ಟೈಗರ್​ ಪ್ರಭಾಕರ್​ ಜನ್ಮದಿನ: ಅಣ್ಣನಂತೆ ಭುಜಕೊಟ್ಟರು; ಅಮ್ಮ ತೀರಿಕೊಂಡಾಗ ಸಂತೈಸಿದರು! ಜಗ್ಗೇಶ್​ಗೆ ಪ್ರಭಣ್ಣನ ನೆನಪು

ನಟ ಟೈಗರ್​ ಪ್ರಭಾಕರ್​ ಜೊತೆ ಜಗ್ಗೇಶ್​ ಉತ್ತಮ ಒಡನಾಟ ಹೊಂದಿದ್ದರು. ಇಂದು (ಮಾ.30) ಪ್ರಭಾಕರ್​ ಜನ್ಮದಿನ ಪ್ರಯುಕ್ತ ಕೆಲವು ಘಟನೆಗಳನ್ನು ಅವರು ಮೆಲುಕು ಹಾಕಿದ್ದಾರೆ.

ಟೈಗರ್​ ಪ್ರಭಾಕರ್​ ಜನ್ಮದಿನ: ಅಣ್ಣನಂತೆ ಭುಜಕೊಟ್ಟರು; ಅಮ್ಮ ತೀರಿಕೊಂಡಾಗ ಸಂತೈಸಿದರು! ಜಗ್ಗೇಶ್​ಗೆ ಪ್ರಭಣ್ಣನ ನೆನಪು
ಜಗ್ಗೇಶ್​ - ಪ್ರಭಾಕರ್​
Follow us
| Updated By: Digi Tech Desk

Updated on:Apr 09, 2021 | 5:57 PM

ಕನ್ನಡ ಚಿತ್ರರಂಗದ ಹಳೇ ತಲೆಮಾರಿನ ಅನೇಕ ಕಲಾವಿದರ ಜೊತೆಗೆ ನವರಸ ನಾಯಕ ಜಗ್ಗೇಶ್​ಗೆ ಆತ್ಮೀಯತೆ ಇತ್ತು. ಅದೇ ರೀತಿ ಟೈಗರ್​ ಪ್ರಭಾಕರ್​ ಜೊತೆಗೂ ಜಗ್ಗೇಶ್​ ಸ್ನೇಹ-ಸಂಬಂಧ ಗಟ್ಟಿಯಾಗಿತ್ತು. 1987ರ ಸಮಯದಿಂದಲೂ ಅವರು ಗೆಳೆಯರಾಗಿದ್ದರು. ಇಂದು (ಮಾ.30) ಟೈಗರ್​ ಪ್ರಭಾಕರ್​ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಹಳೇ ಘಟನೆಗಳನ್ನು ಜಗ್ಗೇಶ್​ ನೆನಪಿಸಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುವ ಜಗ್ಗೇಶ್ ಅವರು ಇಂದು ಪ್ರಭಾಕರ್​ ಬಗ್ಗೆ ಬರೆದುಕೊಂಡಿದ್ದಾರೆ. ಇಬ್ಬರೂ ಜೊತೆಯಾಗಿ ನಟಿಸಿದ ‘ಅರ್ಜುನ ಅಭಿಮನ್ಯ’ ಸಿನಿಮಾದ ಫೋಟೋವನ್ನು ಶೇರ್ ಮಾಡಿಕೊಳ್ಳುವ ಮೂಲಕ ಆ ದಿನಗಳ ನೆನಪಿನ ಬುತ್ತಿಯನ್ನು ಜಗ್ಗೇಶ್​​ ತೆರೆದಿಟ್ಟಿದ್ದಾರೆ. ತಮ್ಮ ಕಷ್ಟದ ಕಾಲದಲ್ಲಿ ಪ್ರಭಾಕರ್​ ಸಹಾಯ ಮಾಡಿದ್ದನ್ನು ಅವರು ಇಂದಿಗೂ ಮರೆತಿಲ್ಲ. ಪ್ರಭಾಕರ್​ಗೆ ಜಗ್ಗೇಶ್​ ಪ್ರಭಣ್ಣ ಎನ್ನುತ್ತಿದ್ದರು.

‘ಪ್ರಭಣ್ಣ ಮತ್ತು ನನ್ನ ಸ್ನೇಹ ಆದದ್ದು 1987ರ ಚಿತ್ರ ಅಗ್ನಿಪರ್ವದಿಂದ. ನನ್ನ ಪ್ರೇಮವಿವಾಹ ಆಗಿ ಯಾರ ಸಹಾಯ ಇಲ್ಲದೆ ಪರದಾಡಬೇಕಾದರೆ ಅಣ್ಣನಂತೆ ಭುಜಕೊಟ್ಟರು. ಅಲ್ಲಿಂದ ನನ್ನ ಬೆಳವಣಿಗೆ ನೋಡಿ ಆನಂದಿಸುತ್ತಿದ್ದರು. ಎಷ್ಟೋ ದಿನಗಳು ನಾವಿಬ್ಬರೇ ಗುಂಡುಪಾರ್ಟಿ ಸಹಪಾಟಿಗಳು! ಅವರ ಮರಣಯಾತ್ರೆವರೆಗೂ ಜೊತೆ ಇದ್ದೆ. ಅವರು ನನ್ನ ರಾಜಣ್ಣೆ ಎಂದು ಕರೆಯುತ್ತದ್ದ ಶೈಲಿ ಅದ್ಭುತ’ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

ಅಲ್ಲದೆ, ಜಗ್ಗೇಶ್​ ತಾಯಿ ನಿಧನರಾದಾಗ ಪ್ರಭಾಕರ್​ ಬಂದು ಸಂತೈಸಿದ್ದರಂತೆ. ಆ ಘಟನೆ ಬಗ್ಗೆಯೂ ಜಗ್ಗೇಶ್​ ನೆನಪಿಸಿಕೊಂಡಿದ್ದಾರೆ. ‘ನಾವಿಬ್ಬರು ನಟಿಸಿದ ಚಿತ್ರ ಅರ್ಜುನ ಅಭಿಮನ್ಯು. 1995ರ ಸಮಯದಲ್ಲಿ ಅಮ್ಮ ತೀರಿಕೊಂಡಳು. ಜಗವೇ ಶೂನ್ಯವಾಗಿ ದುಃಖಿಸುವಾಗ ಎರಡೂ ಕೈಗಳಿಂದ ನನ್ನ ತಬ್ಬಿ ಅಳುತ್ತ, ರಾಜಣ್ಣೆ ನೀನು ನನ್ನಂತೆಯೇ ಅಮ್ಮನನ್ನು ಕಳೆದುಕೊಂಡೆಯಾ ಎಂದಾಗ ನನ್ನ ದುಃಖದ ಕಟ್ಟೆಯೊಡೆದು ಹುಚ್ಚನಂತೆ ಅತ್ತುಬಿಟ್ಟೆ. ಅಂಥ ಕರುಣಾಮಯಿ ಪ್ರಭಣ್ಣ ನಿಮಗೆ ಹುಟ್ಟುಹಬ್ಬದ ಶುಭಾಶಯ. ನಿಮ್ಮ ಪ್ರೀತಿ ಅವಿಸ್ಮರಣೀಯ’ ಎಂದು ಪ್ರಭಾಕರ್​ ಅವರನ್ನು ಜಗ್ಗೇಶ್​ ಸ್ಮರಿಸಿಕೊಂಡಿದ್ದಾರೆ.

1967ರಿಂದ ನಟನೆ ವೃತ್ತಿ ಆರಂಭಿಸಿದ ಪ್ರಭಾಕರ್​ ಆರಂಭದಲ್ಲಿ ವಿಲನ್​ ಪಾತ್ರಗಳನ್ನು ಮಾಡುತ್ತಿದ್ದರು. ನಂತರ ಹೀರೋ ಆಗಿ ಬಡ್ತಿ ಪಡೆದು ಮಿಂಚಿದರು. ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲೂ ಅವರಿಗೆ ಅಪಾರ ಬೇಡಿಕೆ ಇತ್ತು. 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಇಂದಿಗೂ ಪ್ರಭಾಕರ್​ ಅವರ ಚಿತ್ರಗಳನ್ನು ಸಿನಿಪ್ರಿಯರು ಇಷ್ಟಪಡುತ್ತಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ನಟ ಜಗ್ಗೇಶ್​-ಪರಿಮಳಾ ಮದುವೆಗೆ ಈಗ 37 ವರ್ಷ!

ಕಾಂಗ್ರೆಸ್​ ಸೇರಿದ ಮೇಲೆ ನಾಲ್ಕು ನಿವೇಶನ ಮಾರಾಟ ಮಾಡಿದೆ- ಜಗ್ಗೇಶ್​​ ಬೇಸರ

Published On - 11:41 am, Tue, 30 March 21