ಕೆ ಶಿವರಾಮ್ (K Shivaram) ಅಗಲಿದ್ದಾರೆ. ಐಎಎಸ್ ಅಧಿಕಾರಿಯಾಗಿ ಹಲವು ವರ್ಷ ಸೇವೆ ಸಲ್ಲಿಸಿರುವ ಶಿವರಾಮ್ ಅವರು ಸಿನಿಮಾ ನಟರಾಗಿಯೂ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದಾದ ‘ಬಾ ನಲ್ಲೆ ಮಧುಚಂದ್ರಕೆ’ ಶಿವರಾಮ್ ನಟಿಸಿದ್ದ ಮೊದಲ ಸಿನಿಮಾ. ಮೊದಲ ಸಿನಿಮಾದಲ್ಲಿಯೇ ನಾಯಕ ಹಾಗೂ ವಿಲನ್ ಎರಡೂ ಆಗಿದ್ದರು ಶಿವರಾಮ್. ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ‘ಬಾ ನಲ್ಲೆ ಮಧುಚಂದ್ರಕೆ’ ಎರಡನೇ ಸಿನಿಮಾ ಆಗಿತ್ತು. ಆ ಸಿನಿಮಾ ಹಾಗೂ ಆ ಸಿನಿಮಾಕ್ಕೆ ಶಿವರಾಮ್ ಅವರು ಆಯ್ಕೆ ಆಗಿದ್ದು, ಅಂದಿನ ಅವರ ವ್ಯಕ್ತಿತ್ವ ಇನ್ನಿತರೆ ವಿಷಯಗಳ ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಟಿವಿ9 ಜೊತೆಗೆ ಮಾತನಾಡಿದ್ದಾರೆ.
‘ಬಹಳ ಕಷ್ಟದ ಬಾಲ್ಯ, ಯೌವ್ವನ ಕಳೆದು ಕನ್ನಡದಲ್ಲಿಯೇ ಐಎಎಸ್ ಬರೆದು ಅಧಿಕಾರಿಯಾಗಿದ್ದ ಶಿವರಾಮ್ ಅವರ ಬಗ್ಗೆ ನಾನು ಕೇಳಿದ್ದೆ, ನಾನೂ ಸಹ ಅದೇ ರೀತಿಯ ಹಿನ್ನೆಲೆಯನಾಗಿದ್ದ ಕಾರಣ ಅವರ ಬಗ್ಗೆ ಮೃದುಧೋರಣೆ ನನಗೆ ಇತ್ತು. 1992 ರ ಸಮಯದಲ್ಲಿ ಅವರು ಬೆಂಗಳೂರಿನ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಆಗ ಅವರೇ ನನ್ನನ್ನು ಸಂಪರ್ಕಿಸಿ, ಸಿನಿಮಾ ನಟರಾಗುವ ಆಸೆ ವ್ಯಕ್ತಪಡಿಸಿದರು. ನಾನು ಮೊದಲಿಗೆ ಅವರ ಬಳಿ ಕೆಲವು ಷರತ್ತುಗಳನ್ನು ಇರಿಸಿದ್ದೆ. ಸಿನಿಮಾ ನಟರಾಗಲು ನಟನಾ ಪ್ರತಿಭೆ ಅವಶ್ಯಕ ಎಂದಿದ್ದೆ. ಅದಕ್ಕೆ ಅವರು ‘ನಾನು ಮಣ್ಣಿನಂತೆ ನೀವು ಯಾವ ರೂಪ ಕೊಟ್ಟರೂ ಅದರಂತೆ ಆಗುತ್ತೇನೆ’ ಎಂದಿದ್ದರು, ಎಂದು ನೆನಪು ಮಾಡಿಕೊಂಡಿದ್ದಾರೆ ನಾಗತಿಹಳ್ಳಿ.
ಇದನ್ನೂ ಓದಿ:ಕೆ ಶಿವರಾಮ್ ಕುರಿತ ಕೆಲವು ಅಪರೂಪದ ಸಂಗತಿಗಳು ಇಲ್ಲಿವೆ
‘ಅದಾಗಲೇ ನಾನು ಬಾ ನಲ್ಲೆ ಮಧುಚಂದ್ರಕೆ ಕಾದಂಬರಿ ಬರೆದಿದ್ದೆ. ಆ ಕಾದಂಬರಿ ಹಲವು ಮರುಮುದ್ರಣಗಳನ್ನು ಕಂಡಿತ್ತು. ಆ ಕತೆಯ ನಾಯಕನೇ ವಿಲನ್ ಸಹ ಆಗಿದ್ದರಿಂದ ಯಾವುದೇ ದೊಡ್ಡ ನಟರು ಅದರಲ್ಲಿ ನಟಿಸಲು ಸಾಧ್ಯವಿರಲಿಲ್ಲ. ಹೊಸ ನಟರ ಮೇಲೆ ಬಂಡವಾಳ ಹಾಕಲು ನಿರ್ಮಾಪಕರಿಗೆ ಧೈರ್ಯವಿರಲಿಲ್ಲ. ಅದೇ ಸಮಯದಲ್ಲಿ ಶಿವರಾಮ್ ಅವರಿಗೆ ಒಬ್ಬರು ನಿರ್ಮಾಪಕರು ಸಿಕ್ಕಿದ್ದರು. ಸಿನಿಮಾ ಚಿತ್ರೀಕರಣ ಪ್ರಾರಂಭಿಸಿದೆವು. ಚಿತ್ರೀಕರಣದ ಸಮಯದಲ್ಲಿ ನನಗೆ ಶಿವರಾಮ್ ಅವರಿಗೆ ನಟನೆಯ ವಿಚಾರದಲ್ಲಿ ಆಗಾಗ್ಗೆ ಭಿನ್ನಾಭಿಪ್ರಾಯಗಳು ಬರುತ್ತಿದ್ದವು. ಆದರೂ ಸಹ ಅವರು ನಾಯಕ-ಖಳನಾಯಕ ಇಬ್ಬರೂ ಒಬ್ಬರೇ ಆಗಿರುವ ಇಬ್ಭಗೆ ವ್ಯಕ್ತಿತ್ವದ ಪಾತ್ರವನ್ನು ಚೆನ್ನಾಗಿಯೇ ನಿರ್ವಹಿಸಿದರು’ ಎಂದಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.
‘ಆ ಸಿನಿಮಾ ಹೆಚ್ಚು ಜನರನ್ನು ತಲುಪಲು ನಮಗೆ ಸಹಾಯ ಮಾಡಿದ್ದು ಹಂಸಲೇಖ. ‘ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾದ ಹಾಡುಗಳು ಬಹಳ ಜನಪ್ರಿಯವಾಗಿಬಿಟ್ಟವು. ಅಲ್ಲದೆ, ಶಿವರಾಮ್ ಅವರೂ ಸಹ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರಿಂದ ಅವರಿಗೆ ಹಲವು ಜಿಲ್ಲೆಗಳಲ್ಲಿ ಅಭಿಮಾನಿ ಬಳಗ ಆಗಲೇ ಇತ್ತು. ಹಾಗಾಗಿ ಆ ಸಿನಿಮಾ ಹಲವು ಕೇಂದ್ರಗಳಲ್ಲಿ ಶತದಿನೋತ್ಸವ ಆಚರಿಸಿತು’ ಎಂದು ನೆನಪು ಮಾಡಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ