ಸ್ಟಾರ್ ನಟರ ಹುಟ್ಟುಹಬ್ಬಕ್ಕೆ (Birthday) ಅವರ ಹಳೆಯ ಸೂಪರ್ ಹಿಟ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡುವ ಪರಿಪಾಟ ಮೊದಲಿನಿಂದಲೂ ಇದೆ. ಆದರೆ ಇತ್ತೀಚೆಗೆ ತೆಲುಗು ಚಿತ್ರರಂಗದಲ್ಲಿ ಈ ಪರಿಪಾಟ ತುಸು ಹೆಚ್ಚಾಗಿದೆ. ಪ್ರಭಾಸ್, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ಜೂ ಎನ್ಟಿಆರ್ ಇನ್ನಿತರೆ ಸ್ಟಾರ್ ನಟರ ಹುಟ್ಟುಹಬ್ಬಕ್ಕೆ ಅವರ ಸೂಪರ್ ಹಿಟ್ ಸಿನಿಮಾಗಳು ಮರು ಬಿಡುಗಡೆ ಆಗಿ ದೊಡ್ಡ ಮೊತ್ತದ ಕಲೆಕ್ಷನ್ ಮಾಡುತ್ತಿವೆ. ಇದೀಗ ಕನ್ನಡದಲ್ಲಿಯೂ ಇದೇ ಪ್ರಯತ್ನ ಆರಂಭವಾಗಿದ್ದು ಅಂಬರೀಶ್ (Ambareesh) ಹುಟ್ಟುಹಬ್ಬಕ್ಕೆ ಅವರ ಸೂಪರ್ ಹಿಟ್ ಸಿನಿಮಾ ಅಂತ (Antha) ಮರು ಬಿಡುಗಡೆ ಮಾಡಲಾಗುತ್ತಿದೆ.
ಮೇ 29 ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ಅಭಿನಯಿಸಿದ್ದ ಸೂಪರ್ ಹಿಟ್ “ಅಂತ” ಚಿತ್ರ ಮೇ 26ರಂದು ಮರು ಬಿಡುಗಡೆಯಾಗುತ್ತಿದೆ. ನಲವತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ.
1981 ಇಸವಿಯಲ್ಲಿ ಅಂತ ಸಿನಿಮಾ ತೆರೆ ಕಂಡಿತ್ತು. ಈ ಚಿತ್ರವನ್ನು ಬೇರೆಯವರು ನಿರ್ದೇಶಿಸಬೇಕಿತ್ತು. ಆದರೆ ಪತ್ರಕರ್ತ ಎಂ.ಬಿ ಸಿಂಗ್ ಅವರ ಮೂಲಕ ಕಥೆ ನನಗೆ ದೊರಕಿತು. ಪರಿಮಳ ಆರ್ಟ್ಸ್ ಮೂಲಕ ಮಾರುತಿ, ವೇಣು ಹಾಗೂ ಕೆ.ಸಿ.ಎನ್ ಚಂದ್ರಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅಂಬರೀಶ್ ಅವರು ನಾಯಕ ಎಂದು ತಿರ್ಮಾನಿಸಲಾಯಿತು. ಲಕ್ಷ್ಮೀ ಈ ಚಿತ್ರದ ನಾಯಕಿ. ವಜ್ರಮುನಿ, ಸುಂದರಕೃಷ್ಣ ಅರಸ್, ಮುಸುರಿ ಕೃಷ್ಣಮೂರ್ತಿ, ಪ್ರಭಾಕರ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ. ಇಡೀ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ನಡೆದಿದೆ. ಹದಿನೆಂಟು ಅದ್ದೂರಿ ಸೆಟ್ ಹಾಕಲಾಗಿತ್ತು. “ಅಂತ” ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿತ್ತು. ನನಗೆ ತಿಳಿದಿರುವ ಪ್ರಕಾರ ಈ ಚಿತ್ರದ ಸ್ಪೂರ್ತಿಯಿಂದ ಸಾವಿರಾರು ಚಿತ್ರಗಳು ಬಂದಿದೆ. “ಅಂತ” ಆಗಲೇ ಪ್ಯಾನ್ ಇಂಡಿಯಾ ಸಿನಿಮಾ ಆಗಿತ್ತು. ಬೇರೆ ಬೇರೆ ಭಾಷೆಯಲ್ಲಿ ತುಂಬಾ ಬೇಡಿಕೆಯಿತ್ತು. ನನ್ನ ಪ್ರಕಾರ ಚಿತ್ರದ ನಿಜವಾದ ಹೀರೋ ಕಥೆ. ಆ ಕಥೆ ಚೆನ್ನಾಗಿತ್ತು ಎಂದರೆ ಯಶಸ್ಸು ಖಂಡಿತ. ಇಂತಹ ಅದ್ಭುತ “ಅಂತ” ಚಿತ್ರ ಇದೇ ಮೇ 26 ಮರು ಬಿಡುಗಡೆಯಾಗುತ್ತಿದೆ. ಒಳ್ಳೆಯದಾಗಲಿ ಎಂದು ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತಿಳಿಸಿದರು.
ಮೇ29, ಅಂಬರೀಶ್ 71ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಮೇ 26 ರಂದು “ಅಂತ” ಚಿತ್ರವನ್ನು 70 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇವೆ. ಜಯಣ್ಣ ಫಿಲಂಸ್ ಅವರು ಬಿಡುಗಡೆ ಮಾಡುತ್ತಿದ್ದಾರೆ. 35 ಎಂ ಎಂ ನಿಂದ 70 ಎಂ ಎಂ ಮಾಡಲಾಗಿದೆ. ಸೌಂಡ್, ಕಲರಿಂಗ್ ಎಲ್ಲವನ್ನೂ ಈಗಿನ ರೀತಿಗೆ ಬದಲಿಸಲಾಗಿದೆ ಎಂದು ನಿರ್ಮಾಪಕ ವೇಣು ತಿಳಿಸಿದರು.
ಅಂತ ಸಿನಿಮಾದಲ್ಲಿ ಅಂಬರೀಶ್ ಇನ್ಸ್ಪೆಕ್ಟರ್ ಸುಶೀಲ್ ಹಾಗೂ ಗ್ಯಾಂಗ್ಸ್ಟರ್ ಕನ್ವರ್ ಲಾಲ್ ಆಗಿ ದ್ವಿಪಾತ್ರದಲ್ಲಿ ನಟಿಸಿದ್ದರು. ‘ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಭೋಲೊ’ ಸೇರಿದಂತೆ ಇನ್ನೂ ಹಲವು ಐಕಾನಿಕ್ ಸಂಭಾಷಣೆಗಳು ಸಿನಿಮಾದಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ