ಚಿತ್ರರಂಗಕ್ಕೆ ಹೊಸ ತಂಡಗಳು ಬರಬೇಕು, ಉತ್ತರ ಕರ್ನಾಟಕದ ಮಂದಿಗೆ ರಕ್ಷಿತ್ ಮನವಿ

|

Updated on: Aug 04, 2023 | 11:32 PM

Rakshit Shetty: ಚಿತ್ರರಂಗಕ್ಕೆ ಹೊಸ ಹೊಸ ತಂಡಗಳು ಬರಬೇಕು ಎಂದ ರಕ್ಷಿತ್ ಶೆಟ್ಟಿ, ಉತ್ತರ ಕರ್ನಾಟಕದ ಯುವಕರ ಬಳಿ ಮನವಿಯೊಂದನ್ನು ಮಾಡಿದ್ದಾರೆ.

ಚಿತ್ರರಂಗಕ್ಕೆ ಹೊಸ ತಂಡಗಳು ಬರಬೇಕು, ಉತ್ತರ ಕರ್ನಾಟಕದ ಮಂದಿಗೆ ರಕ್ಷಿತ್ ಮನವಿ
ರಕ್ಷಿತ್ ಶೆಟ್ಟಿ
Follow us on

ಕನ್ನಡ ಚಿತ್ರರಂಗ (Sandalwood) ಒಂದೇ ಆದರೂ ಚಿತ್ರರಂಗದಲ್ಲಿ ಪ್ರತ್ಯೇಕ ತಂಡಗಳು ಪ್ರತ್ಯೇಕವಾಗಿ ಕೆಲಸ ಮಾಡುತ್ತಿರುವುದು ಗಮನಿಸಬಹುದು. ಆದರೆ ಸಿನಿಮಾ ವಿಷಯಕ್ಕೆ ಬಂದಾಗ ಎಲ್ಲ ತಂಡಗಳು ಒಟ್ಟಾಗಿ ಒಂದನ್ನೊಂದು ಬೆಂಬಲಿಸುತ್ತಾ ಬಂದಿವೆ. ಈ ಪ್ರತ್ಯೇಕ ತಂಡಗಳು ಕರ್ನಾಟಕದ ಭಿನ್ನತೆಯನ್ನು ಪ್ರತಿನಿಧಿಸುತ್ತಿದ್ದು, ಒಂದೊಂದು ತಂಡಗಳು ಒಂದೊಂದು ಪ್ರದೇಶದ ಕತೆಗಳನ್ನು ತೆರೆಗೆ ತರುತ್ತಿವೆ. ರಕ್ಷಿತ್, ರಾಜ್, ರಿಷಬ್ ಅವರ ತಂಡಗಳು, ಡಾಲಿ ಧನಂಜಯ್ ಅವರ ತಂಡ, ಮಂಸೋರೆ ಹಾಗೂ ಅವರ ತಂಡ, ಪ್ರಶಾಂತ್ ನೀಲ್ ತಂಡ ಹೀಗೆ ಪ್ರತ್ಯೇಕ ತಂಡಗಳು ಬೇರೆ-ಬೇರೆ ರೀತಿಯ ಕತೆಗಳನ್ನು ವಿಶೇಷವಾಗಿ ತಾವು ಪ್ರತಿನಿಧಿಸುವ ಪ್ರದೇಶದ ಕತೆಗಳನ್ನು ಹೇಳುತ್ತಾ ಸಾಗುತ್ತಿವೆ.

ಇದೀಗ ರಾಜ್ ಬಿ ಶೆಟ್ಟಿ ತಮ್ಮ ‘ಟೋಬಿ‘ (Toby) ಸಿನಿಮಾದೊಂದಿಗೆ ರೆಡಿಯಾಗಿದ್ದಾರೆ. ‘ಟೋಬಿ’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 04) ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ಚಿತ್ರರಂಗಕ್ಕೆ ಹೊಸ ತಂಡಗಳು ಬರುವುದರ ಲಾಭಗಳ ಬಗ್ಗೆ, ಚಿತ್ರರಂಗದ ಬೆಳವಣಿಗೆಯಿಂದಾಗುವ ಲಾಭದ ಬಗ್ಗೆ ಮಾತನಾಡಿದರು.

”ಚಿತ್ರರಂಗಕ್ಕೆ ಹೊಸ ತಂಡಗಳು ಬರಬೇಕು, ತಾವೇ ತಂಡಗಳನ್ನು ಮಾಡಿಕೊಂಡು ಹೊಸ ಹೊಸ ಸಿನಿಮಾಗಳನ್ನು ಮಾಡಬೇಕು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾ ಆಗಿದ್ದು ಸಹ ಹೀಗೆಯೇ. ಅವರು ತಂಡ ಮಾಡಿಕೊಂಡು ಯಾರ ಬೆಂಬಲವೂ ಇಲ್ಲದೆ ಸಿನಿಮಾ ಮಾಡಿ ಇದೀಗ ಸೂಪರ್ ಹಿಟ್ ಮಾಡಿದ್ದಾರೆ. ರಾಜ್ ಬಿ ಶೆಟ್ಟಿ ಸಹ ತಮ್ಮದೇ ತಂಡವನ್ನು ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಸ್ವತಃ ನಾನೂ ರಿಷಬ್ ಶೆಟ್ಟಿ ಸಹ ಹಾಗೆಯೇ ತಂಡ ಮಾಡಿಕೊಂಡು ಸಿನಿಮಾ ಮಾಡಿದೆವು” ಎಂದು ನೆನಪು ಮಾಡಿಕೊಂಡರು.

ಇದನ್ನೂ ಓದಿ:Toby Trailer launch Live: ಟೋಬಿ ಸಿನಿಮಾದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದ ಲೈವ್ ಇಲ್ಲಿ ನೋಡಿ

ಹೊಸ ತಂಡಗಳು ಬಂದಾಗ ಹೊಸ ರೀತಿಯ ಕತೆಗಳು, ಸಿನಿಮಾಗಳು ಬರುತ್ತವೆ. ನಮ್ಮನ್ನು ಕೇಳುತ್ತಾರೆ ನೀವೇಕೆ ಉತ್ತರ ಕರ್ನಾಟಕದ ಭಾಗದ ಕತೆಗಳನ್ನು ಸಿನಿಮಾ ಮಾಡಬಾರದು ಎಂದು. ಹೌದು, ಉತ್ತರ ಕರ್ನಾಟಕದ್ದು ಬಹಳ ಶ್ರೀಮಂತ ಸಂಸ್ಕೃತಿ, ಅದ್ಭುತವಾದ ಕತೆಗಳು ಅದರಲ್ಲಿ ಇದೆ. ಅಲ್ಲಿನ ಕತೆಗಳನ್ನು ಅಲ್ಲಿನ ಜನರೇ ಹೇಳಬೇಕು. ಹಾಗಾಗಿ ಉತ್ತರ ಕರ್ನಾಟಕದ ಜನರು ಚಿತ್ರರಂಗಕ್ಕೆ ಬರಬೇಕು, ಅಲ್ಲಿನ ನಿರ್ದೇಶಕರು, ನಟರು ಚಿತ್ರರಂಗಕ್ಕೆ ಬರಬೇಕು, ಒಂದು ತಂಡವಾಗಿ ಅಲ್ಲಿನ ಕತೆಗಳನ್ನು ಕಟ್ಟಿಕೊಡಬೇಕು ಎಂದರು.

ಹೀಗೆ ಹೊಸ ಹೊಸ ತಂಡಗಳು ಬರಬೇಕು, ಒಬ್ಬರ ಸಿನಿಮಾಗಳನ್ನು ಇನ್ನೊಬ್ಬರು ಬೆಂಬಲಿಸಬೇಕು. ಹೀಗೆ ಹೊಸ ಹೊಸ ತಂಡಗಳು ಬಂದಾಗಲಷ್ಟೆ ಚಿತ್ರರಂಗ ಬೆಳೆಯಲು ಸಾಧ್ಯ. ಚಿತ್ರರಂಗ ಬೆಳೆದರಷ್ಟೆ ನಾವುಗಳು ಇಲ್ಲಿ ಉಳಿಯಲು ಸಾಧ್ಯ. ನನ್ನ ಪ್ರಕಾರ ಕನಿಷ್ಟ 15 ಹೀರೋಗಳು, 15 ಗಟ್ಟಿ ನಿರ್ದೇಶಕರು ಚಿತ್ರರಂಗಕ್ಕೆ ಬೇಕು, ಹಾಗಿದ್ದಾಗಲೇ ಚಿತ್ರರಂಗ ಹೆಚ್ಚು ಚಲನಶೀಲ, ಕ್ರಿಯಾಶೀಲವಾಗಿ ಇರಲು ಸಾಧ್ಯ ಎಂದಿದ್ದಾರೆ ನಟ ರಕ್ಷಿತ್ ಶೆಟ್ಟಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ