‘ಪವಿತ್ರಾ ಗೌಡ ದರ್ಶನ್​ ಪತ್ನಿ ಅಲ್ಲ’: ಪೊಲೀಸ್​ ಆಯುಕ್ತರಿಗೆ ಪತ್ರ ಬರೆದ ವಿಜಯಲಕ್ಷ್ಮಿ

ದರ್ಶನ್​ ಮತ್ತು ಪವಿತ್ರಾ ಗೌಡ ಅವರು ಆಪ್ತವಾಗಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಆದರೆ ಅವರಿಬ್ಬರು ಗಂಡ-ಹೆಂಡತಿ ಅಲ್ಲ ಎಂಬುದನ್ನು ದರ್ಶನ್​ ಪತ್ನಿ ವಿಜಯಲಕ್ಷ್ಮಿ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಪೊಲೀಸ್​ ಆಯುಕ್ತರಿಗೆ ಬರೆದ ಪತ್ರದಲ್ಲಿ ವಿಜಯಲಕ್ಷ್ಮಿ ಅವರು ಈ ವಿಚಾರ ಪ್ರಸ್ತಾಪಿಸಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸ್​ ದಾಖಲೆಗಳಲ್ಲಿ ಮಾಹಿತಿ ಸರಿಯಾಗಿ ಇರಲಿ ಎಂದು ವಿಜಯಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.

‘ಪವಿತ್ರಾ ಗೌಡ ದರ್ಶನ್​ ಪತ್ನಿ ಅಲ್ಲ’: ಪೊಲೀಸ್​ ಆಯುಕ್ತರಿಗೆ ಪತ್ರ ಬರೆದ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ, ದರ್ಶನ್​, ಪವಿತ್ರಾ ಗೌಡ
Edited By:

Updated on: Jul 03, 2024 | 10:52 PM

ನಟ ದರ್ಶನ್​ (Darshan) ಅವರ ಖಾಸಗಿ ಜೀವನದ ವಿಚಾರಗಳು ರಾಷ್ಟ್ರ ಮಟ್ಟದಲ್ಲಿ ಚರ್ಚೆ ಆಗುತ್ತಿವೆ. ಅದೆಲ್ಲ ಶುರುವಾಗಿದ್ದು ರೇಣುಕಾ ಸ್ವಾಮಿ ಹತ್ಯೆ ಕೇಸ್​ನಿಂದಾಗಿ. ಈ ಪ್ರಕರಣದಲ್ಲಿ ದರ್ಶನ್​, ನಟಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಅನೇಕರನ್ನು ಬಂಧಿಸಲಾಗಿದೆ. ಈ ಕುರಿತು ಸುದ್ದಿಗೋಷ್ಠಿ ಮಾಡುವಾಗ ‘ಪವಿತ್ರಾ ಗೌಡ ಅವರು ದರ್ಶನ್​ ಪತ್ನಿ’ ಎಂದು ಪೊಲೀಸ್​ ಆಯುಕ್ತ ದಯಾನಂದ್​ ಹೇಳಿಕೆ ನೀಡಿದ್ದರು. ಆ ಬಳಿಕ ರಾಷ್ಟ್ರ ಮಟ್ಟದ ಮಾಧ್ಯಮಗಳಲ್ಲಿ ಕೂಡ ಅದೇ ರೀತಿ ಸುದ್ದಿ ಪ್ರಸಾರ ಆಯಿತು. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ (Vijayalakshmi Darshan) ಅವರು ಬೆಂಗಳೂರು ಪೊಲೀಸ್ ಕಮಿಷನರ್​ ದಯಾನಂದ್ ಅವರಿಗೆ ಪತ್ರ ಬರೆದಿದ್ದಾರೆ.

‘ನೀವು ಸುದ್ದಿಗೋಷ್ಠಿ ಮಾಡುವಾಗ ದರ್ಶನ್​ ಪತ್ನಿ ಪವಿತ್ರಾ ಗೌಡ ಎಂದು ತಪ್ಪಾಗಿ ಹೇಳಿದ್ದೀರಿ. ಆ ಬಳಿಕ ರಾಜ್ಯದ ಗೃಹಮಂತ್ರಿಗಳು, ರಾಷ್ಟ್ರಮಟ್ಟದ ಮಾಧ್ಯಮದರು ಕೂಡ ಅದನ್ನೇ ಹೇಳಿದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್​ ದಂಪತಿ ಅರೆಸ್ಟ್​ ಅಂತ ಸುದ್ದಿ ಮಾಡಿದರು. ಇದರಿಂದಾಗಿ ನಾನು ಮತ್ತು ನನ್ನ ಮಗ ವಿನೀಶ್​ ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವಂತೆ ಆಗಬಾರದು. ಪವಿತ್ರಾ ಗೌಡಗೆ ಸಂಜಯ್​ ಸಿಂಗ್​ ಜೊತೆ ಮದುವೆ ಆಗಿತ್ತು. ಅವರಿಂದ ಮಗಳನ್ನೂ ಪಡೆದಿದ್ದಾರೆ. ಪೊಲೀಸ್​ ದಾಖಲೆಗಳಲ್ಲಿ ಈ ಮಾಹಿತಿ ಸ್ಪಷ್ಟವಾಗಿರಲಿ. ಇದರಿಂದ ನನಗೆ ಭವಿಷ್ಯದಲ್ಲಿ ತೊಂದರೆ ಆಗದಿರಲಿ’ ಎಂದು ಪತ್ರದಲ್ಲಿ ವಿಜಯಲಕ್ಷ್ಮಿ ಅವರು ಮನವಿ ಮಾಡಿಕೊಂಡಿದ್ದಾರೆ.

‘ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಕಾನೂನು ತನ್ನದೇ ಸಮಯ ತೆಗೆದುಕೊಳ್ಳುತ್ತದೆ ಅಂತ ನಾನು ನಂಬಿದ್ದೇನೆ. ಈ ಕೇಸ್​ನ ಮಾಸ್ಟರ್​ ಮೈಂಡ್​ ಆಗಿರುವ ಪವಿತ್ರಾ ಗೌಡ ವಿಚಾರದಲ್ಲಿ ಮಾಹಿತಿ ಸೂಕ್ತವಾಗಿರಲಿ ಎಂದು ನಾನು ಒತ್ತಾಯಿಸುತ್ತೇನೆ. ಆಕೆ ನನ್ನ ಗಂಡನ ಸ್ನೇಹಿತೆ ಎಂಬುದು ನಿಜ. ಆದರೆ ಆಕೆ ನನ್ನ ಗಂಡನ ಪತ್ನಿ ಅಲ್ಲ ಎಂಬುದು ನಿಮಗೆ ದಯವಿಟ್ಟು ತಿಳಿದಿರಲಿ. ನಾನು ಮಾತ್ರ ದರ್ಶನ್​ ಅವರನ್ನು ಕಾನೂನಾತ್ಮಕವಾಗಿ ಮದುವೆ ಆದವಳು. ಧರ್ಮಸ್ಥಳದಲ್ಲಿ 2003ರ ಮೇ 19ರಂದು ನಮ್ಮ ಮದುವೆ ನಡೆದಿತ್ತು’ ಎಂದು ವಿಜಯಲಕ್ಷ್ಮಿ ಅವರು ಈ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜೈಲಿನಿಂದ ಹಗಲು-ರಾತ್ರಿ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗೆ ಬೇಡಿಕೆ ಇಡುತ್ತಿರುವ ದರ್ಶನ್

ದರ್ಶನ್​ ಅವರ ಸಂಸಾರದಲ್ಲಿ ಬಿರುಕು ಮೂಡಲು ಪವಿತ್ರಾ ಗೌಡ ಅವರೇ ಕಾರಣ ಎಂಬ ಮಾತಿದೆ. ಈಗ ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಕೂಡ ಪವಿತ್ರಾ ಎ1 ಆಗಿದ್ದಾರೆ. ದರ್ಶನ್​ ಎ2 ಆಗಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ಹತ್ಯೆ ಮಾಡಿದ ಆರೋಪ ದರ್ಶನ್​ ಮೇಲಿದೆ. ಅವರ ಜೊತೆ ಅನೇಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಕೇಸ್​ನ ತನಿಖೆ ನಡೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More
Loading...
Unable to load recommendations.
Follow Us