ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಲಿಲ್ಲ, ರಾಜಕೀಯಕ್ಕೂ ಬರಲಿಲ್ಲ; ರಾಜ್​ಕುಮಾರ್ ಅವರನ್ನು ತಡೆದಿತ್ತು ಈ ವಿಚಾರ

Dr. Rajkumar Birth Anniversary: 1978ರಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಸ್ಪರ್ಧೆ ಮಾಡಿದ್ದರು. ಇಂದಿರಾ ವಿರುದ್ಧ ರಾಜ್​ಕುಮಾರ್ ಅವರನ್ನು ಕಣಕ್ಕೆ ಇಳಿಸಬೇಕು ಎಂಬುದು ಕೆಲವರ ಆಲೋಚನೆ ಆಗಿತ್ತು.

ಇಂದಿರಾ ಗಾಂಧಿ ವಿರುದ್ಧ ಸ್ಪರ್ಧಿಸಲಿಲ್ಲ, ರಾಜಕೀಯಕ್ಕೂ ಬರಲಿಲ್ಲ; ರಾಜ್​ಕುಮಾರ್ ಅವರನ್ನು ತಡೆದಿತ್ತು ಈ ವಿಚಾರ
ರಾಜ್​ಕುಮಾರ್-ಇಂದಿರಾ ಗಾಂಧಿ
Follow us
ರಾಜೇಶ್ ದುಗ್ಗುಮನೆ
|

Updated on: Apr 24, 2023 | 8:33 AM

ಚಿತ್ರರಂಗದಲ್ಲಿ ಅಪಾರ ಸಾಧನೆ ಮಾಡಿದ ರಾಜ್​ಕುಮಾರ್ (Dr. Rajkumar) ಅವರಿಗೆ ಇಂದು (ಏಪ್ರಿಲ್ 24) ಜನ್ಮದಿನ. ಅವರ ನಟನೆಯ ಸಿನಿಮಾಗಳನ್ನು ಜನರು ಈಗಲೂ ಕಣ್ತುಂಬಿಕೊಳ್ಳುತ್ತಾರೆ. ರಾಜ್​ಕುಮಾರ್ ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಪೌರಾಣಿಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಚಿತ್ರರಂಗದಲ್ಲಿ ಯಶಸ್ಸು ಕಂಡ ಅನೇಕರು ರಾಜಕೀಯಕ್ಕೆ ಧುಮುಕಿದ್ದಾರೆ. ಆದರೆ, ರಾಜ್​ಕುಮಾರ್ ಎಂದಿಗೂ ರಾಜಕೀಯಕ್ಕೆ ಬರಲೇ ಇಲ್ಲ. ರಾಜಕೀಯಕ್ಕೆ ಸೇರುವ ವಿಚಾರದಲ್ಲಿ ರಾಜ್​ಕುಮಾರ್ ಆಲೋಚಿಸಿ ಒಂದು ನಿರ್ಧಾರ ತೆಗೆದುಕೊಂಡಿದ್ದರು ಮತ್ತು ಆ ನಿರ್ಧಾರಕ್ಕೆ ಅವರು ಸದಾ ಬದ್ಧರಾಗಿದ್ದರು.

1978ರಲ್ಲಿ ನಡೆದ ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯು ಇಂದಿರಾ ಗಾಂಧಿ ಅವರಿಗೆ ರಾಜಕೀಯದಲ್ಲಿ ಮರುಹುಟ್ಟು ನೀಡಿತು. ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಸ್ಪರ್ಧೆ ಮಾಡಿದ್ದರು. ಇಂದಿರಾ ವಿರುದ್ಧ ಖ್ಯಾತ ನಾಮರನ್ನು ಕಣಕ್ಕೆ ಇಳಿಸಬೇಕು ಎಂಬುದು ಇತರ ಪಕ್ಷಗಳ ಆಲೋಚನೆ ಆಗಿತ್ತು.

ಆ ಸಂದರ್ಭದಲ್ಲಿ ರಾಜ್​ಕುಮಾರ್ ಅವರು ಚಿತ್ರರಂಗದಲ್ಲಿ ಉತ್ತುಂಗದಲ್ಲಿದ್ದರು. ಅವರನ್ನು ಇಂದಿರಾ ಗಾಂಧಿ ವಿರುದ್ಧ ಕಣಕ್ಕೆ ಇಳಿಸಬೇಕು ಎಂಬುದು ಕೆಲವರ ಆಲೋಚನೆ ಆಗಿತ್ತು. ಆದರೆ, ರಾಜ್​ಕುಮಾರ್ ಇದಕ್ಕೆ ಒಪ್ಪಲೇ ಇಲ್ಲ. ಆಗ ರಾಜ್​ಕುಮಾರ್ ಹಾಗೂ ಅವರ ಪತ್ನಿ ಪಾರ್ವತಮ್ಮ ಅಜ್ಞಾತವಾಸಕ್ಕೆ ಹೋದರು. ರಾಜ್​ಕುಮಾರ್ ಅವರನ್ನು ಮನ ಒಲಿಸಲು ರಾಜಕೀಯ ನಾಯಕರು ಎಲ್ಲಿಲ್ಲದ ಕಸರತ್ತು ನಡೆಸಿದರು. ಆದರೆ, ರಾಜ್​ಕುಮಾರ್ ಎಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲೇ ಇಲ್ಲ.

ರಾಜಕೀಯಕ್ಕೆ ಬರದೇ ಇರಲು ಏಕೆ ಅಷ್ಟು ಕಠಿಣ ನಿರ್ಧಾರ ತೆಗೆದುಕೊಂಡೆ ಎಂಬುದನ್ನು ರಾಜ್​ಕುಮಾರ್ ಎಲ್ಲಿಯೂ ಹೇಳಿಲ್ಲ. ಈ ಬಗ್ಗೆ ಹಲವು ಸುದ್ದಿಗಳು ಬಿತ್ತರಗೊಂಡವು. ಆದರೆ, ಅಸಲಿಗೆ ನಡೆದಿದ್ದು ಏನು ಎಂಬುದನ್ನು ಅವರ ಮಗ ರಾಘವೇಂದ್ರ ರಾಜ್​ಕುಮಾರ್ ಅವರು ಕೆಲ ವರ್ಷಗಳ ಹಿಂದೆ ರಿವೀಲ್ ಮಾಡಿದ್ದರು. ಸಾಯುವುದಕ್ಕೂ ಮೊದಲು ರಾಜ್​ಕುಮಾರ್ ಈ ವಿಚಾರದ ಬಗ್ಗೆ ರಾಘವೇಂದ್ರ ರಾಜ್​ಕುಮಾರ್ ಬಳಿ ಮಾತನಾಡಿದ್ದರು.

2005ರ ಸಮಯ. ರಾಜ್​ಕುಮಾರ್ ಅವರು ಚೆನ್ನೈನಲ್ಲಿ ಮೊಣಕಾಲು ಚಿಕಿತ್ಸೆಗೆ ಒಳಗಾಗಿದ್ದರು. ರಾಘವೇಂದ್ರ ರಾಜ್​ಕುಮಾರ್ ಅವರನ್ನು ಕರೆದರು ಮತ್ತು ತಾವು ರಾಜಕೀಯಕ್ಕೆ ಏಕೆ ಸೇರಿಲ್ಲ ಎಂಬುದನ್ನು ಹೇಳಿದರು. ‘ಒಳ್ಳೆಯ ಉದ್ದೇಶದಿಂದ ನನ್ನನ್ನು ಸ್ಪರ್ಧಿಸುವಂತೆ ಕೇಳಿದ್ದರೆ ನಾನು ಆ ಬಗ್ಗೆ ಯೋಚಿಸಬಹುದಿತ್ತು. ಆದರೆ ಅವರು ನನ್ನನ್ನು ಅಸ್ತ್ರವಾಗಿ ಬಳಸುವ ಆಲೋಚನೆಯಲ್ಲಿದ್ದರು. 1978ರ ಚುನಾವಣೆ ನಡೆದು ಐದು ವರ್ಷಗಳ ಬಳಿಕ ಅವರು ಗೋಕಾಕ್ ಚಳವಳಿಗೆ ಸೇರಲು ನನ್ನನ್ನು ಕೇಳಿದರು. ನಾನು ಖುಷಿಯಿಂದ ಪಾಲ್ಗೊಂಡೆ. ಅಲ್ಲಿ ನನ್ನ ಭಾಗವಹಿಸುವಿಕೆ ಅಗತ್ಯವಾಗಿತ್ತು. ಆದರೆ ಆ ಚುನಾವಣೆಗೆ ನನ್ನ ಅವಶ್ಯಕತೆ ಇರಲಿಲ್ಲ. ಅಲ್ಲಿ ನಾನು ಯಾರನ್ನೋ ಸೋಲಿಸಬೇಕಾಗಿತ್ತು. ಹೀಗಾಗಿ, ನನಗೆ ಆಹ್ವಾನ ಬಂತು. ಇಲ್ಲಿ ನಾನು ಯಾರನ್ನೋ ಬೀಳಿಸೋಕೆ ಬಂದಿಲ್ಲ. ನಾನು ಸ್ಪರ್ಧಿಸದೇ ಇದ್ದಿದ್ದು ಸರಿಯೇ? ಎಂದು ಅಪ್ಪಾಜಿ ನನ್ನ ಕೇಳಿದ್ದರು’ ಎಂದು ರಾಜ್​ಕುಮಾರ್ ಹೇಳಿದ್ದನ್ನು ರಾಘವೇಂದ್ರ ರಾಜ್​ಕುಮಾರ್ ವಿವರಿಸಿದ್ದರು. ‘ನೀವು ಯಾವಾಗ ತಪ್ಪು ಮಾಡಲು ಸಾಧ್ಯ ಎಂದು ನಾನು ಅಪ್ಪಾಜಿ ಅವರ ಪ್ರಶ್ನೆಗೆ ಉತ್ತರಿಸಿದ್ದೆ’ ಎಂಬುದು ರಾಘವೇಂದ್ರ ರಾಜ್​ಕುಮಾರ್ ಅವರ ಉತ್ತರ ಆಗಿತ್ತು.

80ರ ದಶಕದಲ್ಲಿ ರಾಜ್​ಕುಮಾರ್ ಅವರಿಗೆ ರಾಜಕೀಯ ಪಕ್ಷ ಪ್ರಾರಂಭಿಸುವಂತೆ ಒತ್ತಡ ಇತ್ತು. ಆ ಸಂದರ್ಭದಲ್ಲಿ ಆಂಧ್ರ ಹಾಗೂ ತಮಿಳುನಾಡಿನಲ್ಲಿ ಸಿನಿಮಾ ರಂಗದ ಖ್ಯಾತ ನಾಮರು ರಾಜಕೀಯ ಸೇರಿದ್ದರು. ಆದಾಗ್ಯೂ ಅವರು ಚುನಾವಣೆಗೆ ಎಂಟ್ರಿ ಕೊಡಲೇ ಇಲ್ಲ.

ಇದನ್ನೂ ಓದಿ: ‘8 ದಿನದಲ್ಲಿ ಹೇಳ್ತೀನಿ ಎಂದವರ ಸುದ್ದಿಯೇ ಇರಲಿಲ್ಲ’; ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಆಯ್ಕೆ ಆದ ಬಗ್ಗೆ ಮಾತನಾಡಿದ್ದ ರಾಜ್​ಕುಮಾರ್  

‘ರಾಜ್​ಕುಮಾರ್ ಅವರು ಪಕ್ಷ ಸ್ಥಾಪಿಸದಿರಲು ಹಲವು ಕಾರಣಗಳಿದ್ದವು. ಶಿಕ್ಷಣವಿಲ್ಲ ಎಂದು ಅಪ್ಪಾಜಿ ಹೇಳುತ್ತಿದ್ದರು. ನಟನಾಗಿ ಅವರು ತಮಗೆ ವಿಶೇಷ ಜವಾಬ್ದಾರಿ ಇತ್ತು ಎನ್ನುತ್ತಿದ್ದರು. ರಾಜಕೀಯ ಲಾಭಕ್ಕಾಗಿ ಅಭಿಮಾನಿಗಳನ್ನು ದೂರ ಮಾಡಿಕೊಳ್ಳಲು ಅವರು ಸಿದ್ಧರಿರಲಿಲ್ಲ. ದೇವರು ನನ್ನನ್ನು ಸಿನಿಮಾಗಾಗಿ ಕೊಟ್ಟಿದ್ದಾನೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ಸಿನಿಮಾ ಒಂದೇ ಅವರ ಗುರಿ ಆಗಿತ್ತು. ಅವರು ಎಂದಿಗೂ ತಮ್ಮ ಗುರಿ ಬದಲಾಯಿಸಲು ಸಿದ್ಧರಿರಲಿಲ್ಲ’ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ