಗೆಳೆಯ. ಸಿನಿಮಾ ಮೇಲೆ ಅವರಿಗೆ ಇರುವ ಪ್ರೀತಿಗೆ ಈ ಪುಸ್ತಕವೇ ಸಾಕ್ಷಿ. ಈ ಕೃತಿ ಚಿಗುರಿಸಿರುವ ನೆನಪುಗಳಲ್ಲಿ ನಾನು ನನ್ನ ತಾರುಣ್ಯಕ್ಕೆ ಮರಳಿದ್ದೇನೆ’ ಎಂದು ಅವರು ಹಿನ್ನುಡಿಯಲ್ಲಿ ಬರೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.