AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತಾರಕೇಶ್ವರ’ ಪಾತ್ರದಲ್ಲಿ ಹಿರಿಯ ನಟ ಗಣೇಶ್‌ ರಾವ್; ಪೌರಾಣಿಕ ಸಿನಿಮಾದ ಟ್ರೇಲರ್ ರಿಲೀಸ್

300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ಗಣೇಶ್ ​ರಾವ್​ ಕೇಸರ್​ಕರ್​ ಅವರು ಈಗ ‘ತಾರಕೇಶ್ವರ’ ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಅವರೇ ನಿರ್ಮಾಣ ಕೂಡ ಮಾಡಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದ ಟ್ರೇಲರ್​ ರಿಲೀಸ್ ಮಾಡಲಾಗಿದೆ. ಪುರುಷೋತ್ತಮ್ ಓಂಕಾರ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.

‘ತಾರಕೇಶ್ವರ’ ಪಾತ್ರದಲ್ಲಿ ಹಿರಿಯ ನಟ ಗಣೇಶ್‌ ರಾವ್; ಪೌರಾಣಿಕ ಸಿನಿಮಾದ ಟ್ರೇಲರ್ ರಿಲೀಸ್
‘ತಾರಕೇಶ್ವರ’ ಸಿನಿಮಾ ತಂಡ
ಮದನ್​ ಕುಮಾರ್​
|

Updated on: Nov 05, 2024 | 7:51 PM

Share

ಕನ್ನಡದಲ್ಲಿ ಹೊಸದೊಂದು ಪೌರಾಣಿಕ, ಭಕ್ತಿಪ್ರದಾನ ಸಿನಿಮಾ ಸಿದ್ಧವಾಗಿದೆ. ‘ತಾರಕೇಶ್ವರ’ ಎಂಬುದು ಅದರ ಶೀರ್ಷಿಕೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ಈ ಸಿನಿಮಾದಲ್ಲಿ ಗಣೇಶ್‌ ರಾವ್ ಕೇಸರ್‌ಕರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಅವರು ಮಾತನಾಡಿದರು. ‘ಸೆನ್ಸಾರ್‌ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಯಾವುದೇ ದೃಶ್ಯಕ್ಕೆ ಆಕ್ಷೇಪ ಎತ್ತಿಲ್ಲ. ‘ಯು’ ಪ್ರಮಾಣಪತ್ರ ಸಿಕ್ಕಿದೆ. ನಾನು ಎಂದಿಗೂ ಹಣಕ್ಕೆ ಪ್ರಾಮುಖ್ಯತೆ ನೀಡಿಲ್ಲ. ಉತ್ತಮ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡಬೇಕು ಎಂಬ ಉದ್ದೇಶದಿಂದ ನಿರ್ಮಾಣ ಮಾಡಿದ್ದೇನೆ. ಪೌರಾಣಿಕ ಸಿನಿಮಾ ಮಾಡುವುದು ಸುಲಭವಲ್ಲ’ ಎಂದು ಅವರು ಹೇಳಿದರು.

ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಟ್ರೇಲರ್​ ರಿಲೀಸ್​ ಕಾರ್ಯಕ್ರಮ ನಡೆಯಿತು. ವೇದಾಂತ ಆಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ಮೊದಲ ಟ್ರೇಲರ್ ಬಿಡುಗಡೆ ಮಾಡಿದರೆ. ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಅವರು 2ನೇ ಟ್ರೇಲರ್​ ರಿಲೀಸ್ ಮಾಡಿದರು. ಬಳಿಕ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ‍್ಕೆ ವಿಶ್ವನಾಥ್, ಕನ್ನಡ ಸಂಘದ ಅಧ್ಯಕ್ಷ ಬಸವರಾಜ, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಮೂರ್ತಿ ಮುಂತಾದವರು ಭಾಗಿ ಆಗಿದ್ದರು.

‘ತಾರಕೇಶ್ವರ’ ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ.ಈ ಚಿತ್ರಕ್ಕೆ ಪುರುಷೋತ್ತಮ್ ಓಂಕಾರ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ‘ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ ಕೂಡ ತಪ್ಪಸ್ಸು ಮಾಡಿ ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ಆ ಕಥೆಯನ್ನು ಕುತೂಹಲದ ಸನ್ನಿವೇಶಗಳ ಮೂಲಕ ತೋರಿಸಲಾಗಿದೆ. ಗಣೇಶ್‌ರಾವ್ ಕೇಸರ್‌ಕರ್‌ ಅವರು 4 ಪಾತ್ರಗಳಲ್ಲಿ ನಟಿಸಿದ್ದಾರೆ. ಅವರ ಮಗ ಪ್ರಜ್ವಲ್ ಕೇಸರ್‌ಕರ್ ಅವರು ಇಂದ್ರನಾಗಿ ಅಭಿನಯಿಸಿದ್ದಾರೆ’ ಎಂದು ಪುರುಷೋತ್ತಮ್ ಓಂಕಾರ್ ಮಾಹಿತಿ ನೀಡಿದರು.

ಇದನ್ನೂ ಓದಿ: ಜಗತ್ತು ಕಂಡ ಪೌರಾಣಿಕ ಪ್ರೇಮ ಕಥೆಗಳು; ಪ್ರೀತಿಯನ್ನು ಪಡೆಯಲು ಆದಿ ಶಕ್ತಿ ಕೂಡ ತಪಸ್ಸು ಮಾಡ್ಬೇಕಾಯ್ತು

ಈ ಸಿನಿಮಾದಲ್ಲಿ ರೂಪಾಲಿ ಅವರು ನಾಯಕಿ ಆಗಿದ್ದಾರೆ. ರಾಜನ ಮಗಳಾಗಿ, ಶಿವ ಭಕ್ತೆಯಾಗಿ, ಪಾರ್ವತಿಯಾಗಿ ಅವರು ಬಣ್ಣ ಹಚ್ಚಿದ್ದಾರೆ. ಬಾಲ ಸುಬ್ರಹ್ಮಣ್ಯನಾಗಿ ಬಾಲ ನಟಿ ಋತುಸ್ಪರ್ಶ ನಟಿಸಿದ್ದಾರೆ. ಸುಮಿತಾ ಪ್ರವೀಣ್, ವಿಕ್ರಂ ಸೂರಿ, ನಮಿತಾ ರಾವ್, ಅನ್ನಪೂರ್ಣ, ಶಂಕರ ಭಟ್, ಶ್ರೀವಿಷ್ಣು, ಎನ್.ಟಿ. ರಾಮಸ್ವಾಮಿ, ಜಿಮ್‌ ಶಿವು, ಗುರುರಾಜ್, ಹೆಜ್ಜಾಜಿ ಮಹಾದೇವ, ವೀರೇಂದ್ರ ಬೆಳ್ಳಿಚುಕ್ಕಿ, ಬಸವರಾಜ ದೇಸಾಯಿ, ಮಧು ಕಾರ್ತಿಕ್, ರಾಜೇಶ್ವರಿ ಪಾಂಡೆ, ಗೀತಾ, ರಕ್ಷಾ ಗೌಡ, ರಂಜಿತಾ, ರೂಪ ಶ್ರೀರಾಮ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಕಪಿಲ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ತುಳಜಾಬಾಯಿ, ರೂಪಾ ಎಸ್. ದೊಡ್ಮನಿ, ಬಸವರಾಜ್ ದೇಸಾಯಿ, ಡಾ. ಸುಮಿತಾ ಪ್ರವೀಣ್ ಅವರು ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ರಾಜ್‌ ಭಾಸ್ಕರ್ ಅವರು ಸಂಗೀತ ನೀಡಿದ್ದಾರೆ. ಮುತ್ತುರಾಜ್ ಛಾಯಾಗ್ರಹಣ ಮಾಡಿದ್ದು, ಸಂಕಲನದ ಜವಾಬ್ದಾರಿಯನ್ನು ಅನಿಲ್‌ ಕುಮಾರ್ ನಿಭಾಯಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.