ಪವನ್ ಕುಮಾರ್ (Pawan Kumar) ನಿರ್ದೇಶನದ ಧೂಮಂ (Dhoomam) ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ನಿರ್ದೇಶಕ, ನಿರ್ಮಾಪಕರಿಬ್ಬರೂ ಕನ್ನಡದವರೇ ಆಗಿದ್ದರೂ ಸಹ ಧೂಮಂ ಮಲಯಾಳಂ ಸಿನಿಮಾ ಆಗಿದ್ದು ಕನ್ನಡದಲ್ಲಿ ಡಬ್ ಆಗಿ ಬಿಡುಗಡೆ ಆಗಲಿದೆ. ಧೂಮಂ ಸಿನಿಮಾ ಪ್ರಾರಂಭವಾಗಿದ್ದು ದ್ವಿತ್ವ (Dwitva) ಸಿನಿಮಾ ನಿಂತು ಹೋಗಿದ್ದಕ್ಕೆ. ಪುನೀತ್ ರಾಜ್ಕುಮಾರ್ (Puneeth Rajkumar) ಅವರಿಗಾಗಿ ದ್ವಿತ್ವ ಸಿನಿಮಾ ನಿರ್ದೇಶಿಸಲು ಪವನ್ ಮುಂದಾಗಿದ್ದರು. ಆ ಸಿನಿಮಾವನ್ನು ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಒಟ್ಟಿಗೆ ನಿರ್ಮಿಸಲು ಹೊಂಬಾಳೆ (Hombale) ನಿರ್ಮಾಣ ಸಂಸ್ಥೆ ಉತ್ಸುಕವಾಗಿತ್ತು. ಇನ್ನೇನು ಎರಡು ವಾರದಲ್ಲಿ ಚಿತ್ರೀಕರಣ ಶುರುವಾಗಬೇಕೆಂದಾಗ ಪುನೀತ್ ಕಾಲವಾದರು. ಆ ಕಾರಣಕ್ಕೆ ದ್ವಿತ್ವ ನಿಂತು ಧೂಮಂ ಶುರುವಾಯಿತು.
ದ್ವಿತ್ವ ಸಿನಿಮಾಕ್ಕೆ ಪುನೀತ್ ಹೊರತಾಗಿ ಬೇರೆ ನಟರನ್ನು ಊಹೆ ಮಾಡಿಕೊಳ್ಳಲಾಗುತ್ತಿಲ್ಲ. ಆ ಕತೆ ಯೋಚಿಸಿದರೆ ನನಗೆ ಪುನೀತ್ ಅವರೇ ಕಣ್ಣಮುಂದೆ ಬರುತ್ತಾರೆ ಹಾಗಾಗಿ ಆ ಸಿನಿಮಾವನ್ನು ಪಕ್ಕಕ್ಕೆ ಇಡಲೇ ಬೇಕಾಯ್ತು ಎಂದು ಫಿಲಂ ಕಂಪ್ಯಾನಿಯನ್ ಸೌಥ್ಗೆ ನೀಡಿರುವ ಸಂದರ್ಶನದಲ್ಲಿ ಪವನ್ ಕುಮಾರ್ ಹೇಳಿಕೊಂಡಿದ್ದಾರೆ. ಮುಂದುವರೆದು, ”ಅದೇ ಸಮಯದಲ್ಲಿ ಫಹಾದ್ ಫಾಸಿಲ್ಗೆ ಯಾವುದಾದರೂ ಸಿನಿಮಾ ಮಾಡಿ ಎಂದು ಹೊಂಬಾಳೆಯವರು ಕೇಳಿದರು. ಆಗ ನಾನು ನನ್ನ ‘ನಿಕೋಟಿನ್’ ಕತೆಯನ್ನು ಅವರಿಗೆ ಕೊಟ್ಟೆ ಅವರು ಓಕೆ ಎಂದರು. ಅದನ್ನೇ ಈಗ ಧೂಮಂ ಮಾಡಿದ್ದೇವೆ” ಎಂದರು ಪವನ್.
ಆದರೆ ವಿಷಯ ಏನೆಂದರೆ ಧೂಮಂ ಅಥವಾ ಆಗ ನಿಕೋಟಿನ್ ಕತೆಗೂ ಸಹ ಪುನೀತ್ ರಾಜ್ಕುಮಾರ್ ಅವರು ನಾಯಕರಾಗುವ ಸಾಧ್ಯತೆ ಇತ್ತಂತೆ. ಪುನೀತ್ ರಾಜ್ಕುಮಾರ್ ಅವರು ಪವನ್ರ ಲೂಸಿಯಾ ಸಿನಿಮಾ ನೋಡಿ ಬಹಳ ಇಷ್ಟವಾಗಿ ಅವರೊಟ್ಟಿಗೆ ಚರ್ಚಿಸಿದ್ದರಂತೆ. ಲೂಸಿಯಾಗೂ ಮುನ್ನ ಪವನ್ ಬರೆದಿದ್ದ ನಿಕೋಟಿನ್ ಕತೆಯನ್ನು ಪುನೀತ್ಗೆ ಕಳಿಸಿ ಅಭಿಪ್ರಾಯ ಕೇಳಿದ್ದಾರೆ ಪವನ್. ಕತೆ ಓದಿ ಪವನ್ಗೆ ಕರೆ ಮಾಡಿದ್ದ ಪುನೀತ್, ಸುಮಾರು 45 ನಿಮಿಷಗಳ ಕಾಲ ಚರ್ಚೆ ಮಾಡಿದರಂತೆ. ಆಗ ಪವನ್, ನೀವೇ ಹಿರೋ ಆಗಿಬಿಡಿ. ನನಗೆ ಬಹಳ ಖುಷಿಯಾಗುತ್ತದೆ. ಸ್ಟಾರ್ ಒಬ್ಬರು ನನ್ನ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ ಅದು ಸಾಧ್ಯವಾಗುತ್ತದೆ” ಎಂದಿದ್ದಾರೆ.
ಇದನ್ನೂ ಓದಿ:ಸಂಕಷ್ಟದಿಂದ ಕಾಪಾಡಿದ ಪುನೀತ್ ರಾಜ್ಕುಮಾರ್ ಪವರ್ ಬಗ್ಗೆ ತಮಿಳು ನಿರ್ದೇಶಕ, ನಟ ಸಮುದ್ರಖನಿ ಮಾತು
ಸರಿ ನಾನು ತಂಡದೊಂದಿಗೆ ಚರ್ಚಿಸಿ ಹೇಳುತ್ತೇನೆ ಎಂದು ತುಸು ಸಮಯ ತೆಗೆದುಕೊಂಡ ಪುನೀತ್ ಕೆಲವು ಕಮರ್ಷಿಯಲ್ ಕಾರಣಗಳಿಗಾಗಿ ಈ ಸಿನಿಮಾ ಮಾಡಲಾಗುತ್ತಿಲ್ಲ ಎಂದಿದ್ದರಂತೆ. ”ಅವರು ಬಹಳ ಪ್ರಾಮಾಣಿಕವಾಗಿ ನನ್ನ ಬಳಿ ಹೇಳಿಕೊಂಡರು. ತಾವು ಏಕೆ ಮಾಸ್ ಸಿನಿಮಾಗಳನ್ನು ಮಾಡಬೇಕು, ಚಿತ್ರರಂಗ ಎಂಬುದು ಹೇಗೆ ಮಾಸ್, ಕ್ಲಾಸ್ ಎಲ್ಲದರ ಮಿಶ್ರಣ ಆಗಿರಬೇಕು ಎಲ್ಲವನ್ನೂ ವಿವರಿಸಿದರು. ಅವರು ಆ ಮಾಸ್ ಸಿನಿಮಾಗಳಿಂದ ಬಿಡುಗಡೆ ಬಯಸಿದ್ದರು ಆದರೆ ಚಿತ್ರರಂಗದ ವ್ಯವಸ್ಥೆ ಅವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ” ಎಂದಿದ್ದಾರೆ ಪವನ್.
ಆದರೆ ಕೋವಿಡ್ ಬಳಿಕ ಪುನೀತ್ ರಾಜ್ಕುಮಾರ್ ಅವರು ಮಾಸ್ ಗೆ ಅಲ್ಪವಿರಾಮ ನೀಡಿ ಪವನ್ ನಿರ್ದೇಶನದ ದ್ವಿತ್ವ ಸಿನಿಮಾಕ್ಕೆ ಒಪ್ಪಿಗೆ ನೀಡಿದ್ದರು. ಒಬ್ಬ ಕಂಟೆಂಟ್ ಓರಿಯೆಂಟೆಡ್ ನಿರ್ದೇಶಕ ಹಾಗೂ ಮಾಸ್ ಹೀರೋ ಜೊತೆಯಾಗಿ ಅದ್ಭುತ ಸೃಷ್ಟಿಸಲಿದ್ದಾರೆ ಎಂಬ ನಿರೀಕ್ಷೆ ಅಪ್ಪು ಅಭಿಮಾನಿಗಳಲ್ಲಿ ಹಾಗೂ ಸಿನಿಮಾ ಪ್ರೇಮಿಗಳಲ್ಲಿ ಮೂಡಿತ್ತು ಆದರೆ ಆ ಸಿನಿಮಾ ಶುರುವಾಗುವ ಮುನ್ನವೇ ನಿಂತು ಹೋಯಿತು. ಈಗ ಧೂಮಂ ಸಿನಿಮಾ ಇದೇ 23ರಂದು ತೆರೆಗೆ ಬರುತ್ತಿದೆ. ಮಲಯಾಳಂನ ಈ ಸಿನಿಮಾದಲ್ಲಿ ಫಹಾದ್ ಫಾಸಿಲ್ ನಟಿಸಿದ್ದಾರೆ. ಕನ್ನಡದಲ್ಲಿ ಸಿನಿಮಾ ಡಬ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:40 pm, Tue, 20 June 23