ಆರೋಪಿ ಬದಲು ಸಾಕ್ಷಿ ಮಾಡುವಂತೆ ದರ್ಶನ್ ಪ್ರಕರಣದಲ್ಲಿ ರಾಜಕಾರಣಿಗಳ ಒತ್ತಡ
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ ಅನ್ನು ಬಂಧಿಸದಂತೆ ಪೊಲೀಸರ ಮೇಲೆ ಕೆಲ ರಾಜಕಾರಣಿಗಳು, ಸ್ಯಾಂಡಲ್ವುಡ್ನ ಕೆಲವು ದೊಡ್ಡ ವ್ಯಕ್ತಿಗಳು ಒತ್ತಡ ಹೇರುತ್ತಿದ್ದಾರೆ ಎನ್ನಲಾಗುತ್ತಿದೆ.
ಅಭಿಮಾನಿಯನ್ನೇ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ (Darshan Thoogudeepa) ಅನ್ನು ಪೊಲೀಸರು ಬಂಧಿಸಿದ್ದಾರೆ. ಇಂದು (ಜೂನ್ 11) ಬೆಳಿಗ್ಗೆ ಮೈಸೂರಿಗೆ ತೆರಳಿ ರ್ಯಾಡಿಸನ್ ಹೋಟೆಲ್ನಲ್ಲಿ ತಂಗಿದ್ದ ದರ್ಶನ್ ಅನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಬೆಂಗಳೂರಿಗೆ ಕರೆಸಿ ವಿಚಾರಣೆ ನಡೆಸಿದ ಬಳಿಕ ದರ್ಶನ್ ಅನ್ನು ಬಂಧಿಸಿದ್ದಾರೆ. ಸಂಜೆ ನಾಲ್ಕು ಗಂಟೆ ವೇಳೆಗೆ ದರ್ಶನ್ರ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ಆರಂಭಿಸಿದ್ದಾರೆ. ಆದರೆ ದರ್ಶನ್ ಪ್ರಕರಣದಲ್ಲಿ ರಾಜಕಾರಣಿಗಳು ಕೆಲವರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿ (ಜೂನ್ 10) ಯಿಂದಲೇ ಈ ಪ್ರಕರಣ ಕುರಿತಾಗಿ ಪೊಲೀಸರ ಮೇಲೆ ಕೆಲ ರಾಜಕಾರಣಿಗಳು ಹಾಗೂ ಸ್ಯಾಂಡಲ್ವುಡ್ನ ಪ್ರಮುಖರು ಒತ್ತಡ ಹೇರುವ ಪ್ರಯತ್ನ ಮಾಡುತ್ತಿದ್ದಾರೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಅನ್ನು ಆರೋಪಿಯ ಬದಲಿಗೆ ಸಾಕ್ಷಿಯನ್ನಾಗಿ ಮಾಡಿ ಎಂದು ಸಹ ಕೆಲ ರಾಜಕಾರಣಿಗಳು ಪೊಲೀಸರ ಮೇಲೆ ಒತ್ತಡ ಹೇರಿದ್ದಾರಂತೆ. ಆದರೆ ಈ ಒತ್ತಡಗಳಿಗೆಲ್ಲ ಬಗ್ಗದ ಪೊಲೀಸರು, ದರ್ಶನ್ ಅನ್ನು ಪ್ರಕರಣದ ಮುಖ್ಯ ಆರೋಪಿಯನ್ನಾಗಿ ಪರಿಗಣಿಸಿ ಎಫ್ಐಆರ್ ದಾಖಲು ಮಾಡಿದ್ದಾರೆ.
ಪೊಲೀಸ್ ಆಯುಕ್ತ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕೆಲ ರಾಜಕಾರಣಿಗಳು ಒತ್ತಡ ಹೇರಿದ್ದಾರೆ ಎನ್ನಲಾಗುತ್ತಿದೆ. ಆದರೆ ಎಲ್ಲ ಸಾಕ್ಷ್ಯಗಳು, ಇತರ ಆರೋಪಿಗಳ ಹೇಳಿಕೆಗಳು ದರ್ಶನ್ ಅವರೇ ಮುಖ್ಯ ಆರೋಪಿ ಎಂದು ಸಾರಿ ಹೇಳುತ್ತಿರುವ ಕಾರಣ ದರ್ಶನ್ ಅನ್ನೇ ಎ1 ಅನ್ನಾಗಿ ಪೊಲೀಸರು ಮಾಡುವ ಸಾಧ್ಯತೆಯೇ ದಟ್ಟವಾಗಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆಯಾದಾಗ ಇರಲಿಲ್ಲ ಎಂದಿದ್ದ ದರ್ಶನ್ ಈಗ ಪೊಲೀಸರ ಬಳಿ ಹೇಳಿದ್ದೇ ಬೇರೆ!
ದರ್ಶನ್ಗೆ ಹಲವು ರಾಜಕಾರಣಿಗಳು ಆಪ್ತ ಗೆಳೆಯರಾಗಿದ್ದಾರೆ. ಇಂಥಹುದೇ ಪಕ್ಷ ಎಂದೆನದೆ ರಾಜ್ಯದ ಮೂರು ಪ್ರಮುಖ ಪಕ್ಷಗಳಲ್ಲಿಯೂ ಆತ್ಮೀಯರಿದ್ದಾರೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಬೇರೆ ಬೇರೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರವನ್ನೂ ಸಹ ದರ್ಶನ್ ಮಾಡಿದ್ದಾರೆ. ಇತ್ತೀಚೆಗಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ, ಕುಮಾರಸ್ವಾಮಿ ಎದುರಾಗಿ ಚುನಾವಣಾ ಪ್ರಚಾರ ಮಾಡಿದ್ದರು. ಅದಕ್ಕೆ ಮುನ್ನ ಬಿಜೆಪಿಯ ಪಿಸಿ ಮೋಹನ್, ಎಂ ಸತೀಶ್ ರೆಡ್ಡಿ, ಮಂಡ್ಯದಲ್ಲಿ ಸುಮಲತಾ, ದಾವಣಗೆರೆಯಲ್ಲಿ ಎಸ್ಎಸ್ ಮಲ್ಲಿಕಾರ್ಜುನ್ ಇನ್ನೂ ಕೆಲವರ ಪರವಾಗಿ ಈ ಹಿಂದೆ ದರ್ಶನ್ ಪ್ರಚಾರ ಮಾಡಿದ್ದರು.
ಚಿತ್ರದುರ್ಗದ ರೇಣುಕಾ ಸ್ವಾಮಿ, ದರ್ಶನ್ ಆಪ್ತೆ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಕಾರಣಕ್ಕೆ ರೇಣುಕಾ ಸ್ವಾಮಿಯನ್ನು ಜೂನ್ 8 ರಂದು ಚಿತ್ರದುರ್ಗದಿಂದ ಅಪಹರಣ ಮಾಡಿಸಿ ಬೆಂಗಳೂರಿನ ಹೊರವಲಯದ ಶೆಡ್ಗೆ ಕರೆತಂದು ಅಲ್ಲಿ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. ಶವವನ್ನು ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಸುಮನಹಳ್ಳಿ ದೊಡ್ಡ ಮೋರಿಯಲ್ಲಿ ಎಸೆದು ಪರಾರಿಯಾಗಿದ್ದಾರೆ ದರ್ಶನ್ ಆಪ್ತರು. ಹೆಣ ಪತ್ತೆಯಾದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ದರ್ಶನ್ ಹಸ್ತಕ್ಷೇಪ ಇದೆ ಎಂಬುದು ಪತ್ತೆಯಾಗಿದ್ದು ಇದೀಗ ದರ್ಶನ್ ಅನ್ನು ಬಂಧಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:59 pm, Tue, 11 June 24