
ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಅವರು ಪ್ರಮುಖ ಆರೋಪಿ ಆಗಿದ್ದಾರೆ. ಅವರಿಗೆ ನೀಡಲಾಗಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಈಗ ಅವರ ಪರವಾಗಿ ವಾದ ಮಾಡಲು ಲಾಯರ್ ಬಾಲನ್ (Lawyer Balan) ಸಜ್ಜಾಗಿದ್ದಾರೆ. ತಮ್ಮ ಮುಂದಿನ ನಡೆ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಈ ಕುರಿತು ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ಪವಿತ್ರಾ ಗೌಡ ಅವರಿಗೆ ಜಾಮೀನು ಕೊಡಿಸಲು ತಾವು ಪ್ರಯತ್ನಿಸುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ಪವಿತ್ರಾ ಗೌಡ (Pavithra Gowda) ಅವರ ವಿರುದ್ಧ ಸಾಕ್ಷಿಯೇ ಇಲ್ಲ ಎಂದು ಲಾಯರ್ ಬಾಲನ್ ಹೇಳಿದ್ದಾರೆ.
‘ನಾನು ಚಾರ್ಜ್ಶೀಟ್ ಓದಿದ್ದೇನೆ. ಕಣ್ಣಾರೆ ಕಂಡ ಸಾಕ್ಷಿಗಳು ಯಾರೂ ಇಲ್ಲ. ಇರುವುದು ಟೆಕ್ನಿಕಲ್ ಎವಿಡೆನ್ಸ್. ಅವುಗಳಲ್ಲಿ ಪವಿತ್ರಾ ಗೌಡ ನಂಬರ್ ಇಲ್ಲ. ಅವರು ಮೊಬೈಲ್ ಉಪಯೋಗಿಸಿಲ್ಲ. ಇಡೀ ಚಾರ್ಜ್ಶೀಟ್ನಲ್ಲಿ ಅವರನ್ನು ಕನೆಕ್ಟ್ ಮಾಡಲು ಯಾವುದೇ ಸಿಸಿಟಿವಿ ದೃಶ್ಯ ಕೂಡ ಇಲ್ಲ. ಪಬ್ಲಿಕ್ ಒತ್ತಡದಿಂದ ಚಾರ್ಜ್ಶೀಟ್ ಹಾಕಿದ್ದಾರೆ. ಜಾಮೀನು ವಜಾ ಆಗಿದ್ದಕ್ಕೆ ಬೇರೆ ಕಾರಣಗಳು ಇವೆ’ ಎಂದು ಬಾಲನ್ ಅವರು ಹೇಳಿದ್ದಾರೆ.
‘ಪವಿತ್ರಾ ಗೌಡ ಅವರಿಗೆ ಸುಪ್ರೀಂ ಕೋರ್ಟ್ನಲ್ಲಿ ಪ್ರತ್ಯೇಕ ಲಾಯರ್ ಇಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು. ಆದೇಶ ನೀಡುವ ದಿನ ಸಮಯಾವಕಾಶ ಕೇಳಿದ್ದರೆ ಕೊಡುತ್ತಿದ್ದರು. ಅದು ಸಾಧ್ಯವಾಗಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಅಂತಿಮ. ಈಗ ಟ್ರಯಲ್ ನಡೆಯಬೇಕು. ತುಂಬಾ ಆರೋಪಿಗಳಿದ್ದಾರೆ. ಯಾರಿಗೆ ಯಾವ ಲಾಯರ್ ಎಂಬುದು ತಿಳಿದಿಲ್ಲ. 233 ಸಾಕ್ಷಿಗಳು ಇದ್ದಾರೆ. ಇದರಲ್ಲಿ ಎಫ್ಎಸ್ಎಲ್ ಮತ್ತು ಪೊಲೀಸ್ ಅಧಿಕಾರಿಗಳು ಇದ್ದಾರೆ. ಸಮಯ ಆಗುತ್ತದೆ’ ಎಂದಿದ್ದಾರೆ ಬಾಲನ್.
‘ಆಗಸ್ಟ್ 23ನೇ ತಾಕೀತು ಕೇಸ್ ಇದೆ. ಪವಿತ್ರಾ ಗೌಡ ಅವರಿಗೆ ನಾನು ಮತ್ತೆ ಬೇಲ್ ಅಪ್ಲಿಕೇಷನ್ ಹಾಕುತ್ತೇನೆ. ಒಂದು ಟೆಕ್ನಿಕಲ್ ಗ್ರೌಂಡ್ ಇದೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಕ್ಕೂ ಇದಕ್ಕೂ ಸಂಬಂಧ ಇಲ್ಲ. ಗ್ರೌಂಡ್ಸ್ ಏನು ಎಂಬುದನ್ನು ನಾನು 23ನೇ ತಾರೀಕು ಹೇಳುತ್ತೇನೆ. ಈಗ ಹೇಳಿದರೆ ಸರಿ ಆಗಲ್ಲ. ಟ್ರಯಲ್ ಶುರುವಾದರೆ, ನನ್ನ ಪ್ರಕಾರ ಪವಿತ್ರಾ ಗೌಡ ಅವರು ನಿರಪರಾಧಿಯಾಗಿ ಹೊರಗೆ ಬರುತ್ತಾರೆ. ಅವರು ತಪ್ಪು ಮಾಡಿಲ್ಲ. ಅವರ ವಿರುದ್ಧ ಸಾಕ್ಷಿ ಆಧಾರಗಳು ಇಲ್ಲ. ಅದು ಖಚಿತ’ ಎಂದು ಬಾಲನ್ ಹೇಳಿದ್ದಾರೆ.
ಇದನ್ನೂ ಓದಿ: ಪವಿತ್ರಾ ಗೌಡ ಬಂಧನ; ಮುಖದಲ್ಲಿದ್ದ ನಗು ಮಾಯ
‘ಬೇಲ್ ಎಂದರೆ ಬಿಡುಗಡೆ ಅಲ್ಲ. ಕೋರ್ಟ್ ಬಂಧನದಲ್ಲಿ ಇರುವವರು ಹೊರಗಡೆ ಇದ್ದು ಕೇಸ್ ನಡೆಸುವುದು. ಇದು ಕೇವಲ ಸೆಕ್ಷನ್ 302 ಕೇಸ್. ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಹೊಡೆದಿದ್ದಕ್ಕೆ ಸತ್ತು ಹೋಗಿದ್ದಾನೆ ಎಂಬುದು ಕೇಸ್. ಹೊಡೆದಿದ್ದಕ್ಕೆ ಕಣ್ಣಾರೆ ಕಂಡ ಸಾಕ್ಷಿ ಇಲ್ಲ. ಲೂಸ್ ಕನೆಕ್ಷನ್ ಕೊಟ್ಟಿದ್ದಾರೆ’ ಎಂದು ಬಾಲನ್ ಅವರು ಕೇಸ್ ಬಗ್ಗೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:28 pm, Thu, 21 August 25