AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಪ್ರಸಾದ್​ಗೆ ಸೇರಿದ ನಾಲ್ಕು ಮೊಬೈಲ್ ವಶ, ಸಾವಿನ ಬಗ್ಗೆ ಕೆಲ ಅಂಶ ಬಹಿರಂಗ

Director Guruprasad: ನಿರ್ದೇಶಕ ಗುರುಪ್ರಸಾದ್ ನಿಧನದ ಸುದ್ದಿ ಭಾನುವಾರ ಹೊರಬಿದ್ದಿತ್ತು. ಗುರುಪ್ರಸಾದ್ ಶವ ಅವರ ಅಪಾರ್ಟ್​​ಮೆಂಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರ ತನಿಖೆಯಲ್ಲಿ ಕೆಲ ಮಹತ್ವದ ಅಂಶಗಳು ಹೊರಬಂದಿವೆ.

ಗುರುಪ್ರಸಾದ್​ಗೆ ಸೇರಿದ ನಾಲ್ಕು ಮೊಬೈಲ್ ವಶ, ಸಾವಿನ ಬಗ್ಗೆ ಕೆಲ ಅಂಶ ಬಹಿರಂಗ
ಗುರುಪ್ರಸಾದ್
ಮಂಜುನಾಥ ಸಿ.
|

Updated on: Nov 05, 2024 | 3:57 PM

Share

‘ಮಠ’, ‘ಎದ್ದೇಳು ಮಂಜುನಾಥ’ ಅಂಥಹಾ ಕಲ್ಟ್ ಕಾಮಿಡಿ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಗುರುಪ್ರಸಾದ್ ನಿಧನ ಹೊಂದಿರುವ ಸುದ್ದಿ ಭಾನುವಾರ ಬಹಿರಂಗವಾಯ್ತು. ಮಾದನಾಯಕನಹಳ್ಳಿ ಬಳಿಯ ನ್ಯೂ ಹೆವೆನ್ ರಿವಾ ಕ್ಲಬ್ ಹೌಸ್ ಅಪಾರ್ಟ್​ಮೆಂಟ್​ನಲ್ಲಿ ಗುರುಪ್ರಸಾದ್ ನೇಣಿಗೆ ಶರಣಾಗಿದ್ದರು ಎನ್ನಲಾಗಿದೆ. ಕೆಲ ದಿನಗಳ ಹಿಂದೆಯೇ ಗುರುಪ್ರಸಾದ್ ನೇಣು ಬಿಗಿದುಕೊಂಡಿದ್ದು, ಭಾನುವಾರದಂದು ವಿಷಯ ಬಹಿರಂಗವಾಗಿದೆ. ಗುರುಪ್ರಸಾದ್, ಸಾವಿನ ಕುರಿತು ತನಿಖೆ ನಡೆಸುತ್ತಿರುವ ಮಾದನಾಯಕನಹಳ್ಳಿ ಪೊಲೀಸರು ಕೆಲ ಮಹತ್ವದ ಮಾಹಿತಿ ಮತ್ತು ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ.

ಪೊಲೀಸರ ಈವರೆಗಿನ ತನಿಖೆಯಿಂದ ಕೆಲ ವಿಷಯಗಳು ಪತ್ತೆಯಾಗಿವೆ. ಗುರುಪ್ರಸಾದ್ ಅಕ್ಟೋಬರ್ 29ರಂದೇ ನೇಣು ಬಿಗಿದುಕೊಂಡಿರುವ ಸಾಧ್ಯತೆ ಇದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬರುತ್ತಿದೆ. ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಮೊದಲೇ ನಿಶ್ಚಯಿಸಿದಂತಿದ್ದ ಗುರುಪ್ರಸಾದ್ ಅದೇ ದಿನ ಹಗ್ಗ ಮತ್ತು ಕರ್ಟನ್ ಅನ್ನು ಖರೀದಿಸಿ ತಂದಿದ್ದಾರೆ. ಮನೆಯನ್ನು ಒಳಗಿನಿಂದ ಚಿಲಕ ಹಾಕಿಕೊಂಡು, ಕರ್ಟನ್ ಅನ್ನು ಕಿಟಕಿಗಳಿಗೆ ಹಾಕಿ ಆ ನಂತರ ಹಗ್ಗವನ್ನು ಒಂದು ತುದಿಯನ್ನು ಮೇಲೆ ಕಟ್ಟಿ, ಇನ್ನೊಂದು ತುದಿಯ ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡು ದಿವಾನದ ಮೇಲಿನಿಂದ ಕೆಳಗೆ ಹಾರಿದ್ದಾರೆ ಎಂದು ಪ್ರಾಥಮಿಕ ತನಿಖೆ ನಡೆಸಿರುವ ಪೊಲೀಸರು ಅಂದಾಜಿಸಿದ್ದಾರೆ. ನಿಖರ ಮಾಹಿತಿ ತನಿಖೆ ಮುಂದುವರೆದ ಮೇಲೆ ತಿಳಿದು ಬರಲಿದೆ.

ಗುರುಪ್ರಸಾದ್ ನೇಣು ಬಿಗಿದುಕೊಂಡಿದ್ದ ಫ್ಲ್ಯಾಟ್​ನಲ್ಲಿದ್ದ ಕೆಲವು ವಸ್ತುಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಗುರುಪ್ರಸಾದ್​ಗೆ ಸೇರಿದ ನಾಲ್ಕು ಮೊಬೈಲ್ ಫೋನ್, ಟ್ಯಾಬ್ಲೆಟ್​ಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಎಲ್ಲ ಫೋನುಗಳನ್ನು ಎಫ್​ಎಸ್​ಎಲ್ ಗೆ ಕಳಿಸಲಾಗಿದ್ದು, ಡಾಟಾ ರಿಟ್ರೀವ್ ಮಾಡುವ ಪ್ರಯತ್ನ ನಡೆಸಲಿದ್ದಾರೆ. ಯಾರಾದರೂ ಬೆದರಿಕೆ ಒಡ್ಡಿದ್ದರೆ, ಗುರುಪ್ರಸಾದ್ ಯಾರಿಗಾದರೂ ಸಂದೇಶ ಕಳಿಸಿದ್ದರೆ ಇತ್ಯಾದಿ ವಿಷಯಗಳ ಬಗ್ಗೆ ತನಿಖೆ ಮಾಡಲಿದ್ದಾರೆ.

ಇದನ್ನೂ ಓದಿ:‘ಆನ್​ಲೈನ್ ಗೇಮ್​ನಲ್ಲಿ ಗುರುಪ್ರಸಾದ್ 70 ಲಕ್ಷ ರೂಪಾಯಿ ಕಳೆದುಕೊಂಡಿದ್ದ’: ಜಗ್ಗೇಶ್

ಗುರುಪ್ರಸಾದ್ ಸಾಲದ ಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ಮತ್ತು ವೈಯಕ್ತಿಕ ಕಾರಣಕ್ಕೆ ಭಾರಿ ದೊಡ್ಡ ಮೊತ್ತವನ್ನು ಗುರುಪ್ರಸಾದ್ ಸಾಲವಾಗಿ ಪಡೆದಿದ್ದರು. ಸಾಲ ನೀಡಿದವರು ವರ್ಷಗಳಿಂದಲೂ ಗುರುಪ್ರಸಾದ್ ಹಿಂದೆ ಬಿದ್ದಿದ್ದರು, ಕೆಲವರು ನ್ಯಾಯಾಲಯದ ಮೆಟ್ಟಿಲು ಸಹ ಏರಿದ್ದರು. ಕೆಲವರು ಠಾಣೆಯಲ್ಲಿ ದೂರು ನೀಡಿದ್ದರು. ಸಾಲಗಾರರಿಂದಲ ತಪ್ಪಿಸಿಕೊಳ್ಳಲೆಂದೇ ಗುರುಪ್ರಸಾದ್ ಸತತವಾಗಿ ಮನೆ ಬದಲಾಯಿಸುತ್ತಲೇ ಇದ್ದರು ಎನ್ನಲಾಗಿದೆ. ಈಗ ಸಾಲದ ಕಾರಣದಿಂದಲೇ ಗುರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಗುರುಪ್ರಸಾದ್ ‘ಮಠ’, ‘ಎದ್ದೇಳು ಮಂಜುನಾಥ’, ‘ಡೈರೆಕ್ಟರ್ಸ್ ಸ್ಪೆಷಲ್’, ‘ಎರಡನೇ ಸಲ’ ಮತ್ತು ಇದೇ ವರ್ಷ ಬಿಡುಗಡೆ ಆದ ‘ರಂಗನಾಯಕ’ ಸಿನಿಮಾ ನಿರ್ದೇಶನ ಮಾಡಿದ್ದರು. ಜಗ್ಗೇಶ್ ನಟಿಸಿದ್ದ ‘ರಂಗನಾಯಕ’ ಸಿನಿಮಾ ಹೀನಾಯ ಸೋಲು ಕಂಡಿತು. ಸಿನಿಮಾದ ನಾಯಕ ಜಗ್ಗೇಶ್, ಪ್ರೇಕ್ಷಕರ ಕ್ಷಮೆ ಕೇಳಿದರು. ‘ಎದ್ದೇಳು ಮಂಜುನಾಥ 2’ ಸಿನಿಮಾ ನಿರ್ದೇಶನ ಮಾಡಿದ್ದ ಗುರುಪ್ರಸಾದ್ ಸಿನಿಮಾ ಬಿಡುಗಡೆಗೆ ಮುಂಚೆ ನಿಧನ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ