
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಸದ್ಯಕ್ಕೆ ಆಸ್ಪತ್ರೆಗೆ ಶಿಫ್ಟ್ ಮಾಡುತ್ತಿಲ್ಲ. ಬೆನ್ನು ನೋವಿನ ಸಮಸ್ಯೆ ಸೇರಿದಂತೆ ಸದ್ಯದ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ ಜೈಲಿನಲ್ಲೇ ಚಿಕಿತ್ಸೆ ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ. ಅಗತ್ಯವಿದ್ದರೆ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ 59ನೇ ಸಿಸಿಹೆಚ್ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ ಹಿರಿಯ ಜೈಲಾಧಿಕಾರಿಗಳು ಈ ನಿರ್ಧಾರವನ್ನು ಜೈಲಿನ ಮುಖ್ಯ ವೈದ್ಯರ ವಿವೇಚನೆಗೆ ಬಿಟ್ಟಿದ್ದಾರೆ.
ನಟ ದರ್ಶನ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸುವ ಬದಲು ಅಲ್ಲಿನ ಫಿಸಿಯೋಥೆರಪಿ ವೈದ್ಯರನ್ನೇ ಜೈಲಿಗೆ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಜೈಲಿನ ಮುಖ್ಯ ವೈದ್ಯರು ಫಿಸಿಯೋಥೆರಪಿ ವೈದ್ಯರನ್ನು ಕರೆಸಿಕೊಳ್ಳುತ್ತಿದ್ದು, ಅಧಿಕಾರಿಗಳು ಈಗಾಗಲೇ ಅವರನ್ನು ಸಂಪರ್ಕಿಸಿದ್ದಾರೆ. ಇಂದೇ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಜೈಲಿಗೆ ಭೇಟಿ ನೀಡಿ ತಪಾಸಣೆ ನಡೆಸುವ ಸಾಧ್ಯತೆ ಇದೆ.
ಅಗತ್ಯ ಯಂತ್ರೋಪಕರಣಗಳ ಸಹಾಯದಿಂದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಂದಲೇ ದರ್ಶನ್ ಅವರಿಗೆ ಜೈಲಿನಲ್ಲೇ ಚಿಕಿತ್ಸೆ ಕೊಡಿಸಲು ಸಿದ್ಧತೆ ನಡೆದಿದೆ. ದರ್ಶನ್ ಅವರ ಬೆನ್ನು ನೋವಿನ ಸಮಸ್ಯೆ ಹಾಗೂ ಪ್ರಸ್ತುತ ಆರೋಗ್ಯ ಸ್ಥಿತಿಯನ್ನು ವೈದ್ಯರು ಕೂಲಂಕಷವಾಗಿ ಪರಿಶೀಲಿಸಲಿದ್ದಾರೆ. ತಪಾಸಣೆಯ ಬಳಿಕ ಅವರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ವೈದ್ಯರು ನೀಡಲಿದ್ದಾರೆ.
ಇದನ್ನೂ ಓದಿ: ದರ್ಶನ್‌ಗೆ ಬೆನ್ನುನೋವು: ಜೈಲಿನ ಹೊರಗೆ ಚಿಕಿತ್ಸೆ ಬಗ್ಗೆ ಮಹತ್ವದ ಆದೇಶ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ವಿಶೇಷ ಸಾರ್ವಜನಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ ಬಳಿಕ ಮುಂದಿನ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಸದ್ಯದ ಮಟ್ಟಿಗೆ ದರ್ಶನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಯಾವುದೇ ಕ್ರಮಕ್ಕೆ ಜೈಲಾಧಿಕಾರಿಗಳು ಮುಂದಾಗಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲೇ ಎಲ್ಲಾ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಪ್ರಕ್ರಿಯೆಗಳು ನಡೆಯಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:58 am, Sat, 28 November 26