ಕ್ಯಾಬ್​ ಡ್ರೈವರ್​ಗಳ ಕಥೆ ಹೇಳುವ ‘ಯೆಲ್ಲೋ ಬೋರ್ಡ್​’; ಕಿಚ್ಚ ಶುಭಕೋರಿದ ಈ ಸಿನಿಮಾದಲ್ಲಿ ಏನಿದೆ ವಿಶೇಷ?

| Updated By: ಮದನ್​ ಕುಮಾರ್​

Updated on: Aug 29, 2021 | 12:09 PM

ನಟ ಪ್ರದೀಪ್​ ಅವರು ಈ ಚಿತ್ರದ ಬಗ್ಗೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ‘ಟೈಗರ್​’ ಸಿನಿಮಾ ಬಳಿಕ ಹೊಸದೇನಾದರೂ ಮಾಡಬೇಕು ಎಂದುಕೊಂಡಾಗ ಅವರಿಗೆ ಸಿಕ್ಕಿದ್ದೇ ‘ಯೆಲ್ಲೋ ಬೋರ್ಡ್​’ ಪ್ರಾಜೆಕ್ಟ್​.

ಕ್ಯಾಬ್​ ಡ್ರೈವರ್​ಗಳ ಕಥೆ ಹೇಳುವ ‘ಯೆಲ್ಲೋ ಬೋರ್ಡ್​’; ಕಿಚ್ಚ ಶುಭಕೋರಿದ ಈ ಸಿನಿಮಾದಲ್ಲಿ ಏನಿದೆ ವಿಶೇಷ?
‘ಯೆಲ್ಲೋ ಬೋರ್ಡ್’ ಸಿನಿಮಾ ತಂಡ
Follow us on

‘ಯೆಲ್ಲೋ ಬೋರ್ಡ್​’ ಸಿನಿಮಾದ ಒಂದು ಟೀಸರ್​ ಮತ್ತು ಹಾಡು ಇತ್ತೀಚೆಗೆ ಬಿಡುಗಡೆ ಆಗಿದೆ. ಕಿಚ್ಚ ಸುದೀಪ್​ ಅವರು ಇಡೀ ತಂಡಕ್ಕೆ ಶುಭಕೋರಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಈ ಸಿನಿಮಾದಲ್ಲಿ ಕ್ಯಾಬ್​ ಡ್ರೈವರ್​ಗಳ ಕುರಿತಾಗಿ ಕಥೆ ಇರಲಿದೆ. ಕ್ಯಾಬ್​ ಡ್ರೈವರ್​ ಪಾತ್ರದಲ್ಲಿ ನಟ ಪ್ರದೀಪ್​ ಕಾಣಿಸಿಕೊಂಡಿದ್ದಾರೆ. ತ್ರಿಲೋಕ್​ ರೆಡ್ಡಿ ನಿರ್ದೇಶನ ಮಾಡಿದ್ದು, ವಿಂಟೇಜ್​ ಫಿಲ್ಮ್ಸ್​ ಬ್ಯಾನರ್​ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ. ಅದ್ವಿಕ್​ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ‘ಪ್ರೀತಿಯೇ..’ ಗೀತೆಗೆ ಜನಮೆಚ್ಚುಗೆ ಸಿಗುತ್ತಿದೆ. ಯೂಟ್ಯೂಬ್​ನಲ್ಲಿ​ 13 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿದ ‘ಯೆಲ್ಲೋ ಬೋರ್ಡ್​’ ಚಿತ್ರತಂಡ ಅನೇಕ ವಿಚಾರಗಳನ್ನು ಹಂಚಿಕೊಂಡಿತು.

ಅಹಲ್ಯಾ ಸುರೇಶ್​, ಸ್ನೇಹಾ, ಚಂದನಾ, ಭವಾನಿ ಪ್ರಕಾಶ್​ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಮೊದಲು ನಾನು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೆ. ಆಗ ಅನೇಕ ಕ್ಯಾಬ್​ ಡ್ರೈವರ್​ಗಳ ಜೊತೆ ಮಾತನಾಡಿದ್ದೆ. ಆ ಸಂದರ್ಭದಲ್ಲಿ ಆದ ಅನುಭವಗಳನ್ನು ಇಟ್ಟುಕೊಂಡು ಈ ಕಥೆ ಸಿದ್ಧವಾಯ್ತು. ಒಬ್ಬ ಕ್ಯಾಬ್​ ಚಾಲಕನ ಪ್ರೇಮಕಥೆ ನನಗೆ ಇಷ್ಟವಾಗಿ, ಅದು ಕೂಡ ಸ್ಫೂರ್ತಿ ಆಯಿತು. ಒಟ್ಟಾರೆ ಕ್ಯಾಬ್​​ ಡ್ರೈವರ್​ಗಳ ಜೀವನ ಹೇಗಿರುತ್ತದೆ? ಅವರ ಹೋರಾಟಗಳೇನು? ಅವರ ಮೇಲೆ ಆಗುತ್ತಿರುವ ದಬ್ಬಾಳಿಕೆಗಳೇನು ಎಂಬುದನ್ನೆಲ್ಲ ವಿಚಾರಿಸಿದಾಗ ಅವರಲ್ಲಿ ನನಗೆ ಒಬ್ಬ ಹೀರೋ ಕಾಣಿಸಿದ’ ಎನ್ನುವ ಮೂಲಕ ಕಥೆ ಬಗ್ಗೆ ವಿವರಣೆ ನೀಡಿದ್ದಾರೆ ನಿರ್ದೇಶಕ ತ್ರಿಲೋಕ್​ ರೆಡ್ಡಿ.

ನಟ ಪ್ರದೀಪ್​ ಅವರು ಈ ಚಿತ್ರದ ಬಗ್ಗೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ‘ಟೈಗರ್​’ ಸಿನಿಮಾ ಬಳಿಕ ಹೊಸದೇನಾದರೂ ಮಾಡಬೇಕು ಎಂದುಕೊಂಡಾಗ ಅವರಿಗೆ ಸಿಕ್ಕಿದ್ದೇ ‘ಯೆಲ್ಲೋ ಬೋರ್ಡ್​’ ಪ್ರಾಜೆಕ್ಟ್​. ‘ಈ ಸಿನಿಮಾದಲ್ಲಿ ಅನಗತ್ಯವಾಗಿ ಕಮರ್ಷಿಯಲ್​ ಅಂಶಗಳನ್ನು ತುರುಕಿಲ್ಲ. ಹೀರೋಯಿಸಂ, ಡೈಲಾಗ್​ಗಳೆಲ್ಲ ಕಥೆಗೆ ಪೂರಕವಾಗಿವೆ. ನಾನು ಪಕ್ಕಾ ಡ್ರೈವರ್​ ರೀತಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಅವರ ಹಾವ-ಭಾವವನ್ನು ಅರ್ಥಮಾಡಿಕೊಂಡು ನಟಿಸಿದ್ದೇನೆ. ಅದಕ್ಕಾಗಿ ತುಂಬ ದಿನಗಳ ಕಾಲ ಬೇಕಂತಲೇ ಕ್ಯಾಬ್​ನಲ್ಲಿ ಓಡಾಡಿ, ಡ್ರೈವರ್​ಗಳನ್ನು ಹತ್ತಿರದಿಂದ ಗಮನಿಸಿದೆ’ ಎಂದು ಪಾತ್ರಕ್ಕಾಗಿ ತಾವು ಮಾಡಿಕೊಂಡ ತಯಾರಿ ಬಗ್ಗೆ ಹೇಳಿಕೊಳ್ಳುತ್ತಾರೆ ಪ್ರದೀಪ್​. ಒಬ್ಬ ಡ್ರೈವರ್​ ಮನಸ್ಸು ಮಾಡಿದರೆ ಈ ಸಮಾಜವನ್ನು ಹೇಗೆ ಬದಲಾಯಿಸಬಹುದು ಎಂಬ ಕಾನ್ಸೆಪ್ಟ್​ ಈ ಚಿತ್ರದಲ್ಲಿದೆ ಎನ್ನುವ ಮೂಲಕ ಪ್ರದೀಪ್​ ಅವರು ಕಥೆಯ ಬಗ್ಗೆ ಕೌತುಕ ಮೂಡಿಸಿದ್ದಾರೆ.

‘ನಿನ್ನ ಗುಂಗಲ್ಲಿ..’ ಹಾಡು ಮಾಡಿ ಫೇಮಸ್​ ಆಗಿರುವ ಅದ್ವಿಕ್​ ಅವರು ‘ಯೆಲ್ಲೋ ಬೋರ್ಡ್​’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ‘ಪ್ರೀತಿಯೇ..’ ಗೀತೆ ಸೇರಿ ಒಟ್ಟು 7 ಹಾಡುಗಳು ಈ ಸಿನಿಮಾದಲ್ಲಿವೆ.

ಇದನ್ನೂ ಓದಿ:

ಕಿಚ್ಚ ಸುದೀಪ್​ ಕುಟುಂಬದಲ್ಲಿ ​ಮದುವೆ ಸಂಭ್ರಮ; ಇಲ್ಲಿವೆ ಕಲರ್​ಫುಲ್​ ಫ್ಯಾಮಿಲಿ ಫೋಟೋಗಳು

ಸುದೀಪ್​ ಮುಂದಿನ ಸಿನಿಮಾ ಯಾವುದು? ಫೋಟೋ ಮೂಲಕ ಸುಳಿವು ನೀಡಿದ ಕಾಲಿವುಡ್​ ನಿರ್ದೇಶಕ