
ಸ್ಟಾರ್ ನಟರ ಜತೆ ಸಿನಿಮಾ ಮಾಡುವಾಗ ಸಾಮಾನ್ಯವಾಗಿ ನಿರ್ದೇಶಕರು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಹಲವು ಹಂತಗಳಲ್ಲಿ ಚಿತ್ರೀಕರಣ ನಡೆಯುತ್ತದೆ. ಕೆಲವೊಮ್ಮೆ ಹಲವು ವರ್ಷ ಚಿತ್ರದ ರಿಲೀಸ್ಗೆ ಫ್ಯಾನ್ಸ್ ಕಾಯಬೇಕಾಗುತ್ತದೆ. ಆದರೆ, ನಿರ್ದೇಶಕ ಪವನ್ ಕುಮಾರ್ (Pawan Kumar) ಈ ವಿಚಾರದಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಮಲಯಾಳಂ ನಟ ಫಹಾದ್ ಫಾಸಿಲ್ (Fahad Faasil) ಅವರ ಜತೆ ಕೈ ಜೋಡಿಸಿರುವ ‘ಧೂಮಂ’ ಸಿನಿಮಾದ ಶೂಟಿಂಗ್ ಕೆಲವೇ ತಿಂಗಳಲ್ಲಿ ಪೂರ್ಣಗೊಂಡಿದೆ. ಶೂಟಿಂಗ್ ಮುಗಿದ ವಿಚಾರವನ್ನು ಹೊಂಬಾಳೆ ಫಿಲ್ಮ್ಸ್ ಅಧಿಕೃತ ಮಾಡಿದೆ.
ಪವನ್ ಕುಮಾರ್ ಅವರ ನಿರ್ದೇಶನದ ಬಗ್ಗೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ. ‘ಲೂಸಿಯಾ’, ‘ಯು-ಟರ್ನ್’ ರೀತಿಯ ಸಿನಿಮಾಗಳ ಮೂಲಕ ಜನರಿಗೆ ತಮ್ಮ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ. ಇನ್ನು, ಫಹಾದ್ ಫಾಸಿಲ್ ಅವರು ತಮ್ಮ ನಟನೆ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಅವರ ನಟನೆಯನ್ನು ಮೆಚ್ಚಿಕೊಂಡವರು ಹಲವರಿದ್ದಾರೆ. ‘ಧೂಮಂ’ ಚಿತ್ರಕ್ಕಾಗಿ ಇವರು ಒಂದಾಗಿದ್ದು ಸಹಜವಾಗಿಯೇ ಕುತೂಹಲ ಸೃಷ್ಟಿಸಿತ್ತು.
ಅಕ್ಟೋಬರ್ 9ರಂದು ‘ಧೂಮಂ’ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ‘ಧೂಮಂ’ ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕಿರಗಂದೂರು ಆರಂಭ ಫಲಕ ತೋರಿದ್ದರು. ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ನೀಡಿದ್ದರು. ಈಗ ಮೂರೇ ತಿಂಗಳಲ್ಲಿ ‘ಧೂಮಂ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ.
ಫಹಾದ್ ಫಾಸಿಲ್ಗೆ ಜತೆಯಾಗಿ ಅಪರ್ಣಾ ಬಾಲಮುರುಳಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡುತ್ತಿದೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶೀಘ್ರವೇ ಆರಂಭ ಆಗಲಿದೆ. ಇನ್ನು ಕೆಲವೇ ತಿಂಗಳಲ್ಲಿ ‘ಧೂಮಂ’ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗಿದೆ. ಮಲಯಾಳಂ ಜೊತೆಗೆ ಈ ಸಿನಿಮಾ ಕನ್ನಡದಲ್ಲೂ ರಿಲೀಸ್ ಆಗಲಿದೆಯೇ ಎನ್ನುವ ಪ್ರಶ್ನೆ ಕಾಡಿದೆ.
ಇದನ್ನೂ ಓದಿ: Dhoomam: ‘ಧೂಮಂ’ ಚಿತ್ರಕ್ಕೆ ಮುಹೂರ್ತ ನೆರವೇರಿಸಿದ ‘ಹೊಂಬಾಳೆ ಫಿಲ್ಮ್’; ಇಲ್ಲಿದೆ ಫೋಟೋ ಗ್ಯಾಲರಿ
‘ಕೆಜಿಎಫ್’, ‘ಕೆಜಿಎಫ್ 2’, ‘ರಾಜಕುಮಾರ’, ‘ಕಾಂತಾರ’ ಮುಂತಾದ ಸೂಪರ್ ಹಿಟ್ ಚಿತ್ರಗಳಿಗೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ. ಇದೇ ಬ್ಯಾನರ್ ಅಡಿಯಲ್ಲಿ ‘ಧೂಮಂ’ ರಿಲೀಸ್ ಆಗುತ್ತಿರುವುದರಿಂದ ಚಿತ್ರಕ್ಕೆ ಭರ್ಜರಿ ನಿರೀಕ್ಷೆ ಸೃಷ್ಟಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Sat, 14 January 23