AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕ ಫಿಲಂ ಚೇಂಬರ್ ನೂತನ ಕಚೇರಿ ಉದ್ಘಾಟನೆ

ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಕಚೇರಿ ಧಾರವಾಡದಲ್ಲಿ ಉದ್ಘಾಟನೆಗೊಂಡಿದೆ. ಉತ್ತರ ಕರ್ನಾಟಕದಲ್ಲಿ ಸಿನಿಮಾ ನಿರ್ಮಾಣಕ್ಕೆ ಪುಷ್ಠಿ ನೀಡುವ ಸಲುವಾಗಿ ಕೆಲ ವರ್ಷಗಳ ಹಿಂದೆ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪಿತವಾಗಿತ್ತು.

ಉತ್ತರ ಕರ್ನಾಟಕ ಫಿಲಂ ಚೇಂಬರ್ ನೂತನ ಕಚೇರಿ ಉದ್ಘಾಟನೆ
ಮಂಜುನಾಥ ಸಿ.
|

Updated on: Sep 17, 2024 | 6:04 PM

Share

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ಹಲವು ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿದೆ. ಟೈಟಲ್ ರಿಜಿಸ್ಟ್ರೇಷನ್ ಇಂದ ಹಿಡಿದು ಚಿತ್ರರಂಗದ ಸಮ್ಯಸ್ಯೆಗಳಿಗೆ ಸ್ಪಂದಿಸುವುದು ಇನ್ನಿತರೆ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಕೆಲವು ಸ್ವಜನ ಪಕ್ಷಪಾತದ ಆರೋಪಗಳು ಸಹ ಇದ್ದು, ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಬೇರೆ ಕೆಲವು ವಾಣಿಜ್ಯ ಮಂಡಳಿಗಳನ್ನು ಕಟ್ಟಲಾಗಿದೆ. ಉತ್ತರ ಕರ್ನಾಟಕದ ಕಲಾವಿದರಿಗೆ ಮಾನ್ಯತೆ ನೀಡುತ್ತಿಲ್ಲವೆಂದು ಆರೋಪಿಸಿ ಕೆಲ ವರ್ಷಗಳ ಹಿಂದೆ ಉತ್ತರ ಕರ್ನಾಟಕ ಫಿಲಂ ಚೇಂಬರ್ ಆಫ್ ಕಾಮರ್ಸ್ ಅನ್ನು ಸ್ಥಾಪಿಸಲಾಯಿತು. ಇದೀಗ ಉತ್ತರ ಕರ್ನಾಟಕ ಫಿಲಂ ಚೇಂಬರ್ ನೂತನ ಕಚೇರಿ ಉದ್ಘಾಟನೆ ಆಗಿದೆ.

ಉತ್ತರ ಕರ್ನಾಟಕದ ಕಲಾವಿದರಿಗೆ, ಸಿನಿಮಾ ನಿರ್ಮಾಪಕರಿಗೆ ಮಾನ್ಯತೆ ನೀಡುತ್ತಿಲ್ಲ ಎಂದು ಆರೋಪಿಸಿ, ಉತ್ತರ ಕರ್ನಾಟಕದಲ್ಲಿ ಸಿನಿಮಾ ನಿರ್ಮಾಣಕ್ಕೆ ಪುಷ್ಠಿ ನೀಡುವ ಗುರಿಯೊಂದಿಗೆ ಐದಾರು ವರ್ಷಗಳ ಹಿಂದೆ ಹುಬ್ಬಳ್ಳಿಯಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಥಾಪಿಸಲಾಗಿತ್ತು. ಈ ಸಂಘವನ್ನು ನೊಂದಣಿ ಸಹ ಮಾಡಲಾಗಿತ್ತು. ಇದೀಗ ಈ ಛೇಂಬರ್​ನ ಕಚೇರಿಯನ್ನು ಹುಬ್ಬಳ್ಳಿಯಿಂದ ಧಾರವಾಡಕ್ಕೆ ವರ್ಗಾವಣೆ ಮಾಡಲಾಗಿದೆ. ಧಾರವಾಡದ ಓಸ್ವಾಲ್ ಟಾವರ್ ನಲ್ಲಿ ಛೇಂಬರ್​ನ ನೂತನ ಕಚೇರಿಯನ್ನು ಉದ್ಘಾಟನೆ ಮಾಡಲಾಗಿದೆ.

ಜನಪ್ರಿಯ ಕಲಾವಿದ ರಾಜು ತಾಳಿಕೋಟಿ ಧಾರವಾಡದಲ್ಲಿ ಕಚೇರಿ ಉದ್ಘಾಟನೆ ಮಾಡಿದರು. ಉತ್ತರ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಶಂಕರ ಸುಗತೆ ಸೇರಿದಂತೆ ಉತ್ತರ ಕರ್ನಾಟಕದ ಕಲಾವಿದರು, ನಿರ್ದೇಶಕರುಗಳು ಕಚೇರಿ ಉದ್ಘಾಟನೆ ಸಮಯದಲ್ಲಿ ಹಾಜರಿದ್ದರು.

ಇದನ್ನೂ ಓದಿ:ಸ್ಯಾಂಡಲ್​ವುಡ್​ನಲ್ಲಿ ದೌರ್ಜನ್ಯ ತಡೆಗೆ ಸಮಿತಿ, ಫಿಲಂ ಚೇಂಬರ್​ನಲ್ಲಿ ಚರ್ಚಿಸಲು ನಿರ್ಧಾರ

ತಮ್ಮ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಸ್ಥಾಪನೆ ಆಗಿರುವ ಉತ್ತರ ಕರ್ನಾಟಕ ಫಿಲಂ ಛೇಂಬರ್​ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷ ಎನ್​ಎಂ ಸುರೇಶ್, ‘ನಮ್ಮದು ಮೂಲ ಸಂಸ್ಥೆ ದಶಕಗಳಿಂದಲೂ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದಿಂದ ಗುರುತಿಸಲ್ಪಟ್ಟಿದೆ. ಪರ್ಯಾಯವಾಗಿ ಕೆಲವು ಸಂಸ್ಥೆಗಳು ತಲೆ ಎತ್ತಿವೆ, ಹಿಂದೆಯೂ ಎತ್ತಿದ್ದವು, ಆದರೆ ಅದನ್ನೆಲ್ಲ ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಮ್ಮ ಹೆಸರಿನಲ್ಲಿ ಪ್ರಾರಂಭ ಮಾಡುವುದು ಅಪರಾಧ, ಒಂದೊಮ್ಮೆ ನಮ್ಮದೇ ಹೆಸರು ಬಳಸಿ ಮಾಡಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ. ಉತ್ತರ ಕರ್ನಾಟಕ ಫಿಲಂ ಚೇಂಬರ್​ ಬಗ್ಗೆ ಮಾಹಿತಿ ಇಲ್ಲ, ಅವರ ಖುಷಿಗೆ ಅವರು ಮಾಡಿಕೊಂಡಿದ್ದಾರೆ ಅದು ಅವರ ಇಷ್ಟ ಎಂದಿದ್ದಾರೆ.

ಉತ್ತರ ಕರ್ನಾಟಕ ಫಿಲಂ ಚೇಂಬರ್​ ನಿರ್ಮಾಣ ಆಗಿದೆಯಾದರೂ ಉತ್ತರ ಕರ್ನಾಟಕದಲ್ಲಿ ಸಿನಿಮಾ ಮಾಡುವವರು ಸಹ ಬೆಂಗಳೂರಿನ ಕರ್ನಾಟಕ ಫಿಲಂ ಚೇಂಬರ್ ಹಾಗೂ ಕನ್ನಡ ಫಿಲಂ ಚೇಂಬರ್​ನಲ್ಲಿ ಹೆಸರು ನೊಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಜೊತೆಗೆ ಉತ್ತರ ಕರ್ನಾಟಕ ಫಿಲಂ ಚೇಂಬರ್​ನಲ್ಲಿಯೂ ಮಾಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ