ಸಿನಿಮಾ: ಪೊಗರು
ಪಾತ್ರವರ್ಗ: ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ, ರವಿ ಶಂಕರ್, ಪವಿತ್ರಾ ಲೋಕೇಶ್, ಸಂಪತ್ ರಾಜ್, ಡಾಲಿ ಧನಂಜಯ್, ಚಿಕ್ಕಣ್ಣ, ಕುರಿ ಪ್ರತಾಪ್, ಮಯೂರಿ
ನಿರ್ದೇಶಕರು: ನಂದ ಕಿಶೋರ್
ನಿರ್ಮಾಪಕ: ಬಿಕೆ ಗಂಗಾಧರ್
ಸ್ಟಾರ್: 3/5
ಧ್ರುವ ಸರ್ಜಾ ನಟನೆಯ ಅದ್ದೂರಿ, ಬಹದ್ದೂರ್, ಭರ್ಜರಿ.. ಈ ಮೂರು ಚಿತ್ರಗಳಲ್ಲಿ ಹೈಲೈಟ್ ಆಗಿದ್ದು ಮಾಸ್ ಅಂಶಗಳು. ಈ ಮೂರು ಚಿತ್ರಗಳದ್ದು ಒಂದೇ ರೀತಿಯ ಪ್ಯಾಟರ್ನ್ ಇತ್ತು. ಈಗ ರಿಲೀಸ್ ಆಗಿರುವ ‘ಪೊಗರು’ ಸಿನಿಮಾ ಮೂಲಕ ಧ್ರುವ ಸರ್ಜಾ ಈ ಪ್ಯಾಟರ್ನ್ಅನ್ನು ಬ್ರೇಕ್ ಮಾಡೋಕೆ ಹೋಗಿದ್ದಾರೆ. ಇದಕ್ಕಾಗಿಯೇ ಪೊಗರು ಸಿನಿಮಾದಲ್ಲಿ ಮಾಸ್ ಅಂಶದ ಜತೆಗೆ ತಾಯಿ ಸೆಂಟಿಮೆಂಟ್ ಕೂಡ ಸೇರಿಕೊಂಡಿದೆ. ಆದರೆ, ಸಿನಿಮಾದುದ್ದಕ್ಕೂ ಎಲ್ಲೋ ಈ ಮಿಶ್ರಣ ಸ್ವಲ್ಪ ಲಯತಪ್ಪಿದಂತೆ ಪ್ರೇಕ್ಷಕನಿಗೆ ಭಾಸವಾಗುತ್ತದೆ.
ಶಿವನಿಗೆ (ಧ್ರುವ ಸರ್ಜಾ) ಅಪ್ಪ-ಅಮ್ಮ ಎಂದರೆ ಪಂಚಪ್ರಾಣ. ಆದರೆ, ಒಂದು ದಿನ ಏಕಾಏಕಿ ಶಿವನ ಅಪ್ಪನನ್ನು ರೌಡಿಗಳು ಹತ್ಯೆ ಮಾಡಿ ಬಿಡುತ್ತಾರೆ. ಈ ವಿಚಾರ 10 ವರ್ಷಗಳ ನಂತರ ಶಿವನಿಗೆ ತಿಳಿಯುತ್ತದೆ. ಅಷ್ಟೇ ಅಲ್ಲ, ಆಗ ನಡೆಯುವ ಕೆಲ ಘಟನೆಗಳಿಂದ ಶಿವ ಸಂಪೂರ್ಣವಾಗಿ ಬದಲಾಗುತ್ತಾನೆ! ಶಿವನಿಗೆ ಆರಂಭದಿಂದ ಕೊನೆಯವರೆಗೂ ಒಂದೇ ಆಸೆ. ಮಾರ್ಗ ಯಾವುದೇ ಆಗಲಿ, ಹಣ ಮಾಡಬೇಕು.. ಇದಕ್ಕಾಗಿ, ಶಿವ ರೋಲ್-ಕಾಲ್ ಹಾದಿ ಹಿಡಿಯುತ್ತಾನೆ. ಊರಿನಲ್ಲಿ ಬಾರ್ ಓಪನ್ ಮಾಡುತ್ತಿರುವ ರೌಡಿಗಳ ವಿರುದ್ಧ ತಿರುಗಿ ಬೀಳುವ ಶಿವ, ನಂತರ ಹಣಕ್ಕಾಗಿ ಅವರ ಜತೆಯೇ ಕೈ ಜೋಡಿಸುತ್ತಾನೆ. ಈ ರೀತಿಯ ಅನೇಕ ದೃಶ್ಯಗಳು ಸಿನಿಮಾದಲ್ಲಿವೆ. ಇವುಗಳನ್ನು ವೈಭವೀಕರಿಸುವದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗುತ್ತದೆ ಎನ್ನುವ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು.
ಮಾಸ್ ಪ್ರೇಕ್ಷಕರಿಗೆ ಹಬ್ಬದೂಟ
ನಾಲ್ಕು ವರ್ಷಗಳ ನಂತರ ಧ್ರುವ, ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಹೀಗಾಗಿ, ಸಿನಿಮಾ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅಂತೆಯೇ, ಈ ಸಿನಿಮಾ ಮಾಸ್ ಪ್ರೇಕ್ಷಕರಿಗೆ ಹೇಳಿ ಮಾಡಿಸಿದಂತಿದೆ. ಸಿನಿಮಾದಲ್ಲಿ ಬರುವ ಫೈಟ್ಗಳು ಮಾಸ್ ಪ್ರೇಕ್ಷಕರನ್ನು ಕುರ್ಚಿಯ ತುದಿಗಾಲಲ್ಲಿ ಕೂರಿಸುತ್ತದೆ.
ಕ್ಲೈಮ್ಯಾಕ್ಸ್ನಲ್ಲಿ ಬರುವ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ಗಳ ಫೈಟ್ ಸಿಳ್ಳೆಗಿಟ್ಟಿಸಿಕೊಳ್ಳುತ್ತದೆ. ಇನ್ನು, ಈ ಚಿತ್ರಕ್ಕಾಗಿ ಧ್ರುವ ಹಾಕಿರುವ ಎಫರ್ಟ್ ಎದ್ದು ಕಾಣುತ್ತದೆ. ಅವರು ಈ ಚಿತ್ರಕ್ಕಾಗಿ ತೂಕ ಇಳಿಸಿಕೊಂಡಿದ್ದು ಕೂಡ ಸಿನಿಮಾ ಹೈಲೈಟ್. ಸಿನಿಮಾದ ಬಹುತೇಕ ಶೂಟಿಂಗ್ ಸೆಟ್ನಲ್ಲೇ ನಡೆದಿದೆ. ಆದರೆ, ಎಲ್ಲಿಯೂ ಈ ವಿಚಾರ ಗೊತ್ತಾಗುವುದಿಲ್ಲ. ಕಾರಣ, ಸೆಟ್ಗಳು ಅಷ್ಟು ನೈಜವಾಗಿ ಮೂಡಿ ಬಂದಿದೆ ಮತ್ತು ವಿಜಯ್ ಮಿಲ್ಟನ್ ಛಾಯಾಗ್ರಹಣದ ಚಾಕಚಕ್ಯತೆ ಎದ್ದು ಕಾಣುತ್ತದೆ.
ಧ್ರುವ ಸರ್ಜಾ ಈ ಮೊದಲಿನಿಂದಲೂ ಪೊಗರು ಚಿತ್ರದಲ್ಲಿ ಎಮೋಷನ್ಸ್ಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ ಎಂದು ಹೇಳುತ್ತಲೇ ಬಂದಿದ್ದರು. ಅಂತೆಯೇ ಇಡೀ ಚಿತ್ರದಲ್ಲಿ ತಂದೆ, ತಾಯಿ, ತಂಗಿ ಸೆಂಟಿಮೆಂಟ್ ಹೈಲೈಟ್. ಆದರೆ, ಕೆಲವೊಂದು ದೃಶ್ಯಗಳಲ್ಲಿ ಸೆಂಟಿಮೆಂಟ್ ತೋರಿಸೋಕೆ ಹೋಗಿ ನಿರ್ದೇಶಕರು ಎಲ್ಲೋ ಲಯ ತಪ್ಪಿದಂತೆ ಅನಿಸುತ್ತದೆ. ಕೆಲ ದೃಶ್ಯಗಳನ್ನು ಅನವಶ್ಯಕವಾಗಿ ತುರುಕಿದಂತೆ ಕಾಣುವುದಂತೂ ಸುಳ್ಳಲ್ಲ.
ತಪ್ಪಿದ ನೇಟಿವಿಟಿ..
ಇಡೀ ಚಿತ್ರದ ಕತೆ ನಡೆಯೋದು ಮಂಗಳೂರಿನಲ್ಲಿ. ಸಿನಿಮಾದ ಕತೆ ಮಂಗಳೂರಲ್ಲೇ ನಡೆಯುತ್ತಿದೆ ಎಂದು ಹೇಳುವುದಕ್ಕೆ ಪ್ರತಿ ದೃಶ್ಯದಲ್ಲೂ ಕಾಣುವ ಮಂಗಳೂರು ಬೋರ್ಡ್ ಸಾಕ್ಷ್ಯ ನೀಡುತ್ತದೆ. ಆದರೆ, ಅಲ್ಲಿಯ ಭಾಷೆಯಾಗಲಿ, ಅಲ್ಲಿಯ ಸಂಸ್ಕೃತಿಯಾಗಲಿ ಮಂಗಳೂರನ್ನು ಪ್ರತಿನಿಧಿಸುವುದೇ ಇಲ್ಲ. ನಿರ್ದೇಶಕರು ಮಂಗಳೂರನ್ನೇ ಯಾಕೆ ಆಯ್ಕೆ ಮಾಡಿಕೊಂಡರೋ ಗೊತ್ತಿಲ್ಲ. ಹೀಗೆ ಊರನ್ನು ಆಯ್ಕೆ ಮಾಡಿಕೊಂಡ ಮೇಲೆ ಅದಕ್ಕೆ ತಕ್ಕ ನ್ಯಾಯ ಒದಗಿಸುವ ಕೆಲಸವನ್ನು ಮಾಡುವುದು ನಿರ್ದೇಶಕರ ಕರ್ತವ್ಯ. ಆದರೆ, ನಂದ ಕಿಶೋರ್ ಇದರಲ್ಲಿ ಎಡವಿದಂತೆ ಕಾಣುತ್ತದೆ.
ಮೆಚ್ಚುಗೆ ಗಳಿಸಿಕೊಳ್ಳುವ ಸಂಭಾಷಣೆ
ಪೊಗರುಗೆ ಪ್ರಶಾಂತ್ ರಾಜಪ್ಪ ಬರೆದಿರುವ ಸಂಭಾಷಣೆ ಉತ್ತಮವಾಗಿ ಮೂಡಿ ಬಂದಿದೆ. ಒಂದು ಮಾಸ್ ಸಿನಿಮಾಗೆ ಬೇಕಾದ ಎಲ್ಲಾ ಡೈಲಾಗ್ಗಳು ಸಿನಿಮಾದಲ್ಲಿದೆ. ಚಿತ್ರದಲ್ಲಿ ಬರುವ ಚಿಕ್ಕಣ್ಣ, ಕುರಿ ಪ್ರತಾಪ್ ಸಾಕಷ್ಟು ನಗಿಸುತ್ತಾರೆ. ಆದರೆ, ಧ್ರುವ ಸರ್ಜಾ ಡೈಲಾಗ್ ಡೆಲಿವರಿ ಅವರ ಹಳೆಯ ಚಿತ್ರಗಳನ್ನೇ ನೆನಪಿಸುತ್ತವೆ.
ಚಂದನ್ ಶೆಟ್ಟಿ ಮ್ಯೂಸಿಕ್ಗೆ ಮೆಚ್ಚುಗೆ
ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಸಿನಿಮಾದಲ್ಲಿ ಬರುವ ಖರಾಬು, ಪೊಗರು ಟೈಟಲ್ ಸಾಂಗ್ ಸಾಕಷ್ಟು ಮನರಂಜನೆ ನೀಡುತ್ತದೆ. ಈ ಹಾಡುಗಳಿಗೆ ಧ್ರುವ ಸಖತ್ ಆಗಿ ಸ್ಟೆಪ್ ಹಾಕಿದ್ದು, ಪ್ರೇಕ್ಷಕರಿಂದ ಸಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ. ಹರಿಕೃಷ್ಣ ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್.
ಹಾಗೆ ಬಂದು, ಹೀಗೆ ಹೋಗುತ್ತೆ ಪಾತ್ರಗಳು..
ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಡಾಲಿ ಧನಂಜಯ್, ಮಯೂರಿ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ಇವರ ಪಾತ್ರಗಳು ತೆರೆಮೇಲೆ ಹೆಚ್ಚು ಹೊತ್ತು ನಿಲ್ಲುವುದೇ ಇಲ್ಲ.. ಸಿನಿಮಾದುದ್ದಕ್ಕೂ ಧ್ರುವ ಸರ್ಜಾ ಒಬ್ಬರೇ ತೆರೆ ಮೇಲೆ ರಾರಾಜಿಸುತ್ತಾರೆ.
ಡಾಲಿ ಧನಂಜಯ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ವಿಚಾರ ಕೇಳಿ ಅಭಿಮಾನಿಗಳು ಖುಷಿ ಆಗಿದ್ದರು. ಆದರೆ, ಅವರು ಮೂರು ಮತ್ತೊಂದು ದೃಶ್ಯದಲ್ಲಿ ಮಾತ್ರ ಕಾಣಿಸಿ ಮಾಯವಾಗುತ್ತಾರೆ. ಅವರಿಗೆ ತೆರೆಮೇಲೆ ಕಾಣಿಸಿಕೊಳ್ಳೋಕೆ ಇನ್ನೂ ಹೆಚ್ಚಿನ ಅವಕಾಶ ಕೊಡಬಹುದಿತ್ತು ಎಂದು ಪ್ರೇಕ್ಷಕರಿಗೆ ಅನಿಸದೆ ಇರದು. ಕಳೆದ ವರ್ಷ ತೀರಿಕೊಂಡ ಬುಲೆಟ್ ಪ್ರಕಾಶ್ ಕೂಡ ಈ ಚಿತ್ರದಲ್ಲಿ ಒಂದು ದೃಶ್ಯದಲ್ಲಿ ಬಂದು ಹೋಗುತ್ತಾರೆ. ರಾಘವೇಂದ್ರ ರಾಜ್ಕುಮಾರ್ ಅನಾಥಾಶ್ರಮ ನಡೆಸುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಶಿವ ಹಾದಿ ತಪ್ಪಿದಾಗೆಲ್ಲ ಅವನನ್ನು ಮತ್ತೆ ಸರಿ ದಾರಿಗೆ ತರುವ ಪ್ರಯತ್ನವನ್ನು ರಾಘವೇಂದ್ರ ರಾಜ್ಕುಮಾರ್ ಮಾಡುವ ಮೂಲಕ ಪಾತ್ರವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ.
ಈ ಹಿಂದಿನ ಮೂರು ಚಿತ್ರಗಳಂತೆ ಈ ಚಿತ್ರದಲ್ಲೂ ಧ್ರುವ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈಗ ಪೊಗರು ಚಿತ್ರಕ್ಕೆ ಸೆಂಟಿಮೆಂಟ್ ಕೂಡ ಸೇರಿಕೊಂಡಿದೆ. ನಿಮಗೆ ಮಾಸ್ ಡೈಲಾಗ್, ಸೆಂಟಿಮೆಂಟ್ ಸಿನಿಮಾಗಳು ಇಷ್ಟವಾಗುತ್ತದೆ ಎಂದಾದರೆ, ನೀವು ಈ ಚಿತ್ರವನ್ನು ನೋಡಬಹುದು.
ಇದನ್ನು ಓದಿ: Pogaru: ಫೆ.19ರಂದು 1200 ಥಿಯೇಟರ್ಗಳಲ್ಲಿ ಬಿಡುಗಡೆಯಾಗಲಿದೆ ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅಭಿನಯದ ಪೊಗರು
Published On - 12:47 pm, Fri, 19 February 21