ಸತ್ಯವಾನ್ ಸಾವಿತ್ರಿ(Sathyavan Savithri): ಮಾದ್ರ ದೇಶದ ರಾಜಕುಮಾರಿ ಸಾವಿತ್ರಿ, ಆಳಲು ದೇಶವಿಲ್ಲದೆ ಕಾಡು ಸೇರಿದ್ದ ಕುರುಡ ರಾಜ ಬಲ್ವನ ಪುತ್ರ ಸತ್ಯವಾನನನ್ನು ವಿವಾಹವಾಗಲು ನಿರ್ಧರಿಸುತ್ತಾಳೆ. ಆದರೆ, ನಾರದರು ಸತ್ಯವಾನನಿಗೆ ಒಂದೇ ವರ್ಷ ಆಯಸ್ಸಿರುವುದೆಂದು ಸಾವಿತ್ರಿಗೆ ತಿಳಿಸುತ್ತಾರೆ. ಅದು ತಿಳಿದೂ ಕೂಡಾ ಸಾವಿತ್ರಿ ತಾನು ಮನಸ್ಸಿನಲ್ಲೇ ಆತನನ್ನು ಪತಿಯಾಗಿ ಸ್ವೀಕರಿಸಿದ್ದೇನೆಂದು ಹೇಳಿ ವಿವಾಹವಾಗುತ್ತಾಳೆ. ಆದರೆ, ಈ ಪ್ರೇಮಕತೆ ಇಷ್ಟಕ್ಕೇ ನಿಲ್ಲುವುದಿಲ್ಲ. ವಿವಾಹವಾದ ನಂತರ ರಾಜವೈಭೋಗ ಬಿಟ್ಟು ಅತ್ತೆ ಮಾವ ಪತಿಯ ಸೇವೆ ಮಾಡುತ್ತಾ ಕಾಡಿನಲ್ಲಿ ವಾಸಿಸುವ ಸಾವಿತ್ರಿ ಪತಿಯ ಪ್ರಾಣ ಉಳಿಸಲು ಹಲವಾರು ವೃಥಗಳನ್ನು ಆಚರಿಸುತ್ತಾಳೆ. ಅಷ್ಟಾಗಿಯೂ ಒಂದು ದಿನ ಸತ್ಯವಾನನ ಪ್ರಾಣ ತೆಗೆದುಕೊಂಡು ಹೋಗಲು ಯಮ ಬಂದಾಗ, ಆತನೊಂದಿಗೆ ವಾದಿಸಿ, ಮಾತಿನಲ್ಲೇ ಆತನನ್ನು ಸೋಲಿಸಿ ಪತಿಯ ಪ್ರಾಣವನ್ನು ಹಿಂದೆ ಪಡೆದುಕೊಂಡು ಬರುತ್ತಾಳೆ ಸಾವಿತ್ರಿ. ತನ್ನ ಅಚಲ ಪ್ರೇಮದಿಂದ ಪತಿಯ ಪ್ರಾಣವನ್ನುಳಿಸುತ್ತಾಳೆ.