ಮತ್ತೆ ‘ನಾ ನಿನ್ನ ಬಿಡಲಾರೆ’: ‘ಮೇಘ’, ‘ಜಲಂಧರ’ ಚಿತ್ರಗಳ ಜತೆ ಪೈಪೋಟಿ

|

Updated on: Nov 28, 2024 | 9:53 PM

ಪ್ರತಿ ಶುಕ್ರವಾರ ಬಂದರೆ ಹೊಸ ಸಿನಿಮಾಗಳ ಎಂಟ್ರಿ ಆಗುತ್ತದೆ. ಮನರಂಜನೆ ಬಯಸುವ ಪ್ರೇಕ್ಷಕರಿಗೆ ಬೇರೆ ಬೇರೆ ಕಥಾಹಂದರದ ಸಿನಿಮಾಗಳು ಎದುರಾಗುತ್ತವೆ. ಈ ವಾರ (ನವೆಂಬರ್​ 29) ಕೂಡ ಹೊಸ ಚಿತ್ರಗಳು ತೆರೆಕಾಣುತ್ತಿವೆ. ಹಾರರ್, ಲವ್​ಸ್ಟೋರಿ, ಸಸ್ಪೆನ್ಸ್ ಹೀಗೆ ಹಲವು ಪ್ರಕಾರದ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಬಂದಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮತ್ತೆ ‘ನಾ ನಿನ್ನ ಬಿಡಲಾರೆ’: ‘ಮೇಘ’, ‘ಜಲಂಧರ’ ಚಿತ್ರಗಳ ಜತೆ ಪೈಪೋಟಿ
‘ನಾ ನಿನ್ನ ಬಿಡಲಾರೆ’, ‘ಮೇಘ’, ‘ಜಲಂಧರ’
Follow us on

ವರ್ಷಾಂತ್ಯ ಸಮೀಪಿಸುತ್ತಿದೆ. ಈ ವರ್ಷವೇ ತೆರೆಕಾಣಬೇಕು ಎಂಬ ಗುರಿ ಇಟ್ಟುಕೊಂಡಿರುವ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗುತ್ತಿವೆ. ಡಿಸೆಂಬರ್​ನಲ್ಲಿ ಬಿಗ್ ಬಜೆಟ್​ ಸಿನಿಮಾಗಳು ಸಾಲು ಸಾಲಾಗಿ ರಿಲೀಸ್ ಆಗಲಿವೆ. ಅದಕ್ಕೂ ಒಂದು ವಾರ ಮುನ್ನ, ಅಂದರೆ, ನ.29ರಂದು ಕೆಲವು ಮಧ್ಯಮ ಬಜೆಟ್​ನ ಸಿನಿಮಾಗಳ ಬಿಡುಗಡೆಗೆ ಅವಕಾಶ ಸಿಕ್ಕಿದೆ. ಆ ಸಮಯವನ್ನು ಉಪಯೋಗಿಸಿಕೊಂಡು ಕನ್ನಡದಲ್ಲೂ ಹೊಸ ಸಿನಿಮಾಗಳು ಬಂದಿವೆ. ‘ನಾ ನಿನ್ನ ಬಿಡಲಾರೆ’, ‘ಮೇಘ’, ‘ಜಲಂಧರ’ ಮುಂತಾದ ಸಿನಿಮಾಗಳು ಈ ವಾರ ಬಿಡುಗಡೆ ಆಗುತ್ತಿವೆ.

ಹಾರರ್​ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ನಾ ನಿನ್ನ ಬಿಡಲಾರೆ’ ಸಿನಿಮಾ ಬಗ್ಗೆ ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಆ ಟೈಟಲ್​ ಕೇಳಿದರೆ ಪ್ರೇಕ್ಷಕರಿಗೆ ಒಂದು ಬಗೆಯ ಥ್ರಿಲ್ ಆಗುತ್ತದೆ. ಹಾಗಾಗಿ ಅದೇ ಹೆಸರಿನಲ್ಲಿ ಹೊಸ ಸಿನಿಮಾ ಬಿಡುಗಡೆ ಆಗುತ್ತಿದೆ. ನ.29ಕ್ಕೆ ಹೊಸಬರ ‘ನಾ ನಿನ್ನ ಬಿಡಲಾರೆ’ ಸಿನಿಮಾ ರಿಲೀಸ್​ ಆಗುತ್ತಿದೆ. ಈ ಸಿನಿಮಾದಲ್ಲಿ ಅಂಬಾಲಿ ಭಾರತಿ, ಕೆ.ಎಸ್​. ಶ್ರೀಧರ್, ಶ್ರೀನಿವಾಸ್​ ಪ್ರಭು, ಹರಿಣಿ ಶ್ರೀಕಾಂತ್ ಮುಂತಾದವರು ನಟಿಸಿದ್ದಾರೆ.

ಕನ್ನಡದ ಕಿರುತೆರೆಯಿಂದ ಖ್ಯಾತಿ ಪಡೆದಿರುವ ನಟ ಕಿರಣ್ ರಾಜ್ ಅವರು ಹಿರಿತೆರೆಯಲ್ಲೀಗ ಬ್ಯುಸಿಯಾಗಿದ್ದಾರೆ. ಅವರು ಬ್ಯಾಕ್​ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹಿರಿತೆರೆಯಲ್ಲಿ ಹಲವು ಬಗೆಯ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಕಿರಣ್ ರಾಜ್ ನಟಿಸಿರುವ ರೊಮ್ಯಾಂಟಿಕ್​ ಕಾಮಿಡಿ ಪ್ರಕಾರದ ‘ಮೇಘಾ’ ಸಿನಿಮಾ ಕೂಡ ಈ ವಾರ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಅವರಿಗೆ ಜೋಡಿಯಾಗಿ ಕಾಜಲ್ ಕುಂದರ್​ ಅಭಿನಯಿಸಿದ್ದಾರೆ. ಚರಣ್​ ಹೆಚ್​.ಆರ್​. ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಎಸ್​ಪಿಬಿ ಸ್ಮಾರಕ ನಿರ್ಮಾಣಕ್ಕೆ ತಯಾರಿ; ಬೆಂಗಳೂರಲ್ಲಿ ಡಿ.8ಕ್ಕೆ ಸಂಗೀತ ಕಾರ್ಯಕ್ರಮ

ನಟ ಪ್ರಮೋದ್​ ಶೆಟ್ಟಿ ಅವರು ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಈಗ ಅವರು ‘ಜಲಂಧರ’ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಕ್ರೈಂ, ಸಸ್ಪೆನ್ಸ್ ಥ್ರಿಲ್ಲರ್​ ಪ್ರಕಾರದ ಈ ಸಿನಿಮಾಗೆ ವಿಷ್ಣು ಪ್ರಸನ್ನ ಅವರು ನಿರ್ದೇಶನ ಮಾಡಿದ್ದಾರೆ. ಋಷಿಕಾ ರಾಜ್, ಬಲರಾಜ್ ವಾಡಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ. ಇದರ ಜೊತೆಗೆ ‘ಲಕ್​’, ‘ಇದು ನಮ್ ಶಾಲೆ’, ‘ಅನಾಥ’ ಸೇರಿದಂತೆ ಪರಭಾಷೆಯ ಕೆಲವು ಸಿನಿಮಾಗಳು ಕೂಡ ಬಿಡುಗಡೆ ಆಗುತ್ತಿವೆ. ಪ್ರೇಕ್ಷಕರು ಯಾವ ಸಿನಿಮಾಗೆ ಹೆಚ್ಚು ಮೆಚ್ಚುಗೆ ನೀಡುತ್ತಾರೆ ಎಂಬ ಕೌತುಕ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.