ಕನ್ನಡದ ಸಿನಿಮಾಗಳು (Kannada Movies) ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ನೆರೆಯ ಶ್ರೀಲಂಕಾದಲ್ಲೂ ಸ್ಯಾಂಡಲ್ವುಡ್ ಚಿತ್ರಗಳ ಬಗ್ಗೆ ಚರ್ಚೆ ಆಗುತ್ತಿದೆ. ಅಲ್ಲಿನ ಪ್ರೇಕ್ಷಕರು ಮತ್ತು ಸಿನಿಮಾ ವಿದ್ಯಾರ್ಥಿಗಳು ಕನ್ನಡದ ಸಿನಿಮಾಗಳ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ಕನ್ನಡದ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಅವರ ಸಿನಿಮಾಗಳ ವಿಶೇಷ ಪ್ರದರ್ಶನ ಮತ್ತು ಸಂವಾದಕ್ಕೆ ಶ್ರೀಲಂಕಾದಲ್ಲಿ ವೇದಿಕೆ ಸಜ್ಜಾಗುತ್ತಿದೆ. ಶ್ರೀಲಂಕಾದ (Sri Lanka) ಫಿಲ್ಮ್ ಕಾರ್ಪೋರೇಶನ್, ಅಲ್ಲಿನ ಪ್ರವಾಸೋದ್ಯಮ ಇಲಾಖೆ, ಏಷ್ಯನ್ ಮೀಡಿಯಂ ಕಲ್ಚರಲ್ ಅಸೋಸಿಯೇಶನ್ ಮತ್ತು ಶ್ರೀಲಂಕಾದ ಭಾರತೀಯ ರಾಯಭಾರಿ ಕಚೇರಿ ಸಹಯೋಗದಲ್ಲಿ ಏಪ್ರಿಲ್ 27ರಿಂದ ಮೇ 3ರವರೆಗೆ ಅದ್ದೂರಿಯಾಗಿ ನಾಗತಿಹಳ್ಳಿ ಚಲನಚಿತ್ರೋತ್ಸವ, ಚಲನಚಿತ್ರ ಕಾರ್ಯಾಗಾರ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿವೆ.
ಕನ್ನಡ ಚಿತ್ರರಂಗಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರ ಪ್ರಶಸ್ತಿ ಪುರಸ್ಕೃತ ಹಾಗೂ ಮಹತ್ವದ ಚಿತ್ರಗಳಾದ ‘ಅಮೆರಿಕಾ ಅಮೆರಿಕಾ’, ‘ಮಾತಾಡ್ ಮಾತಾಡ್ ಮಲ್ಲಿಗೆ’, ‘ಕೋಟ್ರೇಶಿ ಕನಸು’, ‘ಇಷ್ಟಕಾಮ್ಯ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಕಥಾ ನಿರೂಪಣೆ, ಚಿತ್ರಕಥೆ ರಚನೆ, ಛಾಯಾಗ್ರಹಣ, ಸಂಕಲನ ಮುಂತಾದ ವಿಷಯಗಳ ಬಗ್ಗೆ ಶ್ರೀಲಂಕಾದ ಸಿನಿಮಾಸಕ್ತ ವಿದ್ಯಾರ್ಥಿಗಳ ಜೊತೆ ಕಾರ್ಯಾಗಾರವನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ನಡೆಸಿಕೊಡಲಿದ್ದಾರೆ.
ಇದನ್ನೂ ಓದಿ: ಒಂದು ಪಕ್ಷ ಚುನಾವಣೆ ಟಿಕೆಟ್ ಆಫರ್ ಮಾಡಿತ್ತು, ಆದರೆ ಪ್ರಸ್ತುತ ರಾಜಕೀಯ ಭೀಕರ: ನಾಗತಿಹಳ್ಳಿ ಚಂದ್ರಶೇಖರ್
ಇಂಥ ಒಂದಷ್ಟು ಕಾರಣಗಳಿಂದಾಗಿ ಈ ಚಿತ್ರೋತ್ಸವ ವಿಶೇಷ ಎನಿಸಿಕೊಳ್ಳುತ್ತಿದೆ. ಈ ಸಿನಿಮೋತ್ಸವದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಜೊತೆ ನಟ ನಿರೂಪ್ ಭಂಡಾರಿ, ನಟಿ ಕಾವ್ಯಾ ಶೆಟ್ಟಿ, ಛಾಯಗ್ರಾಹಕ ಎಸ್.ಕೆ. ರಾವ್, ನಿರ್ಮಾಪಕ ವೈ.ಎನ್. ಶಂಕರೇಗೌಡ ಮತ್ತು ಮಾಧ್ಯಮ ಕ್ಷೇತ್ರದ ಮದನ್ ಗೌಡ, ಜಿ.ಎನ್. ಮೋಹನ್ ಕೂಡ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: KSDL: ‘ಮೈಸೂರು ಸ್ಯಾಂಡಲ್ ಸೋಪ್ ಬಳಸಲೂ ಹಿಂಜರಿಯುವಂತಾಗಿದೆ’: ನಾಗತಿಹಳ್ಳಿ ಚಂದ್ರಶೇಖರ್
1988ರಿಂದಲೂ ನಾಗತಿಹಳ್ಳಿ ಚಂದ್ರಶೇಖರ್ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಉಂಡು ಹೋದ ಕೊಂಡು ಹೋದ’, ‘ಹೂಮಳೆ’, ‘ನನ್ನ ಪ್ರೀತಿಯ ಹುಡುಗಿ’, ‘ಪ್ಯಾರಿಸ್ ಪ್ರಣಯ’, ‘ಸೂಪರ್ ಸ್ಟಾರ್’, ‘ಅಮೃತಧಾರೆ’, ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.
ಇದನ್ನೂ ಓದಿ: ‘ರಾಜ್ಕುಮಾರ್ಗೆ ಆ ಸಿನಿಮಾ ಕಥೆ ಹೇಳಿದಾಗ ಅತ್ತಿದ್ರು’; ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್ ಅವರು ಪ್ರತಿ ಸಿನಿಮಾದಲ್ಲೂ ಒಂದು ಗಟ್ಟಿ ವಸ್ತುವಿಷಯವನ್ನು ಆಯ್ದುಕೊಳ್ಳುತ್ತಾರೆ. ಆ ಕಾರಣಕ್ಕಾಗಿ ಅವರ ಸಿನಿಮಾಗಳು ವಿಶೇಷ ಎನಿಸಿಕೊಂಡಿವೆ. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ಸೇರಿದಂತೆ ಅನೇಕ ಪ್ರಶಸ್ತಿಗಳು ಅವರಿಗೆ ಸಂದಿವೆ. ‘ಅಮೆರಿಕಾ ಅಮೆರಿಕಾ’ ಸಿನಿಮಾ ತೆರೆಕಂಡು 26 ವರ್ಷಗಳು ಕಳೆದಿವೆ. ಹಾಗಿದ್ದರೂ ಕೂಡ ಸಿನಿಪ್ರಿಯರ ಫೇವರಿಟ್ ಲಿಸ್ಟ್ನಲ್ಲಿ ಈ ಚಿತ್ರಕ್ಕೆ ಇಂದಿಗೂ ಕೂಡ ಸ್ಥಾನವಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.