ಕನ್ನಡ ಸಿನಿಮಾಗಳಿಗೆ ರಾಷ್ಟ್ರಮಟ್ಟದಲ್ಲಿ ಬೇಡಿಕೆ ಬರುತ್ತಿದೆ. ನಮ್ಮ ಚಿತ್ರಗಳನ್ನು ಮೆಚ್ಚಿಕೊಂಡು ಬೇರೆ ಬೇರೆ ಭಾಷೆಗೆ ಅದನ್ನು ಡಬ್/ರಿಮೇಕ್ ಮಾಡಲಾಗುತ್ತಿದೆ. ಈ ವಿಚಾರದಲ್ಲಿ ಈಗ ಪವನ್ ಕುಮಾರ್ ನಿರ್ದೇಶನದ ಯು-ಟರ್ನ್ ಹೊಸ ದಾಖಲೆ ಸೃಷ್ಟಿ ಮಾಡಿದೆ.
ಕನ್ನಡ ಸಿನಿಮಾಗಳು ಬೇರೆ ಭಾಷೆಗೆ ರಿಮೇಕ್ ಆಗುವುದು ಅಥವಾ ಡಬ್ ಆಗುವುದು ತುಂಬಾನೇ ವಿರಳವಾಗಿತ್ತು. ಒಮ್ಮೆ ಇವು ಡಬ್ ಆದರೂ ಯಶಸ್ಸು ಕಂಡಿದ್ದ ಉದಾಹರಣೆ ತುಂಬಾನೇ ಕಡಿಮೆ. ಆದರೆ, ಈಗ ಕಾಲ ಬದಲಾಗುತ್ತಿದೆ. ಕನ್ನಡದ ಚಿತ್ರಗಳಿಗೂ ಬೇಡಿಕೆ ಬರುತ್ತಿದೆ. ಕನ್ನಡದಲ್ಲಿ ಈ ಮೊದಲು ತೆರೆಕಂಡಿದ್ದ ಯು-ಟರ್ನ್ ಸಿನಿಮಾ 8 ಭಾಷೆಗಳಿಗೆ ರಿಮೇಕ್ ಆಗುವ ಮೂಲಕ ಹೊಸ ದಾಖಲೆ ಬರೆದಿದೆ.
ಪವನ್ ಕುಮಾರ್ ನಿರ್ದೇಶನ ಮಾಡಿದ್ದ ಯು-ಟರ್ನ್ 2016ರಲ್ಲಿ ರಿಲೀಸ್ ಆಗಿತ್ತು. ವಿಮರ್ಶಕರಿಂದ ಸಿನಿಮಾ ಮೆಚ್ಚುಗೆಗೆ ಪಾತ್ರವಾಗಿತ್ತು. ಅಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ, ಫಿಲಿಫಿನೋ, ಸಿಂಹಳಿ, ಹಿಂದಿ ಮತ್ತು ಬಂಗಾಳಿ ಭಾಷೆಗೆ ಈ ಚಿತ್ರ ರಿಮೇಕ್ ಆಗಿರುವುದು ವಿಶೇಷ. ಈ ಮೊದಲು ಡಾ.ರಾಜ್ಕುಮಾರ್ ಅವರ ನಟನೆಯ ಅನುರಾಗ ಅರಳಿತು ಚಿತ್ರ ಅಂದಿನ ಕಾಲಕ್ಕೆ 6 ಭಾಷೆಗೆ ರಿಮೇಕ್ ಆಗಿತ್ತು.
ಪವನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದ ಯು-ಟರ್ನ್ ಚಿತ್ರ ರಸ್ತೆ ಸುರಕ್ಷತೆಯ ವಿಚಾರವನ್ನು ಇಟ್ಟುಕೊಂಡು ಹೆಣೆದ ಸಿನಿಮಾ. ರಸ್ತೆಯಲ್ಲಿ ಸಂಚರಿಸುವಾಗ ಎಲ್ಲೆಂದರಲ್ಲಿ ಯು ಟರ್ನ್ ತೆಗೆದುಕೊಳ್ಳುವವರಿಗೆ ಎಚ್ಚರಿಕೆ ಸಂದೇಶ ನೀಡಿತ್ತು. ಎರಡುವರೆ ಕೋಟಿ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರ, ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಗಳಿಕೆ ಮಾಡಿತ್ತು. ಆದರೆ, ಈಗ ಈ ಸಿನಿಮಾ 8 ಭಾಷೆಗೆ ರಿಮೇಕ್ ಆಗಿರುವುದು ಕನ್ನಡದ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ಪವನ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಶ್ರದ್ಧಾ ಶ್ರೀನಾಥ್, ರೋಜರ್ ನಾರಾಯಣ್, ರಾಧಿಕಾ ಚೇತನ್, ದಿಲೀಪ್ ರಾಜ್ ಮೊದಲಾದವರು ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಅಣ್ಣಾವ್ರು ಯಾರಿಗೂ ಗೊತ್ತಿಲ್ಲದಂತೆ ಗಜಪತಿ ಗರ್ವಭಂಗ ಸಿನಿಮಾನ ನೋಡಿಕೊಂಡು ಬಂದಿದ್ರು : ಎಮ್.ಎಸ್.ಉಮೇಶ್
Published On - 7:55 pm, Tue, 30 March 21