ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡ್ಗ ಪ್ರಥಮ್

|

Updated on: Jun 12, 2023 | 10:40 PM

Olle Hudga Pratham: ಒಳ್ಳೆ ಹುಡ್ಗ ಪ್ರಥಮ್ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾನು ಬದುಕುತ್ತಿರುವುದು ಸರಳವಾಗಿ ಹಾಗಾಗಿ ನಿಶ್ಚಿತಾರ್ಥವೂ ಸರಳ ಎಂದಿದ್ದಾರೆ.

ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡ್ಗ ಪ್ರಥಮ್
ಒಳ್ಳೆ ಹುಡ್ಗ ಪ್ರಥಮ್
Follow us on

ಮಾಜಿ ಬಿಗ್​ಬಾಸ್ (Bigg Boss) ವಿಜೇತ, ನಟ ಒಳ್ಳೆ ಹುಡ್ಗ ಪ್ರಥಮ್ (Olle Hudga Pratham) ಸದ್ದು-ಗದ್ದಲವಿಲ್ಲದೆ, ಆಡಂಭರಗಳಿಲ್ಲದೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ತಾವು ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ (Social Media) ಮೂಲಕ ಹಂಚಿಕೊಂಡಿದ್ದ್ದಾರೆ. ತಾವು ಮದುವೆ ಆಗಲಿರುವ ಯುವತಿ ಯಾರೆಂಬುದನ್ನು ಮಾತ್ರ ಬಹಿರಂಗಗೊಳಿಸಿಲ್ಲ.

ತಮ್ಮ ನಿಶ್ಚಿತಾರ್ಥದ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಒಳ್ಳೆ ಹುಡ್ಗ ಪ್ರಥಮ್, ”ಒಂದು ಸುಂದರ ಕ್ಷಣ. ಇವತ್ತು ನನ್ನ ಎಂಗೇಜ್​ಮೆಂಟ್ ಆಯ್ತು. ಯಾವ ಆಡಂಬರ, ಸಂಭ್ರಮ, ತೋರ್ಪಡಿಕೆ ಇಲ್ಲದೆ ಬಹಳ ಸರಳವಾಗಿ ಕುಟುಂಬದವರು ಮೆಚ್ಚಿದವರ ಜೊತೆಯಾದೆ. ನಾನು ತುಂಬಾ ಸರಳವಾಗಿಯೇ ಬದುಕಿದವನು. ಹಾಗೇ ಇರೋಕೆ ಇಷ್ಟ. ನಾನು ಎಂಗೇಜ್​ಮೆಂಟ್ ಆಗಿರೋದು ದೇಶದ ದೊಡ್ಡ ಸುದ್ಧಿಯಲ್ಲ. ಆದರೆ ನನ್ನ ಇಷ್ಟಪಡುವ ಸ್ಬೇಹಿತರು ಆತ್ಮೀಯರಿಗೆ ವಿಚಾರ ಹಂಚಿಕೊಳ್ಳೋಣ ಅನ್ನೋ ಕಾರಣಕ್ಕೆ ನಿಮ್ಗೆ ತಿಳಿಸಿದ್ದೇನೆ ಅಷ್ಟೇ. ಮದುವೆ ಎಷ್ಟು ಅದ್ಧೂರಿಯಾಗಿ ಆದೆ ಅನ್ನೋದಕ್ಕಿಂತ ಎಷ್ಟು ಚೆನ್ನಾಗಿ ಬದುಕು ಕಟ್ರಿಕಿಂಡ್ವಿ ಅನ್ನೋದೇ ನಿಜವಾದ ಸಾಧನೆ. ನನಗೆ ಹಾಗಿರೋಕೆ ಇಷ್ಟ;ಹೀಗೇ ಇದ್ದು ಬಿಡ್ತೀನಿ‌..ಹರಸುವವರು ಅಲ್ಲಿಂದಲೇ ಹರಸಿ. ಅದೇ ಆಶೀರ್ವಾದ‌” ಎಂದು ಬರೆದು ಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿರುವ ಒಳ್ಳೆ ಹುಡ್ಗ ಪ್ರಥಮ್ ತಮ್ಮ ಫೇಸ್​ಬುಕ್ ಪೋಸ್ಟ್​ಗಳಲ್ಲಿ ಆಗಾಗ್ಗೆ ತಮ್ಮ ಮದುವೆಯ ಬಗ್ಗೆ ಸುಳಿವುಗಳನ್ನು ನೀಡುತ್ತಿದ್ದರು. ಮದುವೆ ನಿಶ್ಚಯವಾಗಿರುವ ವಿಷಯವನ್ನೂ ಸಹ ಅವರು ಈ ಹಿಂದೆ ಹಂಚಿಕೊಂಡಿದ್ದರು. ಮನೆಯಲ್ಲಿ ನೋಡಿರುವ ಹುಡುಗಿಯನ್ನೇ ವಿವಾಹವಾಗುವುದಾಗಿ ನಿಶ್ಚಯಿಸಿರುವ ಕುರಿತಾಗಿಯೂ ಅವರು ಹೇಳಿಕೊಂಡಿದ್ದರು. ಸಿನಿಮಾ ಒಡಂಬಡಿಕೆಗಳು ಮುಗಿದ ಬಳಿಕ ಮದುವೆ ಕಾರ್ಯದಲ್ಲಿ ತೊಡಗುವುದಾಗಿಯೂ ಹೇಳಿದ್ದರು. ಅಂತೆಯೇ ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:‘ಕಲಾವಿದರನ್ನು ಕಲಾವಿದರಾಗಿರೋಕೆ ಬಿಡಿ’; ‘ಅಪ್ಪು ದೇವರ ಮಾಲೆ’ ಬಗ್ಗೆ ನಟ ಪ್ರಥಮ್ ಅಸಮಾಧಾನ

ಒಳ್ಳೆಯ ಹುಡುಗ ಪ್ರಥಮ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಹಾಗೂ ಆಗಾಗ್ಗೆ ಟಿವಿಯ ಕೆಲವು ರಿಯಾಲಿಟಿ ಶೋಗಳಲ್ಲಿ ಸಹ ಗೆಸ್ಟ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ನಟನೆ ಜೊತೆಗೆ ಸಣ್ಣ-ಪುಟ್ಟ ಸಮಾಜ ಸೇವಾ ಕಾರ್ಯಗಳನ್ನು ಸಹ ಪ್ರಥಮ್ ಮಾಡುತ್ತಿರುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿ ಕೆಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರು. ಆ ವೇಳೆ ತಮ್ಮ ಭಾವಿ ಪತ್ನಿಯ ಊರಿನಲ್ಲೂ ಪ್ರಚಾರ ಮಾಡಿರುವುದಾಗಿ ಹೇಳಿಕೊಂಡಿದ್ದರು. ಆದರೆ ತಾವು ಮದುವೆ ಆಗುತ್ತಿರುವುದು ಯಾರನ್ನು, ಹೆಸರೇನು ಎಂಬ ಬಗ್ಗೆ ಮಾಹಿತಿ ಹಂಚಿಕೊಂಡಿರಲಿಲ್ಲ. ಇಂದು ಸಹ ತಾವು ಬದಲಾಯಿಸಿಕೊಂಡಿರುವ ಉಂಗುರಗಳ ಚಿತ್ರಗಳನ್ನು ಮಾತ್ರವೇ ಹಂಚಿಕೊಂಡಿದ್ದಾರೆ. ತಮ್ಮಿಬ್ಬರ ಚಿತ್ರವನ್ನು ಹಂಚಿಕೊಂಡಿಲ್ಲ.

ಪ್ರಥಮ್ ನಟನೆಯ ನಟ ಭಯಂಕರ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿ ಸಮಾಧಾನಕರ ಪ್ರದರ್ಶನ ಕಂಡಿತ್ತು. ಇದೀಗ ಡ್ರೋನ್ ಪ್ರತಾಪ್ ಕುರಿತಾದ ಸಿನಿಮಾದಲ್ಲಿ ಪ್ರಥಮ್ ನಟಿಸುತ್ತಿದ್ದಾರೆ. ಇನ್ನೂ ಕೆಲವು ಹಾಸ್ಯ ಪ್ರಧಾನ ಸಿನಿಮಾಗಳನ್ನು ಪ್ರಥಮ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ವರ್ಷ ಪ್ರಥಮ್ ಮದುವೆಯೂ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:55 pm, Mon, 12 June 23